ಗೋಲು ದಾಖಲಾಗುವುದಕ್ಕೆ ಮುನ್ನ ಈಜಿಪ್ಟ್ನ ಮರ್ವನ್ ಅಟೆಯ, ಅರ್ಜೆಂಟೀನಾದ ಲಿಸಾಂಡ್ರೊ ಮಾರ್ಟಿನೆಜ್ ಕಾಲು ತುಳಿದು ಫೌಲ್ ಮಾಡಿದ್ದಾರೆಂದು ವಿಎಆರ್ ಪರಿಶೀಲನೆಯಲ್ಲಿ ರೆಫ್ರಿ ನಿರ್ಧರಿಸಿ ಗೋಲು ಅಮಾನ್ಯಗೊಳಿಸಿದ್ದರು. "ಫ್ರಾನ್ಸ್ ರೆಫ್ರಿ ಲೆಟೆಕ್ಸಿಯರ್ ಮತ್ತು ಅವರ ರೆಫ್ರಿ ತಂಡ ಮಾಡಿದ ಗಂಭೀರ ತಪ್ಪುಗಳು ಮತ್ತು ಅನುಸರಿಸಿದ ದ್ವಂದ್ವ ನೀತಿಗಳಿಂದಲೇ ಈಜಿಪ್ಟ್ ತಂಡ ವಿಶ್ವಕಪ್ನಿಂದ ಹೊರಬಿದ್ದಿದೆ' ಎಂದು ಈಜಿಪ್ಟ್ ಫುಟ್ಬಾಲ್ ಒಕ್ಕೂಟ ದೂರಿದೆ. ಇದಕ್ಕೆ ಮುನ್ನ ಈಜಿಪ್ಟ್ ಕೋಚ್ ಹೊಸಮ್ ಹಸನ್ ಕೂಡ ಪಂದ್ಯ ಮುಗಿದ ಬೆನ್ನಲ್ಲೇ, "ನಾವು ಹಾರ್ಡ್ ಲಕ್ನಿಂದ ಸೋತಿಲ್ಲ. ನಮಗೆ ಮೋಸ ಮಾಡಲಾಗಿದೆ. ನಾವು ಅನ್ಯಾಯದಿಂದಾಗಿ ಸೋತಿದ್ದೇವೆ. ಹಾಲಿ ಚಾಂಪಿಯನ್ ತಂಡವನ್ನು, ಅದರಲ್ಲೂ ಮುಖ್ಯವಾಗಿ ಮೆಸ್ಸಿಯನ್ನು ಟೂರ್ನಿಯಲ್ಲಿ ಉಳಿಸಿಕೊಳ್ಳಲು ರೆಫ್ರಿ ಕಾರ್ಯನಿರ್ವಹಿಸಿದಂತಿತ್ತು' ಎಂದು ಆಕ್ರೋಶ ವ್ಯಕ್ತಪಡಿಸಿದ್ದರು.
ಎಂಜೊ ಗೆಲುವಿನ ಗೋಲು ಸಿಡಿಸುವುದಕ್ಕೆ ಮುನ್ನ ಅರ್ಜೆಂಟೀನಾ ಆಟಗಾರರು, ನಾಯಕ ಮೊಹಮದ್ ಸಲಾಹ್ಗೆ ಮಾಡಿದ ಫೌಲ್ನಿಂದ ನಮಗೆ ಪೆನಾಲ್ಟಿ ಕಿಕ್ ನೀಡಬೇಕಾಗಿತ್ತು ಎಂಬುದು ಕೂಡ ಈಜಿಪ್ಟ್ ವಾದವಾಗಿದೆ. ಪಂದ್ಯದ ನಡುವೆ ಹಸನ್ ಮತ್ತು ಅವರ ತರಬೇತಿ ಬಳಗ, ರೆಫ್ರಿ ಜತೆಗೆ ವಾಗ್ವಾದವನ್ನೂ ನಡೆಸಿತು. ಅಲ್ಲದೆ, "ಜನಾಂಗೀಯ ನಿಂದನೆ ನಿಗ್ರಹ' ಸನ್ನೆ ಪ್ರದರ್ಶಿಸಿದ್ದಕ್ಕಾಗಿ ಹಸನ್ ರೆಫ್ರಿಯಿಂದ ಹಳದಿ ಕಾರ್ಡ್ ಕೂಡ ಪಡೆದರು. ಬಳಿಕ ಹಸನ್ ತಂಡದ ಸದಸ್ಯರೊಬ್ಬರಿಗೆ ಕೆಂಪು ಕಾರ್ಡ್ ಕೂಡ ನೀಡಲಾಯಿತು. ಪಂದ್ಯದಲ್ಲಿ ಈಜಿಪ್ಟ್ಗೆ 5 ಹಳದಿ ಕಾರ್ಡ್ ನೀಡಿದರೆ, ಅರ್ಜೆಂಟೀನಾ ಒಂದೂ ಕಾರ್ಡ್ ಪಡೆಯಲಿಲ್ಲ.