FIFA WorldCup: ಇಂದು ಕ್ವಾರ್ಟರ್​ಫೈನಲ್​ನಲ್ಲಿ ಸ್ಪೇನ್​-ಬೆಲ್ಜಿಯಂ ಮುಖಾಮುಖಿ

FIFA WorldCup: ಇಂದು ಕ್ವಾರ್ಟರ್​ಫೈನಲ್​ನಲ್ಲಿ ಸ್ಪೇನ್​-ಬೆಲ್ಜಿಯಂ ಮುಖಾಮುಖಿ
FIFA WorldCup: ಇಂದು ಕ್ವಾರ್ಟರ್​ಫೈನಲ್​ನಲ್ಲಿ ಸ್ಪೇನ್​-ಬೆಲ್ಜಿಯಂ ಮುಖಾಮುಖಿ
Published on
ಲಾಸ್​ ಏಂಜಲೀಸ್​: ಎದುರಾಳಿಗೆ ಒಂದೂ ಗೋಲು ಬಿಟ್ಟುಕೊಡದೆ ಮುನ್ನುಗ್ಗುತ್ತಿರುವ ಯುರೋಕಪ್​ ಚಾಂಪಿಯನ್​ ಸ್ಪೇನ್​ ಮತ್ತು ಟೂರ್ನಿಯ ಆರಂಭಿಕ 2 ಪಂದ್ಯಗಳಲ್ಲಿ ಡ್ರಾಕ್ಕೆ ತೃಪ್ತಿಪಟ್ಟ ಬಳಿಕ ಸತತ 3 ಜಯದೊಂದಿಗೆ ಬೀಗುತ್ತಿರುವ ಬೆಲ್ಜಿಯಂ ತಂಡಗಳು ಫಿಫಾ ವಿಶ್ವಕಪ್ (FIFA WorldCup)​ 23ನೇ ಆವೃತ್ತಿಯ ಕ್ವಾರ್ಟರ್​ಫೈನಲ್​ನಲ್ಲಿ ಶುಕ್ರವಾರ ರಾತ್ರಿ ಮುಖಾಮುಖಿ ಆಗಲಿವೆ. ಲಾ ರೋಜಾ ಖ್ಯಾತಿಯ ಸ್ಪೇನ್​ 2010ರಲ್ಲಿ ವಿಶ್ವಕಪ್​ ಗೆದ್ದ ಬಳಿಕ ಮೊದಲ ಬಾರಿ ಉಪಾಂತ್ಯಕ್ಕೇರುವ ಹಂಬಲದಲ್ಲಿದ್ದರೆ, ರೆಡ್​ ಡೆವಿಲ್ಸ್​ ಖ್ಯಾತಿಯ ಬೆಲ್ಜಿಯಂ 2018ರ ಬಳಿಕ ಮತ್ತೊಮ್ಮೆ ಸೆಮಿಫೈನಲ್​ ಕನಸಿನಲ್ಲಿದೆ.
ಲೂಯಿಸ್​ ಡೆ ಲಾ ಫ್ಯುಯೆಂಟೆ ತರಬೇತಿಯ ಸ್ಪೇನ್​ ತಂಡ 16ರ ಘಟ್ಟದಲ್ಲಿ ಪೋರ್ಚುಗಲ್​ ತಂಡದ ಕನಸು ಭಗ್ನಗೊಳಿಸಿದ್ದರೆ, ಬೆಲ್ಜಿಯಂ ತಂಡ ಸಹ-ಆತಿಥೇಯ ಅಮೆರಿಕನ್ನರನ್ನು ಟೂರ್ನಿಯಿಂದ ಹೊರದಬ್ಬಿತ್ತು. ಇದುವರೆಗೆ 4 ಗೋಲು ಸಿಡಿಸಿರುವ ಮೈಕೆಲ್​ ಒಯರ್ಜಾಬಲ್​, ಯುವತಾರೆ ಲ್ಯಾಮಿನ್​ ಯಮಲ್​ ಜತೆಗೆ ಪೆಡ್ರಿ, ಅನುಭವಿ ಮಿಡ್​ಫೀಲ್ಡರ್​ ರೋಡ್ರಿ, ಮೈಕೆಲ್​ ಮೆರಿನೊ ಸ್ಪೇನ್​ನ ಪ್ರಮುಖ ಶಕ್ತಿಯಾಗಿದ್ದಾರೆ.

ರುಡಿ ಗಾರ್ಸಿಯಾ ಮಾರ್ಗದರ್ಶನದ ಬೆಲ್ಜಿಯಂಗೆ ಸ್ಟಾರ್​ ಆಟಗಾರರಾದ ಕೆವಿನ್​ ಡಿ ಬ್ರುಯ್ನ್​, ರೊಮೆಲು ಲುಕಾಕು (3 ಗೋಲು), ತಲಾ 2 ಗೋಲು ಸಿಡಿಸಿರುವ ಚಾರ್ಲ್ಸ್​ ಡಿ ಕೆಟೆಲೇರ್​, ಯೂರಿ ಟೈಲೆಮನ್ಸ್​, ಲಿಯಾಂಡ್ರೊ ಟ್ರಾಸಾರ್ಡ್​ ಬಲವಿದೆ.
*2: ಸ್ಪೇನ್​-ಬೆಲ್ಜಿಯಂ ತಂಡಗಳು ವಿಶ್ವಕಪ್​ನಲ್ಲಿ ಈ ಹಿಂದೆ 2 ಬಾರಿ ಮುಖಾಮುಖಿ ಆಗಿದ್ದು, ತಲಾ ಒಂದರಲ್ಲಿ ಗೆದ್ದಿವೆ. 1986ರ ಕ್ವಾರ್ಟರ್​ೈನಲ್​ನಲ್ಲಿ ಬೆಲ್ಜಿಯಂ ಗೆದ್ದಿದ್ದರೆ, 1990ರ ಲೀಗ್​ ಹಂತದ ಪಂದ್ಯದಲ್ಲಿ ಸ್ಪೇನ್​ ಜಯಿಸಿತ್ತು.
ಬ್ರೆಜಿಲ್​, ಜರ್ಮನಿ ಇಲ್ಲದ ಮೊದಲ ಅಂತಿಮ 8ರ ಘಟ್ಟ
ಫಿಫಾ ವಿಶ್ವಕಪ್​ ಇತಿಹಾಸದಲ್ಲಿ 5 ಬಾರಿಯ ಚಾಂಪಿಯನ್​ ಬ್ರೆಜಿಲ್​ ಮತ್ತು 4 ಬಾರಿಯ ಚಾಂಪಿಯನ್​ ಜರ್ಮನಿ ತಂಡಗಳೆರಡೂ ಇಲ್ಲದ ಮೊದಲ ಅಂತಿಮ ಎಂಟರ ಘಟ್ಟ ಇದಾಗಿದೆ. ಕ್ವಾರ್ಟರ್​ಫೈನಲ್​ ಇದ್ದ 17 ಆವೃತ್ತಿಗಳ ಪೈಕಿ 10ರಲ್ಲಿ ಇವೆರಡೂ ತಂಡಗಳು ಭಾಗವಹಿಸಿದ ಇತಿಹಾಸವಿದೆ. ಉಳಿದಂತೆ ಜರ್ಮನಿ ಈ ಹಿಂದೆ 1938, 1950, 2018 ಮತ್ತು 2022ರಲ್ಲೂ ಕ್ವಾರ್ಟರ್​ಫೈನಲ್​ ತಪ್ಪಿಸಿಕೊಂಡಿದ್ದರೆ, ಬ್ರೆಜಿಲ್​ 1934, 1966, 1990ರಲ್ಲಿ 8ರ ಘಟ್ಟದಿಂದ ಹೊರಗುಳಿದಿತ್ತು.
ಈ ಸಲವೂ 2022ರ 4 ತಂಡಗಳಿವೆ!
2022ರಲ್ಲಿ ಕತಾರ್​ನಲ್ಲಿ ನಡೆದ ವಿಶ್ವಕಪ್​ನಲ್ಲಿ 8ರ ಟ್ಟದಲ್ಲಿ ಆಡಿದ್ದ 4 ತಂಡಗಳು (ಅರ್ಜೆಂಟೀನಾ, ಇಂಗ್ಲೆಂಡ್​, ಫ್ರಾನ್ಸ್​, ಮೊರಾಕ್ಕೊ) ಈ ಬಾರಿಯೂ ಅರ್ಹತೆ ಪಡೆದಿವೆ. ಈ 4 ತಂಡಗಳ ಪೈಕಿ ಆಗ ಇಂಗ್ಲೆಂಡ್​ ಮಾತ್ರ ಕ್ವಾರ್ಟರ್ ಫೈನಲ್​ನಲ್ಲೇ ಹೊರಬಿದ್ದಿತ್ತು. ಅರ್ಜೆಂಟೀನಾ-ಫ್ರಾನ್ಸ್​ ಆಗ ಫೈನಲ್​ವರೆಗೂ ಹೋಗಿತ್ತು. ಈ ಹಿಂದೆ 1986 ಮತ್ತು 1990ರಲ್ಲಿ ಮಾತ್ರ ಒಂದೇ ಎದುರಾಳಿಗಳು (ಜರ್ಮನಿ&ಅರ್ಜೆಂಟೀನಾ) ಸತತ 2 ಫೈನಲ್​ಗಳಲ್ಲಿ ಮುಖಾಮುಖಿ ಆಗಿದ್ದವು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net