ಈ ಶೋಕಿ ಬಿಟ್ಟು ಬ್ಯಾಟಿಂಗ್​ ಮೇಲೆ ಗಮನಹರಿಸಿ! ಶುಭಮನ್​ ಗಿಲ್​​ ಬಗ್ಗೆ ಆಸಿಸ್​ ದಿಗ್ಗಜ ಬ್ಯಾಟರ್​ ವ್ಯಂಗ್ಯ | Adam Gilchrist

ವಿಜಯವಾಣಿ - 2025-01-14T112803.059
Published on

Adam Gilchrist: ಇತ್ತೀಚೆಗಷ್ಟೇ ಮುಕ್ತಾಯಗೊಂಡ ಆಸ್ಟ್ರೇಲಿಯಾ ವಿರುದ್ಧದ ಐದು ಪಂದ್ಯಗಳ ಬಾರ್ಡರ್​ ಗವಾಸ್ಕರ್​ ಟ್ರೋಫಿ ಸರಣಿಯಲ್ಲಿ 3-1 ಅಂತರದಲ್ಲಿ ಸೋಲುಂಡ ಭಾರತ, ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ ಫೈನಲ್​ನಿಂದ ಹೊರಗುಳಿಯಿತು. ರೋಹಿತ್ ಶರ್ಮ ನಾಯಕತ್ವದಲ್ಲಿ ಪಂದ್ಯಗಳನ್ನಾಡಿದ ಟೀಮ್ ಇಂಡಿಯಾ, ಸರಣಿಯಲ್ಲಿ ಉತ್ತಮ ಪ್ರದರ್ಶನ ನೀಡುವಲ್ಲಿ ವಿಫಲವಾಯಿತು. ಒಂದೆಡೆ ಕ್ರಿಕೆಟ್ ದಿಗ್ಗಜರಾದ ರೋಹಿತ್ ಶರ್ಮ ಮತ್ತು ವಿರಾಟ್ ಕೊಹ್ಲಿ ಸರಣಿಯುದ್ದಕ್ಕೂ ಅತ್ಯಂತ ಕಳಪೆ ಫಾರ್ಮ್​ ಹೊಂದಿದರೆ, ಉಳಿದ ಆಟಗಾರರೂ ಕೂಡ ಅಲ್ಲಲ್ಲಿ ಕಳಪೆ ಪ್ರದರ್ಶನ ತೋರಿದ್ದು ಸದ್ಯ ಮಾಜಿ ಹಿರಿಯ ಕ್ರಿಕೆಟಿಗರ ಟೀಕೆ, ವ್ಯಂಗ್ಯಗಳಿಗೆ ಕಾರಣವಾಗಿದೆ.

ಮೊದಲು ಇದನ್ನು ಬಿಡಿ!

ಟೀಮ್ ಇಂಡಿಯಾ ಮಾಜಿ ಆಟಗಾರರು ಸೇರಿದಂತೆ ಆಸೀಸ್​ನ ಹಿರಿಯ ಮಾಜಿ ಕ್ರಿಕೆಟಿಗರು ಕೂಡ ಭಾರತ ತಂಡದ ಸ್ಟಾರ್​ ಆಟಗಾರರ ಕಳಪೆ ಪ್ರದರ್ಶನವನ್ನು ಟೀಕಿಸಿದ್ದಾರೆ. ಬಾರ್ಡರ್​ ಗವಾಸ್ಕರ್​ ಟ್ರೋಫಿಯ ಐದು ಪಂದ್ಯಗಳ ಸರಣಿ ಮುಗಿದ ದಿನದಿಂದಲೂ ರೋಹಿತ್ ಶರ್ಮ ಮತ್ತು ವಿರಾಟ್​ ಕೊಹ್ಲಿ ಕಳಪೆ ಆಟಕ್ಕೆ ಅನೇಕರು ಜಾಲತಾಣಗಳಲ್ಲಿ ವ್ಯಂಗ್ಯವಾಡಿದ್ದಾರೆ. ಆದರೆ, ಆಸ್ಟ್ರೇಲಿಯಾದ ದಿಗ್ಗಜ, ಮಾಜಿ ಬ್ಯಾಟರ್​-ವಿಕೆಟ್ ಕೀಪರ್​ ಆ್ಯಡಮ್​ ಗಿಲ್​ಕ್ರಿಸ್ಟ್​ ಮಾತ್ರ, ಗವಾಸ್ಕರ್​ ಟ್ರೋಫಿ ಭಾಗವಾಗಿದ್ದ ಆರಂಭಿಕ ಬ್ಯಾಟರ್​ ಶುಭಮನ್ ಗಿಲ್​, ಏಕೆ ಸರಣಿಯಲ್ಲಿ ಒಳ್ಳೆಯ ಪ್ರದರ್ಶನ ನೀಡಲಿಲ್ಲ. ಅದಕ್ಕೆ ಕಾರಣವೇನು? ಎಂಬುದನ್ನು ಇಲ್ಲಿ ಮಾತನಾಡಿದ್ದಾರೆ.

ಹೇರ್​ಸ್ಟೈಲ್​ ಅಲ್ಲ

ತಂಡದಲ್ಲಿ ಅವಕಾಶ ಸಿಗುವುದೇ ಅತ್ಯಂತ ಕಷ್ಟಕರ. ಹೀಗಿರುವಾಗ ಸ್ಥಾನ ಪಡೆದ ಬಳಿಕ ಉತ್ತಮವನ್ನು ಮೀರಿ ಅತ್ಯುತ್ತಮ ಪ್ರದರ್ಶನ ನೀಡುವುದು ಆಯ್ಕೆಯಾದ ಆಟಗಾರರ ಕರ್ತವ್ಯ ಮತ್ತು ಧ್ಯೇಯ. ಇದನ್ನೇ ತಮ್ಮ ಶೈಲಿಯಲ್ಲಿ ಶುಭಮನ್​ ಕಿವಿಗೆ ತಲುಪಿಸಿರುವ ಆ್ಯಡಮ್​, "ತನ್ನ ಬ್ಯಾಟ್​ನಿಂದ ತಂಡಕ್ಕೆ ಹೆಚ್ಚುವರಿ ರನ್​ಗಳನ್ನು ತಂದುಕೊಡುವುದರ ಬಗ್ಗೆ ಯೋಚಿಸಬೇಕೇ ಹೊರತು ಹೇರ್​ಸ್ಟೈಲ್​ ಬಗ್ಗೆ ಅಲ್ಲ. ಆಸೀಸ್​ ವಿರುದ್ಧದ ಸರಣಿಯಲ್ಲಿ ಗಿಲ್ ಮಾಡಿದ ತಪ್ಪು ಇದೇ. ತನ್ನ ಹೇರ್​ಸ್ಟೈಲ್​ಗೆ ಕೊಟ್ಟ ಗಮನ, ರನ್​ ಗಳಿಸುವಲ್ಲಿ ಗಿಲ್​ ತೋರಲಿಲ್ಲ. ಪ್ರಾಯಶಃ ತೋರಿದ್ದರೆ ಖಂಡಿತ ಉತ್ತಮ ಪ್ರದರ್ಶನ ಅವರಿಂದ ಬರುತ್ತಿತ್ತು" ಎಂದು ಹೇಳಿದ್ದಾರೆ.

"ತಂಡದ ಪರ ಮೈದಾನಕ್ಕಿಳಿದ ಮೇಲೆ ದೊಡ್ಡ ಸಂಖ್ಯೆಯ ರನ್​ ಗಳಿಸುವತ್ತ ಶುಭಮನ್ ಗಮನ ಇರಬೇಕು. ಶತಕ ಬಾರಿಸಿದ ನಂತರ ಹೆಲ್ಮೆಟ್ ತೆಗೆದು ಸಂಭ್ರಮಿಸುತ್ತೀರಿ ನೋಡಿ, ಆಗ ನಿಮ್ಮ ಕೂದಲು ಇನ್ನೂ ಆಕರ್ಷಕವಾಗಿ ಕಾಣುತ್ತದೆ. ಹೇರ್​ಸ್ಟೈಲ್​ನತ್ತ ಬಿಟ್ಟು ಅತ್ಯಧಿಕ ರನ್​ ಗಳಿಸುವತ್ತ ಹೆಚ್ಚು ಗಮನಕೊಡಿ" ಎಂದು ಗಿಲ್​ಕ್ರಿಸ್ಟ್​ ವ್ಯಂಗ್ಯವಾಡಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net