FIFA WorldCup: ಯುಸ್ಟಾಕ್ವಿಯೊ ಗೆಲುವಿನ ಗೋಲು; ಪ್ರಿ ಕ್ವಾರ್ಟರ್​ಫೈನಲ್​ಗೆ ಲಗ್ಗೆಯಿಟ್ಟ ಕೆನಡಾ

FIFA WorldCup: ಯುಸ್ಟಾಕ್ವಿಯೊ ಗೆಲುವಿನ ಗೋಲು; ಪ್ರಿ ಕ್ವಾರ್ಟರ್​ಫೈನಲ್​ಗೆ ಲಗ್ಗೆಯಿಟ್ಟ ಕೆನಡಾ
FIFA WorldCup: ಯುಸ್ಟಾಕ್ವಿಯೊ ಗೆಲುವಿನ ಗೋಲು; ಪ್ರಿ ಕ್ವಾರ್ಟರ್​ಫೈನಲ್​ಗೆ ಲಗ್ಗೆಯಿಟ್ಟ ಕೆನಡಾ
Published on
ಲಾಸ್​ ಏಂಜಲೀಸ್​: ಮಿಡ್​ಫೀಲ್ಡರ್​ ಸ್ಟೀನ್​ ಯುಸ್ಟಾಕ್ವಿಯೊ (90+2ನೇ ನಿಮಿಷ) ಇಂಜುರಿ ಸಮಯದ 2ನೇ ನಿಮಿಷದಲ್ಲಿ ಬಾರಿಸಿದ ಆಕರ್ಷಕ ಗೋಲಿನ ಬಲದಿಂದ ಸಹ-ಆತಿಥೇಯ ಕೆನಡಾ ತಂಡ ಫಿಫಾ ವಿಶ್ವಕಪ್ (FIFA WorldCup)​ 23ನೇ ಆವೃತ್ತಿಯಲ್ಲಿ ಮೊದಲ ತಂಡವಾಗಿ ಪ್ರಿ ಕ್ವಾರ್ಟರ್​ಫೈನಲ್​ ಪ್ರವೇಶಿಸಿದೆ. ಭಾರತೀಯ ಕಾಲಮಾನ ಪ್ರಕಾರ ಭಾನುವಾರ ರಾತ್ರಿ ನಡೆದ 32ರ ಘಟ್ಟದ ಮೊದಲ ಪಂದ್ಯದಲ್ಲಿ ಕೆನಡಾ ತಂಡ, ದಕ್ಷಿಣ ಆಫ್ರಿಕಾ ವಿರುದ್ಧ 1-0 ಅಂತರದಿಂದ ರೋಚಕ ಗೆಲುವು ದಾಖಲಿಸಿತು. ಕೆನಡಾಗೆ ಫಿಫಾ ವಿಶ್ವಕಪ್​ ನಾಕೌಟ್​ ಹಂತದಲ್ಲಿ ಇದು ಮೊಟ್ಟಮೊದಲ ಗೆಲುವಾಗಿದೆ.

ಸೋಫಿ ಸ್ಟೇಡಿಯಂನಲ್ಲಿ ಬಹುತೇಕ ಗೋಲು ರಹಿತವಾಗಿ ಸಾಗಿದ ಪಂದ್ಯ ಹೆಚ್ಚುವರಿ ಸಮಯಕ್ಕೆ ವಿಸ್ತರಿಸಲ್ಪಡುವ ಲಕ್ಷಣ ಕಾಣಿಸಿದಾಗ 29 ವರ್ಷದ ಯುಸ್ಟಾಕಿಯೊ, ಅಲಿಸ್ಟೆರ್​ ಜಾನ್​ಸ್ಟನ್​ ನೀಡಿದ ಲಾಂಗ್​ ಪಾಸ್​ನಲ್ಲಿ ಪೆನಾಲ್ಟಿ ಪ್ರದೇಶದಿಂದ ಒದ್ದ ಚೆಂಡು ದಣ ಆಫ್ರಿಕಾದ ಗೋಲು ಕೀಪರ್​ ಹಾಗೂ ನಾಯಕ ರೊನ್ವೆನ್​ ವಿಲಿಯಮ್ಸ್​ರನ್ನು ವಂಚಿಸಿ ಗೋಲು ಪೆಟ್ಟಿಗೆ ಸೇರಿತು. ಇದರಿಂದ ದ. ಆಫ್ರಿಕಾದ ಡಿಫೆಂಡರ್​ಗಳು ಅದುವರೆಗೆ ನಿರ್ಮಿಸಿದ್ದ ರಕ್ಷಣಾ ಕೋಟೆ ಛಿದ್ರಗೊಂಡಿತು. ಮತ್ತೊಂದೆಡೆ ಕೆನಡಾ ಕೂಡ ಪಂದ್ಯದುದ್ದಕ್ಕೂ ಬಲಿಷ್ಠ ಗೋಡೆ ನಿರ್ಮಿಸಿ ದಣ ಆಫ್ರಿಕಾವನ್ನು ಸತಾಯಿಸಿತು.

ವಿಶ್ವ ನಂ. 30 ಕೆನಡಾ ತಂಡ ಜುಲೈ 4ರಂದು ಹ್ಯೂಸ್ಟನ್​ನಲ್ಲಿ ನಡೆಯಲಿರುವ 16ರ ಟ್ಟದ ಪಂದ್ಯದಲ್ಲಿ ನೆದರ್ಲ್ಯಾಂಡ್ಸ್​ ಅಥವಾ ಮೊರಾಕ್ಕೊ ವಿರುದ್ಧ ಸೆಣಸಲಿದೆ.

ಪಂದ್ಯದ ಅಂತಿಮ ಸೀಟಿ ಮೊಳಗುತ್ತಿದ್ದಂತೆ ಕೆನಡಾ ಆಟಗಾರರನ್ನು ಒಗ್ಗೂಡಿಸಿದ ಕೋಚ್​ ಜೆಸ್ಸಿ ಮಾರ್ಷ್​, "ನೀವೇ ಕೆನಡಾದ ಹೀರೋಗಳು' ಎಂದು ಉದ್ಘೋಷ ಮಾಡಿ ಸಂಭ್ರಮಿಸಿದರು. ಗೆಲುವಿನ ರೂವಾರಿ ಯುಸ್ಟಾಕ್ವಿಯೊ ಕ್ಲಬ್​ ಫುಟ್​ಬಾಲ್​ನಲ್ಲಿ ಲಾಸ್​ ಏಂಜಲೀಸ್​ ಎಫ್​​ಸಿ ಆಟಗಾರರಾಗಿರುವುದರಿಂದ ಸ್ಥಳಿಯರ ಪ್ರೀತಿಯನ್ನೂ ಪಡೆದರು.
ರೊನ್ವೆನ್​ ವಿಲಿಯಮ್ಸ್​ ಕೆನಡಾಗೆ ಗೆಲುವಿನ ಗೋಲು ಬಿಟ್ಟುಕೊಡುವ ಮುನ್ನ 5 ಗೋಲುಗಳನ್ನು ತಡೆದಿದ್ದರು. ಈ ಮೂಲಕ ಪಂದ್ಯ ಅಂತಿಮ ಕ್ಷಣದವರೆಗೂ ಕುತೂಹಲ ಉಳಿಸಿಕೊಳ್ಳುವಂತೆ ಮಾಡಿದರು.

"ಬಫಾನಾ ಬಫಾನಾ' ಖ್ಯಾತಿಯ ದ. ಆಫ್ರಿಕಾ ಪಂದ್ಯದ 6ನೇ ನಿಮಿಷದಲ್ಲಷ್ಟೇ ಗೋಲು ಗಳಿಸುವ ಅವಕಾಶ ಪಡೆದಿತ್ತು. ಉಳಿದಂತೆ ಬಹುತೇಕ ರಕ್ಷಣಾ ಕಾರ್ಯತಂತ್ರವನ್ನೇ ಅನುಸರಿಸಿತು. ಮೊದಲ ಬಾರಿ ನಾಕೌಟ್​ ಪ್ರವೇಶಿಸಿದ ಸಂಭ್ರಮಕ್ಕಷ್ಟೇ ದ. ಆಫ್ರಿಕಾ ತೃಪ್ತಿಪಟ್ಟಿತು. ಕೆನಡಾದ ಸ್ಟಾರ್​ ಡಿಫೆಂಡರ್​ ಅಲ್ಫೋನ್ಸೊ ಡೇವಿಸ್​ ಪಂದ್ಯದ 75ನೇ ನಿಮಿಷದಲ್ಲಿ ಟೂರ್ನಿಯಲ್ಲಿ ಮೊದಲ ಬಾರಿ ಕಣಕ್ಕಿಳಿದರು. ಅವರು ಗಾಯದಿಂದಾಗಿ ಲೀಗ್​ ಪಂದ್ಯಗಳನ್ನು ತಪ್ಪಿಸಿಕೊಂಡಿದ್ದರು.
*ಫುಟ್​ಬಾಲ್​ ಆಟಕ್ಕಿನ್ನು ಕೆನಡಾದಲ್ಲಿ ಉಜ್ವಲ ಭವಿಷ್ಯವಿದೆ. ಪಂದ್ಯದಲ್ಲಿ ಮೊದಲೇ ಸಿಕ್ಕ ಕೆಲ ಅವಕಾಶಗಳನ್ನು ಬಳಸಿಕೊಂಡಿದ್ದರೆ ನಮಗೆ ಸುಲಭವಾಗಿ ಗೆಲುವು ಒಲಿಯುತಿತ್ತು. ಆದರೆ ಕೊನೆಗೂ ಗೆಲುವು ಬಂದ ಕ್ಷಣ, ನಮ್ಮ ಗೆಲುವನ್ನು ಅತ್ಯಂತ ನಾಟಕೀಯಗೊಳಿಸಿತು. ಈ ಗೆಲುವು ಭವಿಷ್ಯದ ತಲೆಮಾರಿಗೆ ಸ್ಫೂರ್ತಿ ತುಂಬಲಿದೆ.
| ಜೆಸ್ಸಿ ಮಾರ್ಷ್​, ಕೆನಡಾ ಕೋಚ್​
ದ. ಆಫ್ರಿಕಾ: 0
ಕೆನಡಾ: 1
*ಸ್ಟೀನ್​ ಯುಸ್ಟಾಕ್ವಿಯೊ (90+2ನೇ ನಿಮಿಷ)
*12: ಕೆನಡಾ ಕಳೆದ 12 ವರ್ಷಗಳಲ್ಲಿ ವಿಶ್ವಕಪ್​ ನಾಕೌಟ್​ ಪಂದ್ಯ ಗೆದ್ದ ಮೊದಲ ಉತ್ತರ ಅಮೆರಿಕದ ತಂಡವೆನಿಸಿತು. 2014ರಲ್ಲಿ ಕೊನೆಯದಾಗಿ ಕೋಸ್ಟಾರಿಕಾ ಈ ಸಾಧನೆ ಮಾಡಿತ್ತು.
*74: ದ. ಆಫ್ರಿಕಾದ ಹುಗೋ ಬ್ರೂಸ್​ (74 ವರ್ಷ, 79 ದಿನ) ಫಿಫಾ ವಿಶ್ವಕಪ್​ ನಾಕೌಟ್​ನಲ್ಲಿ ಕಾರ್ಯನಿರ್ವಹಿಸಿದ ಅತ್ಯಂತ ಹಿರಿಯ ಕೋಚ್​ ಎನಿಸಿದರು. ಉರುಗ್ವೆಯ ಆಸ್ಕರ್​ ತಬರೇಜ್​ (71 ವರ್ಷ) 2018ರಲ್ಲಿ ಹಿಂದಿನ ಹಿರಿಯ ಕೋಚ್​ ಎನಿಸಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net