

ಬೆಂಗಳೂರು: ಕಸ್ತೂರ್‌ಬಾ ರಸ್ತೆಯಲ್ಲಿರುವ ವಿರಾಟ್ ಕೊಹ್ಲಿ ಮಾಲೀಕತ್ವದ ಒನ್ 8 ಕಮ್ಯೂನ್ ಪಬ್ ರಾತ್ರಿ ಅವಧಿಗೂ ಮೀರಿ ತೆರೆದಿದ್ದು, ಕಂಡುಬಂದಿತ್ತು. ಈ ಪಬ್ ಮೇಲೆ ಎಫ್ಐಆರ್ ದಾಖಲಿಸಲಾಗಿದೆ.
ರಾತ್ರಿ ಗಸ್ತಿನಲ್ಲಿದ್ದ ಸಿಬ್ಬಂದಿಗೆ ಪಬ್ ಓಪನ್ ಇರುವುದಾಗಿ ಮಾಹಿತಿ ದೊರೆತಿತ್ತು. ಸ್ಥಳಕ್ಕೆ ಹೋಗಿ ಪರಿಶೀಲಿಸಿದಾಗ, ಜುಲೈ 6ರಂದು ರಾತ್ರಿ 1.20 ವರೆಗೆ ಪಬ್ ತೆರೆದಿದ್ದು ಕಾರ್ಯಾಚರಿಸುತ್ತಿತ್ತು. ಗ್ರಾಹಕರು ಇದ್ದುದು ಕಂಡುಬಂದಿತ್ತು. ಹೀಗಾಗಿ ಅವಧಿಗೂ ಮೀರಿ ಅನಧಿಕೃತವಾಗಿ ಪಬ್ ಓಪನ್ ಇಟ್ಟ ಹಿನ್ನೆಲೆಯಲ್ಲಿ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ.
ವಿರಾಟ್ ಕೊಹ್ಲಿ ಅವರ One8 ಕಮ್ಯೂನ್ ರೆಸ್ಟೋರೆಂಟ್ ಚಿನ್ನಸ್ವಾಮಿ ಕ್ರೀಡಾಂಗಣದಿಂದ ಸ್ವಲ್ಪ ದೂರದಲ್ಲಿದೆ. 2023ರಲ್ಲಿ ಗಾರ್ಡನ್ ಸಿಟಿಯಲ್ಲಿ ಈ ಪಬ್ ಓಪನ್ ಆಗಿತ್ತು. ಮೂರು ಮಹಡಿಗಳಲ್ಲಿ ಹರಡಿದ್ದು, ಬೋಹೀಮಿಯನ್ ಅಲಂಕಾರದೊಂದಿಗೆ ಬೆಂಗಳೂರಿನ ವಿಲಾಸಿ ರೆಸ್ಟೋರೆಂಟ್‌ಗಳಲ್ಲಿ ಒಂದಾಗಿದೆ. ಇಲ್ಲಿ ಕಿಟಕಿಯ ಪಕ್ಕದ ಮೇಜಿನ ಬಳಿ ಕುಳಿತರೆ ಕ್ರಿಕೆಟ್ ಸ್ಟೇಡಿಯಂ ಭಾಗಶಃ ಗೋಚರಿಸುತ್ತದೆ. ಈ ಪಬ್‌ನ ಶಾಖೆಗಳು ಮುಂಬೈ, ಪುಣೆ ಮತ್ತು ಕೋಲ್ಕತ್ತಾದಲ್ಲಿವೆ. ಈ ರೆಸ್ಟೋರೆಂಟ್ ಸರಪಳಿಯ ಎಂಟನೇ ಔಟ್‌ಲೆಟ್ ಇದಾಗಿದೆ.