ಮೊಹಮ್ಮದನ್ ಎಸ್‌ಸಿ ವಿರುದ್ಧ ಜಯ ಸಾಧಿಸಿದ ಬೆಂಗಳೂರು ಎಫ್​ಸಿ

ಬೆಂಗಳೂರು ಎಫ್ ಸಿ
ಬೆಂಗಳೂರು ಎಫ್ ಸಿ
Published on
ಬೆಂಗಳೂರು: ಮೊಹಮ್ಮದನ್ ಎಸ್‌ಸಿ ವಿರುದ್ಧ ಕಣಕ್ಕಿಳಿದ ಬೆಂಗಳೂರ ಎಫ್‌ಸಿ ಮತ್ತೆ ಗೆಲುವಿನ ಹಾದಿಗೆ ಮರಳುವ ಉದ್ದೇಶದಿಂದ ಮೈದಾನಕ್ಕಿಳಿದಿತ್ತು. ಮುಖ್ಯ ಕೋಚ್ ರೆನೇಡಿ ಸಿಂಗ್ ತಮ್ಮ ಪ್ರಾರಂಭಿಕ ತಂಡದಲ್ಲಿ ಮೂರು ಬದಲಾವಣೆಗಳನ್ನು ಮಾಡಿದರು. ಸುನಿಲ್ ಛೇಟ್ರಿ ಮತ್ತು ಸಿರೋಜ್ ಕುಜಿಯೆವ್ ಈ ಸೀಸನ್‌ನ ತಮ್ಮ ಮೊದಲ ಸ್ಟಾರ್ಟ್ ಪಡೆದರೆ, ಗಾಯದ ಕಾರಣದಿಂದ ಕಳೆದ ಎರಡು ಪಂದ್ಯಗಳಲ್ಲಿ ಆಡಿರದ ರಾಹುಲ್ ಭೇಕೆ ಕೂಡ ತಂಡಕ್ಕೆ ಮರಳಿದರು.
ಪಂದ್ಯದ ಆರಂಭಿಕ ಕ್ಷಣಗಳಲ್ಲಿ ಬೆಂಗಳೂರ ಎಫ್‌ಸಿ ಕಾರ್ನರ್‌ಗಳು ಮತ್ತು ಕ್ರಾಸ್‌ಗಳ ಮೂಲಕ ಪ್ರಭಾವ ಬೀರುತ್ತಿತ್ತು.
ಕೊನೆಗೂ 22ನೇ ನಿಮಿಷದಲ್ಲಿ ಮೊದಲ ಗೋಲು ಸಿಕ್ಕಿತು. ಸಿರೋಜ್ ಕುಜಿಯೆವ್ ನೀಡಿದ ಸುಂದರ ಕಾರ್ನರ್ ಅನ್ನು ಸುನಿಲ್
ಛೇಟ್ರಿ ತಲೆಯಿಂದ ಫ್ಲಿಕ್ ಮಾಡಿದರು. ಅದನ್ನು ಸದುಪಯೋಗಪಡಿಸಿಕೊಂಡ ರಯಾನ್ ವಿಲಿಯಮ್ಸ್ ಸಮೀಪದ ದೂರದಿಂದ
ಗೋಲು ಹೊಡೆದು ಈ ಸೀಸನ್‌ನ ತಮ್ಮ ಮೊದಲ ಗೋಲು ದಾಖಲಿಸಿದರು.
ಇದಾದ ಬಳಿಕವೂ ಬೆಂಗಳೂರು ಎಫ್‌ಸಿ ದಾಳಿಯನ್ನು ಮುಂದುವರಿಸಿತು. ಸುಮಾರು 20 ನಿಮಿಷಗಳ ನಂತರ ಆಶಿಕ್
ಕುರುನಿಯನ್ ಅದ್ಭುತ ದೀರ್ಘದೂರದ ಶಾಟ್ ಮೂಲಕ ಮತ್ತೊಂದು ಗೋಲು ಬಾರಿಸಿದರು. ಅವರ ಬಲವಾದ ಶಾಟ್
ಮೊಹಮ್ಮಡನ್ ಎಸ್‌ಸಿ ಗೋಲ್ ಕೀಪರ್ ಛೇಟ್ರಿ ಯನ್ನು ಮೀರಿಸಿ ಜಾಲಕ್ಕೆ ಸೇರಿತು. ಬಾಲ್ ಮೇಲಿನ ನಿಯಂತ್ರಣ ಮತ್ತು
ಉತ್ತಮ ಅವಕಾಶಗಳನ್ನು ಸೃಷ್ಟಿಸಿದ ಬೆಂಗಳೂರ ಎಫ್‌ಸಿ, ಕೆಬಿಕೆ ಮೈದಾನದಲ್ಲಿ ಮೊದಲಾರ್ಧವನ್ನು 2-0
ಮುನ್ನಡೆಯೊಂದಿಗೆ ಮುಗಿಸಿತು.
ದ್ವಿತೀಯಾರ್ಧದಲ್ಲಿ ಮೊಹಮ್ಮದನ್ ಎಸ್‌ಸಿ ಪರವಾಗಿ 51ನೇ ನಿಮಿಷದಲ್ಲಿ ಮಹಿತೋಷ್ ಅವರ ವಾಲಿ ಶಾಟ್ ಮೂಲಕ
ಒಂದು ಗೋಲು ಹಿಂದಕ್ಕೆ ಪಡೆದುಕೊಂಡಿತು. 66ನೇ ನಿಮಿಷದಲ್ಲಿ ಲಾಲ್ತಾಂಖಿಮಾ ಅವರ ಕರ್‌ಲಿಂಗ್ ಶಾಟ್ ಕ್ರಾಸ್‌ಬಾರ್‌ಗೆ
ತಾಕಿ ಹೊರಬಂದಿತು. ಪಂದ್ಯದ ಕೊನೆಯ ಕ್ಷಣಗಳಲ್ಲಿ ಸಮಬಲಕ್ಕಾಗಿ ಮೊಹಮ್ಮದನ್ ಎಸ್‌ಸಿ ಸತತ ದಾಳಿ ನಡೆಸಿತು. ಲಾಂಗ್ ಥ್ರೋ-ಇನ್ ನಂತರದ ಗೊಂದಲದ ನಡುವೆ ಅವರು ಗೋಲು ಬಾರಿಸಿದಂತೆ ಕಂಡರೂ, ಅದಕ್ಕೂ ಮುನ್ನ ಗುರ್‌ಪ್ರೀತ್ ಸಿಂಗ್ ಸಂಧು ಅವರ ಮೇಲೆ ಫೌಲ್ ಮಾಡಿದ್ದರಿಂದ ಆ ಗೋಲನ್ನು ನಿರಾಕರಿಸಲಾಯಿತು. ಅಂತಿಮವಾಗಿ ಬೆಂಗಳೂರು ಎಫ್‌ಸಿ 2-1 ಅಂತರದಲ್ಲಿ
ಜಯಗಳಿಸಿತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net