FIFA WorldCup: ರೆಡ್​ ಡೆವಿಲ್ಸ್​ ಎದುರು ಅಮೆರಿಕನ್ನರ ಕನಸು ಭಗ್ನ

FIFA WorldCup: ರೆಡ್​ ಡೆವಿಲ್ಸ್​ ಎದುರು ಅಮೆರಿಕನ್ನರ ಕನಸು ಭಗ್ನ
FIFA WorldCup: ರೆಡ್​ ಡೆವಿಲ್ಸ್​ ಎದುರು ಅಮೆರಿಕನ್ನರ ಕನಸು ಭಗ್ನ
Published on
ಸಿಯಾಟಲ್​: ಚಾರ್ಲ್ಸ್​ ಡಿ ಕೆಟೆಲೇರ್​ (9, 33ನೇ ನಿಮಿಷ) ದಾಖಲಿಸಿದ ಅವಳಿ ಗೋಲು ಮತ್ತು ಇನ್ನೊಂದು ಗೋಲಿಗೆ ನೆರವಾದ ಸಾಧನೆಯಿಂದ ರೆಡ್​ ಡೆವಿಲ್ಸ್​ ಖ್ಯಾತಿಯ ಬೆಲ್ಜಿಯಂ ತಂಡ ಫಿಫಾ ವಿಶ್ವಕಪ್ (FIFA WorldCup)​ 23ನೇ ಆವೃತ್ತಿಯಲ್ಲಿ ಸಹ-ಆತಿಥೇಯ ಅಮೆರಿಕ ತಂಡಕ್ಕೆ 4-1ರಿಂದ ಸೋಲುಣಿಸಿ, ತವರು ನೆಲದ ಕನಸಿನ ಓಟಕ್ಕೆ ತೆರೆ ಎಳೆಯಿತು. ಇದರೊಂದಿಗೆ ಬೆಲ್ಜಿಯಂ 2018ರ ಬಳಿಕ ಮತ್ತೊಮ್ಮೆ ಕ್ವಾರ್ಟರ್​ಫೈನಲ್​ ಹಂತಕ್ಕೇರಿದರೆ, ಅಮೆರಿಕ ಸತತ 4ನೇ ಬಾರಿ 16ರ ಘಟ್ಟದಲ್ಲೇ ಗೇಟ್​ಪಾಸ್​ ಪಡೆಯಿತು. ಕಳೆದ ಪಂದ್ಯದಲ್ಲಿ ರೆಡ್​ ಕಾರ್ಡ್​ ಪಡೆದ ನಡುವೆಯೂ ಕಣಕ್ಕಿಳಿದ ಫೋಲಾರಿನ್​ ಬಾಲೋಗುನ್​ ಅಮೆರಿಕನ್ನರಿಗೆ ಯಾವುದೇ ರೀತಿಯಲ್ಲಿ ನೆರವಾಗಲಿಲ್ಲ. ಪ್ರಮುಖವಾಗಿ ರಕ್ಷಣಾ ವಿಭಾಗದ ವೈಫಲ್ಯ ಆತಿಥೇಯರ ಕನಸು ಭಗ್ನಗೊಳಿಸಿತು.
ಭಾರತೀಯ ಕಾಲಮಾನ ಪ್ರಕಾರ ಮಂಗಳವಾರ ಬೆಳಗ್ಗೆ ನಡೆದ ಪಂದ್ಯದಲ್ಲಿ ಕೆಟೆಲೇರ್​ 9ನೇ ನಿಮಿಷದಲ್ಲೇ ಗೋಲು ಬಾರಿಸಿ ಬೆಲ್ಜಿಯಂಗೆ ಮುನ್ನಡೆ ಒದಗಿಸಿದರೆ, ಮಲಿಕ್​ ಟಿಲ್ಮನ್​ 31ನೇ ನಿಮಿಷದಲ್ಲಿ ಫ್ರೀಕಿಕ್​ ಗೋಲಿನೊಂದಿಗೆ ಅಮೆರಿಕಕ್ಕೆ ಸಮಬಲ ನೀಡಿದರು. ಆದರೆ 61 ಸೆಕೆಂಡ್​ಗಳಲ್ಲೇ ಕೆಟೆಲೇರ್​ ಹೆಡರ್​ ಮೂಲಕ ತನ್ನ 2ನೇ ಗೋಲು ಬಾರಿಸಿ ಬೆಲ್ಜಿಯಂಗೆ ಮತ್ತೆ ಮುನ್ನಡೆ ಒದಗಿಸಿದರು. ದ್ವೀತಿಯಾರ್ಧದಲ್ಲಿ ಹ್ಯಾನ್ಸ್​ ವನಕೆನ್​ (57) ಅಮೆರಿಕದ ಗೋಲು ಕೀಪರ್​ ಮ್ಯಾಟ್​ ಫ್ರೀಸ್​ ಮಾಡಿದ ಎಡವಟ್ಟಿನಿಂದ ಲಾಭ ಪಡೆದು ಬೆಲ್ಜಿಯಂ ಮುನ್ನಡೆ ಹಿಗ್ಗಿಸಿದರು. ಬಳಿಕ ದ್ವೀತಿಯಾರ್ಧದ ಬದಲಿ ಆಟಗಾರ ರೊಮೆಲು ಲುಕಾಕು (90+3) ಇಂಜುರಿ ಸಮಯದಲ್ಲಿ ಬೆಲ್ಜಿಯಂ ಗೆಲುವಿನ ಅಂತರ ಹಿಗ್ಗಿಸಿದರು. ಬೆಲ್ಜಿಯಂ ಅಜೇಯ ಓಟವನ್ನು 18ನೇ ಪಂದ್ಯಕ್ಕೆ ವಿಸ್ತರಿಸಿಕೊಂಡಿತು.

ಅಮೆರಿಕದ ಸ್ಟಾರ್​ ಆಟಗಾರ ಕ್ರಿಶ್ಚಿಯನ್​ ಪುಲಿಸಿಕ್​ ಈ ಬಾರಿ ಆರಂಭಿಕ 11ರಲ್ಲೇ ಕಣಕ್ಕಿಳಿದರೂ, 52ನೇ ನಿಮಿಷದಲ್ಲಿ ಆದ ಬಲಗಾಲಿನ ಗಾಯದಿಂದಾಗಿ ಪಂದ್ಯದ ಉಳಿದ ಭಾಗವನ್ನು ಬೆಂಚ್​ನಿಂದಲೇ ವೀಸಿದರು.
2002ರ ಬಳಿಕ ಮೊದಲ ಬಾರಿ ಕ್ವಾರ್ಟರ್​ಫೈನಲ್​ಗೇರುವ ಅಮೆರಿಕದ ಆಸೆ ಭಗ್ನವಾದರೂ, ವಿಶ್ವಕಪ್​ನಲ್ಲಿ ಮೊದಲ ಬಾರಿ 3 ಪಂದ್ಯ ಗೆಲುವಿನ ಸಂಭ್ರಮ ಕಂಡಿತು. 1930ರ ಮೊದಲ ವಿಶ್ವಕಪ್​ ಮುಖಾಮುಖಿಯಲ್ಲಿ ಬೆಲ್ಜಿಯಂ ವಿರುದ್ಧ ಗೆದ್ದಿದ್ದ ಅಮೆರಿಕ, ನಂತರದ 8 ಪಂದ್ಯಗಳಲ್ಲೂ ಸೋಲುಂಡಿದೆ.
ಅಮೆರಿಕ: 1
*ಮಲಿಕ್​ ಟಿಲ್ಮನ್​ (31ನೇ ನಿಮಿಷ)
ಬೆಲ್ಜಿಯಂ: 4
*ಚಾರ್ಲ್ಸ್​ ಡಿ ಕೆಟೆಲೇರ್​ (9, 33)
*ಹ್ಯಾನ್ಸ್​ ವನಕೆನ್​ (57)
*ರೊಮೆಲು ಲುಕಾಕು (90+3)
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net