ಬೆಂಗಳೂರು: ಆತಿಥೇಯ ಕರ್ನಾಟಕ ತಂಡ ಪ್ರತಿಷ್ಠಿತ ದೇಶೀಯ ಫುಟ್ಬಾಲ್ ಟೂರ್ನಿ ಸಂತೋಷ್ ಟ್ರೋಫಿ (Santosh Trophy ) 79ನೇ ಆವೃತ್ತಿಯ ಎಚ್ ಗುಂಪಿನಲ್ಲಿ ಗೆಲುವಿನ ಆರಂಭ ಕಂಡಿದೆ. ನಿಖಿಲ್ ರಾಜ್ ಮುರುಗೇಶ್ ಸಾರಥ್ಯದ ರಾಜ್ಯ ತಂಡ ತನ್ನ ಮೊದಲ ಪಂದ್ಯದಲ್ಲಿ ಲಕ್ಷದ್ವೀಪ ತಂಡದ ವಿರುದ್ಧ 3-0 ಗೋಲುಗಳ ಅಂತರದಿಂದ ಗೆಲುವು ದಾಖಲಿಸಿತು.
ಬೆಂಗಳೂರು ಫುಟ್ಬಾಲ್ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಪಂದ್ಯದಲ್ಲಿ ಕರ್ನಾಟಕ ಪರ ನಾಯಕ ನಿಖಿಲ್ ರಾಜ್ ಮುರುಗೇಶ್ (8ನೇ ನಿಮಿಷ, ಪೆನಾಲ್ಟಿ ಮತ್ತು 43ನೇ ನಿಮಿಷ) ಅವಳಿ ಗೋಲು ಸಿಡಿಸಿದರೆ, ಕಾರ್ತಿಕ್ ಗೋವಿಂದ್ (90+3) ಮತ್ತೊಂದು ಗೋಲು ಬಾರಿಸಿದರು.
ದಿನದ ಇನ್ನೊಂದು ಪಂದ್ಯದಲ್ಲಿ ಸರ್ವೀಸಸ್ 4-0ಯಿಂದ ಗೋವಾ ವಿರುದ್ಧ ಜಯಿಸಿತು. ಕರ್ನಾಟಕ ತಂಡ ಇನ್ನು ಸೋಮವಾರ ಸರ್ವೀಸಸ್ ವಿರುದ್ಧ ಸೆಣಸಲಿದೆ.