T20 Cricket: ಮಹಾರಾಜ ಟ್ರೋಫಿಯಲ್ಲಿ ಮಂಗಳೂರು ಡ್ರ್ಯಾಗನ್ಸ್​​ಗೆ ಮೊದಲ ಜಯ

web maha mng vs smg
Published on

ವಿಜಯವಾಣಿ ಸುದ್ದಿಜಾಲ ಬೆಂಗಳೂರು

ಎಡಗೈ ಆರಂಭಿಕ ರೋಹನ್​ ಪಾಟೀಲ್​ (72 ರನ್​, 40 ಎಸೆತ, 6 ಬೌಂಡರಿ, 5 ಸಿಕ್ಸರ್​) ಬಿರುಸಿನ ಬ್ಯಾಟಿಂಗ್​ ಬಲದಿಂದ ಮಂಗಳೂರು ಡ್ರ್ಯಾಗನ್ಸ್​ ತಂಡ ಮಹಾರಾಜ ಟ್ರೋಫಿ ಟಿ20 ಟೂರ್ನಿಯಲ್ಲಿ ಶಿವಮೊಗ್ಗ ಲಯನ್ಸ್​ ವಿರುದ್ಧ 8 ವಿಕೆಟ್​ಗಳಿಂದ ಭರ್ಜರಿ ಗೆಲುವು ದಾಖಲಿಸಿದೆ. ಈ ಮೂಲಕ ಶ್ರೇಯಸ್​ ಗೋಪಾಲ್​ ಬಳಗ ಟೂರ್ನಿಯಲ್ಲಿ ಗೆಲುವಿನ ಖಾತೆ ತೆರೆದರೆ, ನಿಹಾಲ್​ ಉಲ್ಲಾಳ್​ ಪಡೆ ಸತತ 2ನೇ ಸೋಲು ಅನುಭವಿಸಿತು.

ಎಂ. ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಶನಿವಾರ ನಡೆದ ಕಾದಾಟದಲ್ಲಿ ಟಾಸ್​ ಸೋತು ಮೊದಲು ಬ್ಯಾಟಿಂಗ್​ಗೆ ಇಳಿದ ಶಿವಮೊಗ್ಗ ತಂಡ ಐಪಿಎಲ್​ ತಾರೆ ಅಭಿನವ್​ ಮನೋಹರ್​ (84*ರನ್​, 34 ಎಸೆತ, 3 ಬೌಂಡರಿ, 9 ಸಿಕ್ಸರ್​) ಸ್ಫೋಟಕ ಆಟದಿಂದ 6 ವಿಕೆಟ್​ಗೆ 175 ರನ್​ ಪೇರಿಸಿತು. ಶಿವಮೊಗ್ಗ ಕೊನೇ 7 ಓವರ್​ಗಳಲ್ಲಿ 101 ರನ್​ ದೋಚಿತು. ಪ್ರತಿಯಾಗಿ ರೋಹನ್​, ಮೆಕ್​ನೀಲ್​ ನೋರೋನ್ಹಾ (43) ಜತೆ ಮೊದಲ ವಿಕೆಟ್​ಗೆ 35 ಎಸೆತಗಳಲ್ಲೇ 75 ರನ್​ ಕಸಿದು ಭದ್ರ ಅಡಿಪಾಯ ಹಾಕಿಕೊಟ್ಟರು. ನಂತರ ಸಿದ್ಧಾರ್ಥ್​ ಕೆವಿ (38*) ಉತ್ತಮ ಸಾಥ್​ ನೀಡಿದರು. ಅಂತಿಮವಾಗಿ ಮಂಗಳೂರು ತಂಡ 16.2 ಓವರ್​ಗಳಲ್ಲೇ 2 ವಿಕೆಟ್​ಗೆ 178 ರನ್​ ಪೇರಿಸಿ ಜಯಿಸಿತು.

ಶಿವಮೊಗ್ಗ ಲಯನ್ಸ್​: 6 ವಿಕೆಟ್​ಗೆ 175 (ಕೆ. ರೋಹಿತ್​ 24, ನಿಹಾಲ್​ 0, ಪ್ರಭಾಕರ್​ 20, ಅಭಿನವ್​ ಮನೋಹರ್​ 84*, ಡಿ. ಅವಿನಾಶ್​ 22, ನಿಶ್ಚಿತ್​ ರಾವ್​ 31ಕ್ಕೆ 2, ಅಭಿಲಾಷ್​ 39ಕ್ಕೆ 1, ಶ್ರೇಯಸ್​ 26ಕ್ಕೆ 1). ಮಂಗಳೂರು ಡ್ರ್ಯಾಗನ್ಸ್​: 16.2 ಓವರ್​ಗಳಲ್ಲಿ 2 ವಿಕೆಟ್​ಗೆ 178 (ನೋರೋನ್ಹಾ 43, ರೋಹನ್​ ಪಾಟೀಲ್​ 72, ನಿಕಿನ್​ 17*, ಸಿದ್ಧಾರ್ಥ್​ 38*, ರಾಜ್​ವೀರ್​ 23ಕ್ಕೆ 1, ಹಾರ್ದಿಕ್​ ರಾಜ್​ 33ಕ್ಕೆ 1). ಪಂದ್ಯಶ್ರೇಷ್ಠ: ರೋಹನ್​ ಪಾಟೀಲ್​.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net