

ಮೆಲ್ಬೋರ್ನ್: ಬಾರ್ಡರ್-ಗವಾಸ್ಕರ್ ಟ್ರೋಫಿ (Border-Gavaskar Trophy) ಟೆಸ್ಟ್ ಸರಣಿಯ ನಾಲ್ಕನೇ ಪಂದ್ಯವು ಮೆಲ್ಬೋರ್ನ್ನಲ್ಲಿ ನಡೆಯುತ್ತಿದ್ದು, ಆತಿಥೇಯರು ಪ್ರವಾಸಿ ತಂಡಕ್ಕೆ 340ರನ್ಗಳ ಗುರಿಯನ್ನು ನೀಡಿದ್ದಾರೆ. ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫಿನಾಲೆ (World Test Championship Finale) ದೃಷ್ಠಿಯಲ್ಲಿ ಈ ಪಂದ್ಯ ಉಭಯ ತಂಡಗಳಿಗೂ ಮಹತ್ವದಾಗಿದ್ದು, ಗೆಲ್ಲುವ ನಿಟ್ಟಿನಲ್ಲಿ ಉಭಯ ತಂಡಗಳು ಸೆಣಸಾಡುತ್ತಿವೆ.
ಭಾರತ (Team India) ಹಾಗೂ ಆಸ್ಟ್ರೇಲಿಯಾ (Australia) ನಡುವಿನ ಟೆಸ್ಟ್ ಸರಣಿ ಆರಂಭವಾದಾಗಿನಿಂದಲೂ ಸ್ಲೆಡ್ಜಿಂಗ್ ನಡೆಯುತ್ತಿರುವುದನ್ನು ನಾವು ನೋಡಿದ್ದೇವೆ. ಮೈದಾನದ ಹೊರಗೆ ಹಾಗೂ ಒಳಗೆ ಆಸ್ಟ್ರೇಲಿಯಾ ತಂಡದ ಆಟಗಾರರು ಟೀಮ್ ಇಂಡಿಯಾದವರನ್ನು ಗುರಿಯಾಗಿಸಿ ಸ್ಲೆಡ್ಜಿಂಗ್ ಮಾಡುವುದನ್ನು ನಾವು ಗಮನಿಸಿದ್ದೇವೆ. ಇದೀಗ ಈ ತಂತ್ರವನ್ನು ಆಸ್ಟ್ರೇಲಿಯಾದ ಮಾಧ್ಯಮಗಳು ಅನುಸರಿಸುತ್ತಿದ್ದು, ಭಾರತೀಯ ಆಟಗಾರರ ಆತ್ಮವಿಶ್ವಾಸವನ್ನು ಕುಗ್ಗಿಸುವ ಕೆಲಸವನ್ನು ಮಾಡುತ್ತಿವೆ. ಇದಕ್ಕೆ ಸಂಬಂಧಿಸಿದ ಪೋಸ್ಟ್ಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಮೊದಲಿಗೆ ವಿರಾಟ್ ಕೊಹ್ಲಿ, ಆ ಬಳಿಕ ರವೀಂದ್ರ ಜಡೇಜಾರನ್ನು ಟಾರ್ಗೆಟ್ ಮಾಡಿದ್ದ ಆಸ್ಟ್ರೇಲಿಯಾ ಮಾಧ್ಯಮಗಳು ಇದೀಗ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮರನ್ನು (Rohit Sharma) ಗುರಿಯಾಗಿಸಿಕೊಂಡು ಪೋಸ್ಟ್ ಮಾಡುತ್ತಿದ್ದು, ಹಿಟ್ಮ್ಯಾನ್ನ ಫೋಟೋಗಳನ್ನು ಅವಹೇಳನಕಾರಿಯಾಗಿ ಎಡಿಟ್ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುತ್ತಿದ್ದಾರೆ.
ಮೊದಲಿಗೆ ವಿರಾಟ್ ಕೊಹ್ಲಿಯನ್ನು ಹಾಡಿ ಹೊಗಳಿದ್ದ ಆಸ್ಟ್ರೇಲಿಯಾದ ಮಾಧ್ಯಮಗಳು ಆ ಬಳಿಕ ಸ್ಯಾಮ್ ಕೊನ್ಸ್ಟಾಸ್ ಜತೆಗಿನ ಭುಜಬಲದ ಕಾಳಗದ ವಿಚಾರವಾಗಿ ನಿಂದಿಸಲು ಶುರು ಮಾಡಿದವು. ಅದು ಎಷ್ಟಮಟ್ಟಿಗೆ ಎಂದರೆ ಆಸೀಸ್ ಮಾಧ್ಯಮಗಳು ವಿರಾಟ್ಗೆ ಜೋಕರ್ ಎಂಬ ಪದವನ್ನು ಸಹ ಬಳಸಿದ್ದು, ಅವರ ದಿವಂಗತ ತಂದೆಯವರನ್ನು ಸಹ ಗೇಲಿ ಮಾಡಿ ಸರಣಿ ಪೋಸ್ಟ್ಗಳನ್ನು ಮಾಡಿವೆ. ಇದೀಗ ರೋಹಿತ್ ಶರ್ಮರ (Rohit Sharma) ಫೋಟೋವನ್ನು ಟ್ಯಾಂಪರ್ ಮಾಡಿರುವ ಆಸೀಸ್ ಮಾಧ್ಯಮಗಳು ಕ್ಯಾಪ್ಟನ್ ಕ್ರೈ ಬೇಬಿ ಎಂಬ ಅಡಿಬರಹವನ್ನು ನೀಡಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿವೆ.
ಇದಲ್ಲದೆ ಸ್ಯಾಮ್ ಕೊನ್ಸ್ಟಾಸ್ ಅವರ ಫೋಟೋ ಬಳಿ ವಿರಾಟ್ ನಾನು ನಿನ್ನ ತಂದೆ ಎಂಬ ಪೋಸ್ಟ್ ಸಹ ಹಂಚಿಕೊಳ್ಳಲಾಗಿತ್ತು. ಈ ವಿಚಾರವಾಗಿ ಮಾಜಿ ಕ್ರಿಕೆಟಿಗರಾದ ಸುನಿಲ್ ಗವಾಸ್ಕರ್ ಹಾಗೂ ಇರ್ಫಾನ್ ಪಠಾಣ್ ಆಸ್ಟ್ರೇಲಿಯಾದ ಮಾಧ್ಯಮಗಳ ನಡೆಗೆ ಕಿಡಿಕಾರಿದ್ದರು. ಇದೀಗ ರೋಹಿತ್ರನ್ನು ಟಾರ್ಗೆಟ್ ಮಾಡಿರುವ ಆಸೀಸ್ ಮಾಧ್ಯಮಗಳು ಒಂದಲ್ಲ ಒಂದು ಕಾರಣಕ್ಕೆ ಭಾರತೀಯರ ಕೆಂಗಣ್ಣಿಗೆ ಗುರಿಯಾಗುತ್ತಿದ್ದು, ಮುಂದಿನ ದಿನಗಳಲ್ಲಿ ಇದು ಯಾವ ಹಂತ ತಲುಪಲಿದೆ ಎಂದು ಕಾದು ನೋಡಬೇಕಿದೆ.
ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ನಡೆಯುತ್ತಿರುವ ಮೆಲ್ಬೋರ್ನ್ ಟೆಸ್ಟ್ ಪಂದ್ಯದಲ್ಲಿ ಇಲ್ಲಿಯವರೆಗೆ 4 ದಿನಗಳ ಆಟ ಪೂರ್ಣಗೊಂಡಿದ್ದು, ಐದನೇ ದಿನಕ್ಕೆ ಕಾಲಿರಿಸಿದೆ. ಭಾರತಕ್ಕೆ 340 ರನ್ಗಳ ಗುರಿಯನ್ನು ನೀಡಲಾಗಿದ್ದು, ಪಂದ್ಯದ ಕೊನೆಯ ದಿನವಾದ ಇಂದು ಅತ್ಯಂತ ರೋಚಕತೆಯಿಂದ ಕೂಡಿದೆ. ಅಂತಿಮ ವಿಜಯಲಕ್ಷ್ಮಿ ಯಾರ ಪಾಲಾಗಳಿದ್ದಾಳೆ ಎಂಬುದನ್ನು ಕಾದುನೋಡಬೇಕಿದೆ.