ವೈವಾಹಿಕ ಜೀವನಕ್ಕೆ ಕಾಲಿಡಲು ಸಜ್ಜಾದ ಫುಟ್​ಬಾಲ್​ ತಾರೆ, ಐವರು ಮಕ್ಕಳ ತಂದೆ ರೊನಾಲ್ಡೊ: ಜಾರ್ಜಿನಾಗೆ ಮಾಸಿಕ 1 ಕೋಟಿ ರೂ. ಜೀವನಾಂಶ!

New Project
Published on

ವಾಷಿಂಗ್ಟನ್​: ಈಗಾಗಲೆ ಐವರು ಮಕ್ಕಳ ತಂದೆಯಾಗಿರುವ ಪೋರ್ಚುಗಲ್​ನ ಫುಟ್​ಬಾಲ್​ ತಾರೆ ಕ್ರಿಶ್ಚಿಯಾನೊ ರೊನಾಲ್ಡೊ ಕೊನೆಗೂ ವೈವಾಹಿಕ ಜೀವನಕ್ಕೆ ಕಾಲಿಡಲು ಸಜ್ಜಾದಂತಿದೆ. ತನ್ನ ಇಬ್ಬರು ಮಕ್ಕಳ ತಾಯಿಯಾಗಿರುವ ದೀರ್ಕಾಲದ ಗೆಳತಿ ಜಾರ್ಜಿನಾ ರೋಡ್ರಿಗಸ್​ ಜತೆಗೆ ಕೊನೆಗೂ ನಿಶ್ಚಿತಾರ್ಥ ಮಾಡಿಕೊಂಡಿರುವುದನ್ನು 40 ವರ್ಷದ ರೊನಾಲ್ಡೊ ಸೋಮವಾರ ಇನ್​ಸ್ಟಾಗ್ರಾಮ್​ನಲ್ಲಿ ಪ್ರಕಟಿಸಿದ್ದಾರೆ.

31 ವರ್ಷದ ಜಾರ್ಜಿನಾಗೆ ತೊಡಿಸಿರುವ ವಜ್ರದ ಉಂಗುರದ ಚಿತ್ರವನ್ನೂ ರೊನಾಲ್ಡೊ ಪ್ರಕಟಿಸಿದ್ದಾರೆ. 5 ಸೆಂಟಿಮೀಟರ್​ನಷ್ಟು ದೊಡ್ಡದಾದ ಈ ಉಂಗುರದ ಬೆಲೆ ಸುಮಾರು 17ರಿಂದ 42 ಕೋಟಿ ರೂ. ಇರಬಹುದು ಎಂದು ಅಂದಾಜಿಸಲಾಗಿದೆ. ಜಾರ್ಜಿನಾ ಈಗಾಗಲೆ ಕಳೆದ ಕೆಲ ವರ್ಷಗಳಿಂದ ರೊನಾಲ್ಡೊ ಮತ್ತು ಅವರ ಎಲ್ಲ ಐವರು ಮಕ್ಕಳ ಜತೆಯಾಗಿ ವಾಸಿಸುತ್ತಿದ್ದಾರೆ. 2016ರಲ್ಲಿ ಮ್ಯಾಡ್ರಿಡ್​ನಲ್ಲಿ ಅವರಿಬ್ಬರು ಮೊದಲ ಬಾರಿ ಭೇಟಿಯಾಗಿದ್ದರು.

ರೊನಾಲ್ಡೊ ಇತರ ಮೂವರು ಮಕ್ಕಳನ್ನು ಬಾಡಿಗೆ ತಾಯ್ತನದ ಮೂಲಕ ಪಡೆದುಕೊಂಡಿದ್ದಾರೆ. ರಿಯಲ್​ ಮ್ಯಾಡ್ರಿಡ್​, ಮ್ಯಾಂಚೆಸ್ಟರ್​ ಯುನೈಟೆಡ್​ ಪರ ಆಡಿ ಮಿಂಚಿರುವ ರೊನಾಲ್ಡೊ ಸದ್ಯ ಸೌದಿ ಅರೇಬಿಯಾದ ಅಲ್​-ನಾಸರ್​ ಕ್ಲಬ್​ ಪರ ಆಡುತ್ತಿದ್ದಾರೆ. ರೊನಾಲ್ಡೊ ಸುಮಾರು 8,771 ಕೋಟಿ ರೂ. ಒಡೆಯರಾಗಿದ್ದಾರೆ. ಮಾಜಿ ರೂಪದರ್ಶಿ ಜಾರ್ಜಿನಾ ಕೂಡ 87 ಕೋಟಿ ರೂ. ಸಂಪಾದನೆ ಹೊಂದಿದ್ದಾರೆ. ಒಂದು ವೇಳೆ ಇವರಿಬ್ಬರು ಬೇರ್ಪಟ್ಟರೆ ಜಾರ್ಜಿನಾ ಮಾಸಿಕ 1 ಕೋಟಿ ರೂ. ಜೀವನಾಂಶ ಪಡೆಯಲಿದ್ದಾರೆ. ಜತೆಗೆ ಮ್ಯಾಡ್ರಿಡ್​ನಲ್ಲಿರುವ ರೊನಾಲ್ಡೊರ 50 ಕೋಟಿ ರೂ. ಮೌಲ್ಯದ ಐಷಾರಾಮಿ ಮನೆಯೂ ಜಾರ್ಜಿನಾ ಪಾಲಾಗಲಿದೆ ಎಂದು ಪೋರ್ಚುಗಲ್​ನ ಮ್ಯಾಗಝೀನ್​ವೊಂದು ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net