

ಪರ್ತ್: ಇಲ್ಲಿನ ಪರ್ತ್ ಕ್ರೀಡಾಂಗಣದಲ್ಲಿ ನಡೆದ ಆಸ್ಟ್ರೇಲಿಯಾ (Australia) ಹಾಗೂ ಪಾಕಿಸ್ತಾನ (Pakistan) ನಡುವಿನ ಏಕದಿನ ಸರಣಿಯ ಮೂರನೇ ಪಂದ್ಯದಲ್ಲಿ ಪ್ರವಾಸಿ ತಂಡವು 8 ವಿಕೆಟ್ಗಳ ಜಯ ಸಾಧಿಸಿದ್ದು, ಆತಿಥೇಯರಿಗೆ ತವರು ನೆಲದಲ್ಲಿ ಭಾರೀ ಮುಖಭಂಗವಾಗಿದೆ. ಈ ಮೂಲಕ ಪಾಕಿಸ್ತಾನ ತಂಡವು 22 ವರ್ಷಗಳ ಬಳಿಕ ಆಸ್ಟ್ರೇಲಿಯಾ ನೆಲದಲ್ಲಿ ಸರಣಿ ಗೆದ್ದುಕೊಂಡಿದೆ.
ಟಾಸ್ ಗೆದ್ದು ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡ ಪಾಕಿಸ್ತಾನ (Pakistan) ಕ್ರಿಕೆಟ್ ತಂಡವು ಎದುರಾಳಿಗಳನ್ನು (Australia) 31.5 ಓವರ್ಗಳಲ್ಲಿ 140 ರನ್ಗಳಿಗೆ ಕಟ್ಟಿ ಹಾಕಿತ್ತು. ಪಾಕ್ ಪರ ಶಹೀನ್ ಅಫ್ರಿದಿ (8.5-1-32-3), ನಸೀಮ್ ಷಾ (9-0-54-3), ಹ್ಯಾರಿಸ್ ರೌಫ್ (7-1-24-2), ಮೊಹಮ್ಮದ್ ಹಸ್ನೈನ್ (7-0-24-1) ರನ್ ನೀಡಿ ವಿಕೆಟ್ ಪಡೆದಿದ್ದಾರೆ.
141 ರನ್‌ಗಳ ಗುರಿ ಬೆನ್ನತ್ತಿದ್ದ ಪಾಕಿಸ್ತಾನ (Pakistan) ತಂಡವು ಉತ್ತಮ ಆರಂಭ ಪಡೆಯುವಲ್ಲಿ ಯಶಸ್ವಿಯಾದರು. ಮೊದಲ ವಿಕೆಟ್‌ಗೆ ಪಾಕ್ 84 ರನ್‌ಗಳ ಜೊತೆಯಾಟ ನೀಡಿತ್ತು. ಆರಂಭಿಕರ ವಿಕೆಟ್ ಪತನವಾದ ಬಳಿಕ ಕ್ರೀಸ್‌ಗಿಳಿದ ನಾಯಕ ಮೊಹಮ್ಮದ್ ರಿಜ್ವಾನ್ (Mohammad Rizwan) ಮತ್ತು ಬಾಬರ್ ಆಜಂ (Babar Azam) ಜೋಡಿ ವಿಕೆಟ್ ಬಿಟ್ಟುಕೊಡದೇ ತಂಡವನ್ನು ಗೆಲುವಿನ ದಡ ಸೇರಿಸಿದರು. ಪಾಕ್ (Pak) ಪರ ಸೈಮ್ ಅಯೂಬ್ 42 ರನ್, ಅಬ್ದುಲ್ಲಾ ಶಫಿಕ್ 37 ರನ್ ಗಳಿಸಿ ಔಟಾದರೆ, ಮೊಹಮ್ಮದ್ ರಿಜ್ವಾನ್ 30 ರನ್ ಹಾಗೂ ಬಾಬರ್ ಆಜಂ 28 ರನ್ಗಳಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.
ಈ ಮೂಲಕ ಮೂರು ಪಂದ್ಯಗಳ ಏಕದಿನ ಸರಣಿಯನ್ನು 2-1 ಅಂತರದಲ್ಲಿ ಪಾಕಿಸ್ತಾನ ಗೆದ್ದುಕೊಂಡಿದೆ. ಕಳೆದ 22 ವರ್ಷಗಳಲ್ಲಿ ಇದೇ ಮೊದಲಬಾರಿಗೆ ಪಾಕ್, ಆಸ್ಟ್ರೇಲಿಯಾದಲ್ಲಿ ಸರಣಿಗೆದ್ದ ಸಾಧನೆ ಮಾಡಿದೆ. ಇದು ನೂತನ ಕ್ಯಾಪ್ಟನ್ ಮೊಹಮ್ಮದ್ ರಿಜ್ವಾನ್ (Mohammad Rizwan) ಅವರ ನಾಯಕತ್ವದಲ್ಲಿ ಗೆದ್ದ ಮೊದಲ ಸರಣಿಯೂ ಆಗಿದೆ. ಕೊನೆಯದ್ದಾಗಿ 2002ರಲ್ಲಿ ಪಾಕ್ ಆಸೀಸ್ ನೆಲದಲ್ಲಿ ಸರಣಿ ಗೆದ್ದಿತ್ತು. 22 ವರ್ಷಗಳ ಬಳಿಕ ಪಾಕ್ ಎದುರು ತವರು ನೆಲದಲ್ಲಿ ಸರಣಿ ಸೋಲುವ ಮೂಲಕ ಆಸ್ಟ್ರೇಲಿಯಾ ತಂಡವು ತೀವ್ರ ಮುಖಭಂಘವನ್ನು ಅನುಭವಿಸಿದೆ.