FIFA WorldCup: ಅರ್ಜೆಂಟೀನಾಗೆ ಸೆಮೀಸ್​ನಲ್ಲಿ ಆಂಗ್ಲರ ಸವಾಲು; ಹಾಲಿ ಚಾಂಪಿಯನ್ಸ್​ ಗೆಲ್ಲಿಸಿದ ಅಲ್ವಾರೆಜ್​ ಗೋಲು

FIFA WorldCup: ಅರ್ಜೆಂಟೀನಾಗೆ ಸೆಮೀಸ್​ನಲ್ಲಿ ಆಂಗ್ಲರ ಸವಾಲು; ಹಾಲಿ ಚಾಂಪಿಯನ್ಸ್​ ಗೆಲ್ಲಿಸಿದ ಅಲ್ವಾರೆಜ್​ ಗೋಲು
FIFA WorldCup: ಅರ್ಜೆಂಟೀನಾಗೆ ಸೆಮೀಸ್​ನಲ್ಲಿ ಆಂಗ್ಲರ ಸವಾಲು; ಹಾಲಿ ಚಾಂಪಿಯನ್ಸ್​ ಗೆಲ್ಲಿಸಿದ ಅಲ್ವಾರೆಜ್​ ಗೋಲು
Published on
ಕಾನ್ಸಾಸ್​ ಸಿಟಿ: ರಾಷ್ಟ್ರೀಯ ತಂಡದಲ್ಲಿ ಲಿಯೋನೆಲ್​ ಮೆಸ್ಸಿ ಉತ್ತರಾಧಿಕಾರಿ ಎಂದೇ ಬಣ್ಣಿಸಲ್ಪಟ್ಟಿರುವ ಜೂಲಿಯನ್​ ಅಲ್ವಾರೆಜ್​ (112ನೇ ನಿಮಿಷ) ಹೆಚ್ಚುವರಿ ಅವಧಿಯಲ್ಲಿ ದೂರದಿಂದ ಸಿಡಿಸಿದ ಆಕರ್ಷಕ ಗೋಲಿನ ನೆರವಿನಿಂದ ಹಾಲಿ ಚಾಂಪಿಯನ್​ ಅರ್ಜೆಂಟೀನಾ ತಂಡ ಫಿಫಾ ವಿಶ್ವಕಪ್ (FIFA WorldCup)​ 23ನೇ ಆವೃತ್ತಿಯಲ್ಲಿ ಸ್ವಿರ್ಜಲೆಂಡ್​ ವಿರುದ್ಧ 3-1 ಅಂತರದಿಂದ ಗೆಲುವು ದಾಖಲಿಸಿದೆ. ಈ ಮೂಲಕ ಲಿಯೋನೆಲ್​ ಮೆಸ್ಸಿ ಪಡೆ ಸತತ 2ನೇ ಬಾರಿ ಮತ್ತು ಒಟ್ಟಾರೆ 7ನೇ ಬಾರಿ ಅಂತಿಮ 4ರ ಘಟ್ಟಕ್ಕೇರಿದೆ. ಸ್ವಿಸ್​ ತಂಡ ಮೊಟ್ಟಮೊದಲ ಬಾರಿ ಸೆಮಿಫೈನಲ್​ಗೇರುವ ಕನಸು ಭಗ್ನಗೊಂಡಿತು. ಅರ್ಜೆಂಟೀನಾ ತಂಡ ಉಪಾಂತ್ಯದಲ್ಲಿ ಇಂಗ್ಲೆಂಡ್​ ತಂಡದ ಸವಾಲು ಎದುರಿಸಲಿದೆ.

ಭಾರತೀಯ ಕಾಲಮಾನ ಪ್ರಕಾರ ಭಾನುವಾರ ಬೆಳಗ್ಗೆ ನಡೆದ ಪಂದ್ಯದ 10ನೇ ನಿಮಿಷದಲ್ಲಿ ಮೆಸ್ಸಿ ಅವರ ಕಾರ್ನರ್​ ಕಿಕ್​ನಲ್ಲಿ ಲೆಕ್ಸಿಸ್​ ಮ್ಯಾಕ್​ಅಲಿಸ್ಟರ್​ ಹೆಡರ್​ ಮೂಲಕ ಅರ್ಜೆಂಟೀನಾಗೆ ಮುನ್ನಡೆ ಒದಗಿಸಿದರು. ಆದರೆ 67ನೇ ನಿಮಿಷದಲ್ಲಿ ಡಾನ್​ ಎನ್​ಡೋಯೆ ಬಾರಿಸಿದ ಗೋಲಿನಿಂದ ಸ್ವಿರ್ಜಲೆಂಡ್​ ತಂಡ ಪಂದ್ಯವನ್ನು ಸಮಬಲಕ್ಕೆ ತಂದಿತು. ಇದರಿಂದ ಹೆಚ್ಚುವರಿ ನಿಮಿಷಕ್ಕೆ ವಿಸ್ತರಿಸಲ್ಪಟ್ಟ ಪಂದ್ಯದಲ್ಲಿ 26 ವರ್ಷದ ಜೂಲಿಯನ್​ ಅಲ್ವಾರೆಜ್​ 112ನೇ ನಿಮಿಷದಲ್ಲಿ ಗೋಲುಪೆಟ್ಟಿಗೆಯ ಟಾಪ್​ ಕಾರ್ನರ್​ನಿಂದ ಚೆಂಡನ್ನು ಒಳನುಗ್ಗಿಸಿ ಗೆಲುವಿನ ಗೋಲು ಬಾರಿಸಿದರು. ಬಳಿಕ ಹೆಚ್ಚುವರಿ ಅವಧಿಯ ಇಂಜುರಿ ಸಮಯದಲ್ಲಿ ಲೌಟಾರೊ ಮಾರ್ಟಿನೆಜ್​ (120+1) ಅರ್ಜೆಂಟೀನಾದ ಗೆಲುವಿನ ಅಂತರ ಹಿಗ್ಗಿಸಿದರು. ಇದರೊಂದಿಗೆ ವಿಶ್ವಕಪ್​ನಲ್ಲಿ ಲಿಯೋನೆಲ್​ ಸ್ಕಾಲೋನಿ ಮಾರ್ಗದರ್ಶನದ ಅರ್ಜೆಂಟೀನಾದ ಗೆಲುವಿನ ಓಟ ಸತತ 12ನೇ ಪಂದ್ಯಕ್ಕೆ ವಿಸ್ತರಿಸಿದ್ದು, ಸತತ 2ನೇ ಬಾರಿ ಚಾಂಪಿಯನ್​ ಪಟ್ಟಕ್ಕೇರುವ ನಿರೀೆಯೂ ಹೆಚ್ಚಾಗಿದೆ.

ಆದರೆ ಪಂದ್ಯದ ದ್ವೀತಿಯಾರ್ಧದಲ್ಲಿ ರೆಫ್ರಿ, ಅರ್ಜೆಂಟೀನಾ ಪರ ಕಾರ್ಯನಿರ್ವಹಿಸಿದರು ಎಂಬ ಟೀಕೆಗಳು ಮತ್ತೊಮ್ಮೆ ಕೇಳಿಬಂದಿವೆ. ಈಜಿಪ್ಟ್​ ವಿರುದ್ಧದ 16ರ ಘಟ್ಟದ ಪಂದ್ಯದಲ್ಲೂ ರೆಫ್ರಿ, ಅರ್ಜೆಂಟೀನಾ ಪರವಾಗಿದ್ದರು ಎಂಬ ದೂರು ಬಂದಿತ್ತು. ಪಂದ್ಯದ 72ನೇ ನಿಮಿಷದ ಬಳಿಕ 10 ಆಟಗಾರರೊಂದಿಗೆ ಆಡಿದ ನಡುವೆಯೂ ದಿಟ್ಟ ಹೋರಾಟ ತೋರಿದ ಸ್ವಿಸ್​ ತಂಡ ಪಂದ್ಯವನ್ನು ಹೆಚ್ಚುವರಿ ಅವಧಿಗೆ ವಿಸ್ತರಿಸುವಲ್ಲಿ ಯಶಸ್ವಿಯಾಗಿತ್ತು. ಸ್ವಿಸ್​ ತಂಡ ಹಿಂದಿನ 5 ಪಂದ್ಯಗಳಲ್ಲಿ 3 ಗೋಲು ಮಾತ್ರ ಬಿಟ್ಟುಕೊಟ್ಟಿತ್ತು.
*ಅರ್ಜೆಂಟೀನಾ: 3
*ಅಲೆಕ್ಸಿಸ್​ ಮ್ಯಾಕ್​ಅಲಿಸ್ಟರ್​ (10)
*ಜೂಲಿಯನ್​ ಅಲ್ವಾರೆಜ್​ (112)
*ಲೌಟಾರೊ ಮಾರ್ಟಿನೆಜ್​ (120+1)
ಸ್ವಿರ್ಜಲೆಂಡ್​: 1
*ಡಾನ್​ ಎನ್​ಡೋಯೆ (67)
ಎಂಬೋಲೋಗೆ ರೆಡ್​ ಕಾರ್ಡ್​
ಸ್ವಿರ್ಜಲೆಂಡ್​ ತಂಡ ಸಮಬಲದ ಗೋಲು ಸಿಡಿಸಿದ 5 ನಿಮಿಷಗಳಲ್ಲೇ ಅರ್ಜೆಂಟೀನಾದ ಲಿಯಾನಾರ್ಡೊ ಪೆರೆಡೆಸ್​ ಟ್ಯಾಕಲ್​ಗೆ ರೆಫ್ರಿ ಹಳದಿ ಕಾರ್ಡ್​ ತೋರಿಸಿದರು. ಆದರೆ ವಿಡಿಯೋ ಪರಾಮರ್ಶೆಯ ಬಳಿಕ, ಪೆರೆಡೆಸ್​ ಸ್ಪರ್ಶಿಸುವ ಮುನ್ನವೇ ಸ್ವಿಸ್​ನ ಬ್ರಿಲ್​ ಎಂಬೋಲೋ ನೆಲಕ್ಕೆ ಬಿದ್ದು ನಾಟಕವಾಡಿದ್ದರು ಎಂದು ಅವರಿಗೆ ಪಂದ್ಯದ 2ನೇ ಹಳದಿ ಕಾರ್ಡ್​ ನೀಡಲಾಯಿತು. ಇದರೊಂದಿಗೆ ಅದು ಕೆಂಪು ಕಾರ್ಡ್​ ಆಗಿ ಬದಲಾಯಿತು ಮತ್ತು ಬಳಿಕ ಸ್ವಿರ್ಜಲೆಂಡ್​ ತಂಡ 10 ಆಟಗಾರರೊಂದಿಎ ಪಂದ್ಯ ಮುಂದುವರಿಸಿತು. ಈ ತೀರ್ಪು ನೀಡುವ ವೇಳೆ ರೆಫ್ರಿ ಅರ್ಜೆಂಟೀನಾ ಪರ ಪಕ್ಷಪಾತ ಮಾಡಿದ್ದಾರೆ ಎಂದು ಸ್ವಿಸ್​ ಆರೋಪಿಸಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net