FIFA WorldCup: ಏಷ್ಯಾದ ನಂ. 1 ಜಪಾನ್​ ದಾಖಲೆ ಜಯಭೇರಿ

FIFA WorldCup: ಏಷ್ಯಾದ ನಂ. 1 ಜಪಾನ್​ ದಾಖಲೆ ಜಯಭೇರಿ
FIFA WorldCup: ಏಷ್ಯಾದ ನಂ. 1 ಜಪಾನ್​ ದಾಖಲೆ ಜಯಭೇರಿ
Published on
ಮಾಂಟೆರ್ರಿ (ಮೆಕ್ಸಿಕೋ): ಅಯಾಸೆ ಉಯೇಡಾ (31, 83ನೇ ನಿಮಿಷ) ಸಿಡಿಸಿದ ಅವಳಿ ಗೋಲಿನ ಬಲದಿಂದ ಫಿಫಾ ವಿಶ್ವಕಪ್ (FIFA WorldCup)​ ಇತಿಹಾಸದಲ್ಲಿ ತನ್ನ ಅತಿದೊಡ್ಡ ಗೆಲುವಿನ ದಾಖಲೆ ಬರೆದಿರುವ ಏಷ್ಯಾದ ನಂ.1 ಜಪಾನ್​ ತಂಡ ಸತತ 4ನೇ ಬಾರಿ ನಾಕೌಟ್​ ಹಂತಕ್ಕೇರುವ ಸನಿಹ ತಲುಪಿದೆ. ಜಪಾನ್​ ತಂಡ ಭಾರತೀಯ ಕಾಲಮಾನ ಪ್ರಕಾರ ಭಾನುವಾರ ಬೆಳಗ್ಗೆ ನಡೆದ ಎಫ್​ ಗುಂಪಿನ ಪಂದ್ಯದಲ್ಲಿ ಟುನೀಷಿಯಾ ವಿರುದ್ಧ 4-0 ಅಂತರದಿಂದ ಗೆಲುವು ಸಾಧಿಸಿತು. ಜಪಾನ್​ ತಂಡ ವಿಶ್ವಕಪ್​ ಪಂದ್ಯವೊಂದರಲ್ಲಿ 4 ಗೋಲು ಸಿಡಿಸಿದ್ದು ಇದೇ ಮೊದಲಾಗಿದೆ. ಅಲ್ಲದೆ ವಿಶ್ವಕಪ್​ನಲ್ಲಿ ಈ ಸಾಧನೆ ಮಾಡಿದ ಏಷ್ಯಾದ ಮೊದಲ ತಂಡವೆನಿಸಿದೆ.
ಸಮುರಾಯ್​ ಬ್ಲೂ ಖ್ಯಾತಿಯ ಜಪಾನ್​ ತಂಡದ ಪರ ಡೈಚಿ ಕಾಮಡ (4) ಮತ್ತು ಜುನ್ಯಾ ಇಟೋ (69) ತಲಾ ಒಂದು ಗೋಲು ಬಾರಿಸಿದರು. ಇದರೊಂದಿಗೆ ಜಪಾನ್​ ತಂಡ ನೆದರ್ಲೆಂಡ್​ ವಿರುದ್ಧ ಗೋಲು ಅಂತರ ಮತ್ತು ಅಂಕ ಗಳಿಕೆಯಲ್ಲಿ ಸಮಬಲ ಸಾಧಿಸಿದೆ. ನೆದರ್ಲೆಂಡ್​&ಜಪಾನ್​ ಆರಂಭಿಕ ಪಂದ್ಯದಲ್ಲಿ 2-2 ಸಮಬಲ ಸಾಧಿಸಿದ್ದವು. ಜಪಾನ್​ ಇನ್ನೂ ಸ್ವೀಡನ್​ ವಿರುದ್ಧ ಡ್ರಾ ಸಾಧಿಸಿದರೂ ನಾಕೌಟ್​ಗೇರಬಹುದಾಗಿದೆ.

ಆಫ್ರಿಕಾದ ದೇಶ ಟುನೀಷಿಯಾ ಮೊದಲ ಪಂದ್ಯದಲ್ಲಿ ಸ್ವೀಡನ್​ ವಿರುದ್ಧ 1-5ರಿಂದ ಸೋತ ಬೆನ್ನಲ್ಲೇ ತನ್ನ ಕೋಚ್​ ವಜಾಗೊಳಿಸಿತ್ತು. ಆದರೆ ಜಪಾನ್​ ವಿರುದ್ಧವೂ ಟುನೀಷಿಯಾದ ರಕ್ಷಣಾ ವಿಭಾಗದ ನಿರ್ವಹಣೆ ಸುಧಾರಿಸಲಿಲ್ಲ. ಟುನೀಷಿಯಾ ಸತತ 2ನೇ ಸೋಲಿನೊಂದಿಗೆ ಲೀಗ್​ ಹಂತದಲ್ಲೇ ಹೊರಬಿದ್ದಿದೆ. ಟುನೀಷಿಯಾ ಹಿಂದಿನ 6 ವಿಶ್ವಕಪ್​ಗಳಲ್ಲೂ ಗುಂಪು ಹಂತ ದಾಟಿರಲಿಲ್ಲ.
ಟುನೀಷಿಯಾ: 0
ಜಪಾನ್​: 4
*ಡೈಚಿ ಕಾಮಡ (4)
*ಅಯಾಸೆ ಉಯೇಡಾ (31, 83)
*ಜುನ್ಯಾ ಇಟೋ (69)
ಸಾವಿರನೇ ಪಂದ್ಯ
ಜಪಾನ್​-ಟುನೀಷಿಯಾ ನಡುವಿನ ಪಂದ್ಯ ಫಿಫಾ ವಿಶ್ವಕಪ್​ ಇತಿಹಾಸದ 1,000ನೇ ಪಂದ್ಯವೆನಿಸಿತು. 96 ವರ್ಷಗಳ ಹಿಂದೆ 1930ರಲ್ಲಿ ಉರುಗ್ವೆಯಲ್ಲಿ ಟೂರ್ನಿ ಆರಂಭಗೊಂಡಿತ್ತು. ಹಿಂದಿನ 22 ಆವೃತ್ತಿಗಳಲ್ಲಿ 8 ತಂಡಗಳು ಪ್ರಶಸ್ತಿ ಹಂಚಿಕೊಂಡಿವೆ. ಇದುವರೆಗೆ ಒಟ್ಟಾರೆ 88 ತಂಡಗಳು ಟೂರ್ನಿಯಲ್ಲಿ ಆಡಿವೆ.
1: ಪಂದ್ಯ ಶುರುವಾದ 3 ನಿಮಿಷ, 27 ಸೆಕೆಂಡ್​ಗಳಲ್ಲೇ ಗೋಲು ಬಾರಿಸಿದ ಡೈಚಿ ಕಾಮಡ, ಫಿಫಾ ವಿಶ್ವಕಪ್​ನಲ್ಲಿ ಜಪಾನ್​ನ ಅತಿವೇಗದ ಗೋಲು ಸಾಧಕ ಎನಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net