

ಮೆಲ್ಬೋರ್ನ್: ಅಮೆರಿಕದ ಮ್ಯಾಡಿಸನ್ ಕೀಯ್ಸ್ ಹ್ಯಾಟ್ರಿಕ್ ಪ್ರಶಸ್ತಿ ನಿರೀಕ್ಷೆಯಲ್ಲಿದ್ದ ಬೆಲಾರಸ್ ತಾರೆ ಅರಿನಾ ಸಬಲೆಂಕಾಗೆ ಆಘಾತ ನೀಡುವ ಮೂಲಕ ಆಸ್ಟ್ರೆಲಿಯನ್ ಓಪನ್ ಮಹಿಳಾ ಸಿಂಗಲ್ಸ್ ವಿಭಾಗದಲ್ಲಿ ಪ್ರಶಸ್ತಿ ಗೆದ್ದುಕೊಂಡಿದ್ದಾರೆ. 29 ವರ್ಷದ ಕೀಯ್ಸ್ಗೆ ಇದು ಚೊಚ್ಚಲ ಗ್ರಾಂಡ್ ಸ್ಲಾಂ ಪ್ರಶಸ್ತಿ ಗೆಲುವಾಗಿದೆ.
19ನೇ ಶ್ರೇಯಾಂಕಿತೆ ಮ್ಯಾಡಿಸನ್ ಕೀಯ್ಸ್, ರಾಡ್ ಲೆವರ್ ಅರೇನಾದಲ್ಲಿ ಶನಿವಾರ ನಡೆದ ಫೈನಲ್ ಪಂದ್ಯದಲ್ಲಿ ಅಗ್ರ ಶ್ರೇಯಾಂಕಿತೆ ಹಾಗೂ ಕಳೆದ 2 ಆವೃತ್ತಿಗಳ ವಿಜೇತೆ ಸಬಲೆಂಕಾ ಎದುರು 6-3, 2-6, 7-5 ಸೆಟ್ಗಳಿಂದ 2 ಗಂಟೆ ಮತ್ತು 2 ನಿಮಿಷಗಳ ಹೋರಾಟದಲ್ಲಿ ಗೆಲುವು ದಾಖಲಿಸಿದರು. ಸೆಮಿಫೈನಲ್ನಲ್ಲಿ 2ನೇ ಶ್ರೇಯಾಂಕಿತೆ ಇಗಾ ಸ್ವಿಯಾಟೆಕ್ಗೆ ಶಾಕ್ ನೀಡಿದ್ದ ಕೀಯ್ಸ್, ಸೆರೇನಾ ವಿಲಿಯಮ್ಸ್ (2005) ಬಳಿಕ ಮೆಲ್ಬೋರ್ನ್ ಪಾರ್ಕ್ನಲ್ಲಿ ವಿಶ್ವದ ಅಗ್ರ ಇಬ್ಬರು ಶ್ರೇಯಾಂಕಿತರಿಗೆ ಸೋಲುಣಿಸಿದ ಮೊದಲ ಆಟಗಾರ್ತಿ ಎನಿಸಿದರು. ವಿಶ್ವ ನಂ. 14 ಕೀಯ್ಸ್ ಈ ಮುನ್ನ 2017ರ ಯುಎಸ್ ಓಪನ್ನಲ್ಲಿ ಮೊದಲ ಬಾರಿ ಗ್ರಾಂಡ್ ಸ್ಲಾಂ ಫೈನಲ್ ಆಡಿದ್ದರೂ, ರನ್ನರ್ಅಪ್ ಸ್ಥಾನಕ್ಕೆ ತೃಪ್ತಿಪಟ್ಟಿದ್ದರು.
ಮಾರ್ಟಿನಾ ಹಿಂಗಿಸ್ (1997-99) ಬಳಿಕ ಆಸ್ಟ್ರೆಲಿಯನ್ ಓಪನ್ನಲ್ಲಿ ಹ್ಯಾಟ್ರಿಕ್ ಪ್ರಶಸ್ತಿ ಗೆದ್ದ ಮೊದಲ ಆಟಗಾರ್ತಿ ಎನಿಸುವ ಸಬಲೆಂಕಾ ಕನಸು ಭಗ್ನಗೊಂಡಿತು. ಜತೆಗೆ 4ನೇ ಗ್ರಾಂಡ್ ಸ್ಲಾಂ ಪ್ರಶಸ್ತಿಯೂ ಕೈತಪ್ಪಿದೆ. 2ನೇ ಸೆಟ್ ಗೆದ್ದು ತಿರುಗೇಟು ನೀಡಲು ಯತ್ನಿಸಿದ 26 ವರ್ಷದ ಸಬಲೆಂಕಾ, ಕೊನೇ ಸೆಟ್ನಲ್ಲಿ ಒಮ್ಮೆ ಮ್ಯಾಚ್ ಪಾಯಿಂಟ್ ರಕ್ಷಿಸಿಕೊಂಡರೂ ಗೆಲ್ಲಲು ಸಾಧ್ಯವಾಗಲಿಲ್ಲ.
ಮ್ಯಾಡಿಸನ್ ಕೀಯ್ಸ್ಗೆ ಪತಿ ಬೋರ್ನ್ ಫ್ರಾಟಂಗೆಲೊ ಅವರೇ 2023ರಿಂದ ಕೋಚ್ ಆಗಿದ್ದು, ಗೆಲುವಿನ ಬಳಿಕ ಪತಿಯನ್ನು ಅಪ್ಪಿಕೊಂಡು ಸಂಭ್ರಮಿಸಿದರು. ಫ್ಲಾವಿಯಾ ಪೆನ್ನೆಟ್ಟಾ ಬಳಿಕ ಚೊಚ್ಚಲ ಗ್ರಾಂಡ್ ಸ್ಲಾಂ ಗೆದ್ದ ಅತಿಹಿರಿಯ ಆಟಗಾರ್ತಿ ಎಂಬ ಸಾಧನೆ ಕೀಯ್ಸ್ ಅವರದಾಗಿದೆ. ಪೆನ್ನೆಟ್ಟಾ 2015ರಲ್ಲಿ 33ನೇ ವಯಸ್ಸಿನಲ್ಲಿ ಯುಎಸ್ ಓಪನ್ನಲ್ಲಿ ಚೊಚ್ಚಲ ಗ್ರಾಂಡ್ ಸ್ಲಾಂ ಗೆದ್ದಿದ್ದರು.
ಮ್ಯಾಡಿಸನ್ ಕೀಯ್ಸ್ ತಾನಾಡಿದ 46ನೇ ಗ್ರಾಂಡ್ ಸ್ಲಾಂನಲ್ಲಿ ಚೊಚ್ಚಲ ಪ್ರಶಸ್ತಿ ಒಲಿಸಿಕೊಂಡರು. ಫ್ಲಾವಿಯಾ ಪೆನ್ನೆಟ್ಟಾ (49) ಮತ್ತು ಮರಿಯನ್ ಬಾತೋರ್ಲಿ (47) ಮಾತ್ರ ಚೊಚ್ಚಲ ಪ್ರಶಸ್ತಿಗಾಗಿ ಇವರಿಗಿಂತ ಹೆಚ್ಚು ಕಾದ ಆಟಗಾರ್ತಿಯರಾಗಿದ್ದಾರೆ.