ತೆಂಡುಲ್ಕರ್ 50 ಲಕ್ಷ ರೂ. ದೇಣಿಗೆ: ಮಹಾಮಾರಿ ಕರೊನಾ ವೈರಸ್ ತಡೆಗಟ್ಟಲು ಕ್ರೀಡಾಪಟುಗಳಿಂದ ಆರ್ಥಿಕ ನೆರವು

Sachin
Published on

ಮಹಾಮಾರಿ ಕೋವಿಡ್-19 ತಡೆಗಟ್ಟಲು ಇಡೀ ವಿಶ್ವವೇ ಒಂದಾಗಿ ಹೋರಾಡುತ್ತಿದೆ. ಇದಕ್ಕೆ ಬೆಂಬಲವಾಗಿ ಕ್ರೀಡಾ ವಲಯದಿಂದ ಕೂಡ ಸಾಕಷ್ಟು ನೆರವು ಹರಿದುಬರುತ್ತಿದೆ. ಭಾರತದ ಸ್ಟಾರ್ ಕ್ರೀಡಾಪಟುಗಳು ವೈಯಕ್ತಿಕ ದೇಣಿಗೆ ನೀಡುವ ಮೂಲಕ ನೆರವಾಗುತ್ತಿದ್ದಾರೆ. ಈಗಾಗಲೇ ಸೌರವ್ ಗಂಗೂಲಿ, ಪಿವಿ ಸಿಂಧು, ರೋಜರ್ ಫೆಡರರ್ ತಮ್ಮ ಕೈಲಾದಷ್ಟು ಧನ ಸಹಾಯ ಮಾಡುವ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ. ಇನ್ನಷ್ಟು ಕ್ರೀಡಾತಾರೆಯರು ಈಗ ಇದೇ ಹಾದಿ ಹಿಡಿದಿದ್ದಾರೆ.

ಒಂದು ತಿಂಗಳ ವೇತನ ನೀಡಿದ ಹಿಮಾದಾಸ್: ಭಾರತದ ಸ್ಟಾರ್ ಸ್ಪ್ರಿಂಟರ್ ಹಿಮಾ ದಾಸ್ ಅಸ್ಸಾಂ ಸರ್ಕಾರಕ್ಕೆ ಒಂದು ತಿಂಗಳ ವೇತನವನ್ನು ದೇಣಿಗೆಯಾಗಿ ನೀಡಿದ್ದಾರೆ. 20 ವಯೋಮಿತಿ ವಿಶ್ವ ಚಾಂಪಿಯನ್​ಷಿಪ್ 400 ಮೀಟರ್ ಸ್ವರ್ಣ ಪದಕ ವಿಜೇತೆ ಹಿಮಾ ದಾಸ್, ಗುವಾಹಟಿಯಲ್ಲಿ ಇಂಡಿಯನ್ ಆಯಿಲ್ ಸಂಸ್ಥೆಯಲ್ಲಿ ಎಚ್​ಆರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.

3 ತಿಂಗಳ ವೇತನ ನೀಡಿದ ಲಕ್ಷ್ಮೀ ರತನ್ ಶುಕ್ಲಾ: ಭಾರತ ತಂಡದ ಮಾಜಿ ಆಟಗಾರ ಹಾಗೂ ಪಶ್ಚಿಮ ಬಂಗಾಳದ ಹಾಲಿ ಕ್ರೀಡಾ ಸಚಿವ ಲಕ್ಷ್ಮೀ ರತನ್ ಶುಕ್ಲಾ ತಮ್ಮ ಮೂರು ತಿಂಗಳ ಶಾಸಕರ ವೇತನವನ್ನು ಕೋವಿಡ್-19ರ ಪರಿಹಾರ ನಿಧಿಗೆ ನೀಡಿದ್ದಾರೆ. ನಮ್ಮ ಕೈಲಾದಷ್ಟು ಸಹಾಯ ಮಾಡಬೇಕು. ಮುಖ್ಯಮಂತ್ರಿ ಪರಿಹಾರ ನಿಧಿಗೆ ನನ್ನ ಮೂರು ತಿಂಗಳ ಶಾಸಕರ ಸಂಬಳ ನೀಡುತ್ತಿರುವುದಾಗಿ ಹೇಳಿದ್ದಾರೆ. ಜತೆಗೆ ಮೂರು ತಿಂಗಳ ಬಿಸಿಸಿಐ ಪಿಂಚಣಿ ನೀಡುವುದಾಗಿ ಘೊಷಿಸಿದ್ದಾರೆ. ಲಕ್ಷ್ಮೀರತನ್ ಶುಕ್ಲಾ 1999ರಲ್ಲಿ ರಾಷ್ಟ್ರೀಯ ತಂಡದ ಪರ 3 ಏಕದಿನ ಪಂದ್ಯಗಳನ್ನಾಡಿದ್ದಾರೆ. -ಏಜೆನ್ಸೀಸ್

ವೈದ್ಯಕೀಯ ಪರಿಕರ ಸಿದ್ಧ ಪಡಿಸುತ್ತಿದೆ ಹಾಕಿ ಕಿಟ್ ಸಂಸ್ಥೆ!

ಹಾಕಿ ಪರಿಕರಗಳ ತಯಾರಿಕಾ ಸಂಸ್ಥೆ ಬಾಯರ್ ಕರೊನಾ ವೈರಸ್ ಪೀಡಿತರಿಗಾಗಿ ವೈದ್ಯಕೀಯ ಹೆಲ್ಮೆಟ್ ತಯಾರಿಸಲು ಮುಂದಾಗಿದೆ. ಅಮೆರಿಕ ಹಾಗೂ ಕೆನಡದಲ್ಲಿ ಕರೊನಾ ವೈರಸ್ ತಡೆಗಟ್ಟಲು ಹೋರಾಡುತ್ತಿರುವ ವೈದ್ಯರಿಗೆ ಈ ವೈದ್ಯಕೀಯ ಹೆಲ್ಮೆಟ್ ಪೂರೈಸಲಿದೆ. ಶುಕ್ರವಾರದ ವೇಳೆಗೆ ನಾಲ್ಕು ಸಾವಿರ ಪರಿಕರ ತಯಾರಿಸುವ ಗುರಿ ಹೊಂದಿದೆ.

ಜೋಕೊವಿಕ್ 8.3 ಕೋಟಿ ರೂ.

ವಿಶ್ವ ನಂ. 1 ಟೆನಿಸ್ ತಾರೆ ನೊವಾಕ್ ಜೋಕೊವಿಕ್ ತವರು ದೇಶ ಸೆರ್ಬಿಯಾ ದಲ್ಲಿ ಕರೊನಾ ವಿರುದ್ಧ ಹೋರಾಟಕ್ಕೆ 8.3 ಕೋಟಿ ರೂ. ದೇಣಿಗೆ ನೀಡಿ ನೆರವಾಗಿದ್ದಾರೆ. ಜೋಕೋ ಕುಟುಂಬ ಲಾಕ್​ಡೌನ್​ನಿಂದ ಸದ್ಯ ಸ್ಪೇನ್​ನಲ್ಲಿ ಉಳಿದುಕೊಂಡಿದ್ದು, ಸೆರ್ಬಿಯಾದಲ್ಲಿ ವೈದ್ಯಕೀಯ ಪರಿಕರ ಮತ್ತು ಸ್ಯಾನಿಟೈಸರ್ ಖರೀದಿಗೆ ಆರ್ಥಿಕ ನೆರವು ನೀಡಿದ್ದಾರೆ. ಸದ್ಯ ಟೆನಿಸ್ ಚಟುವಟಿಕೆ ಜೂನ್ 7ರವರೆಗೆ ಸ್ಥಗಿತಗೊಂಡಿದೆ.

-ಠಿ;50 ಲಕ್ಷ ನೀಡಿದ ಸಚಿನ್

ಕ್ರಿಕೆಟ್ ದಿಗ್ಗಜ ಸಚಿನ್ ತೆಂಡುಲ್ಕರ್ ವೈಯಕ್ತಿಕವಾಗಿ 50 ಲಕ್ಷ ರೂಪಾಯಿ ದೇಣಿಗೆ ಘೊಷಿಸಿದ್ದಾರೆ. ಪ್ರಧಾನ ಮಂತ್ರಿ ಪರಿಹಾರ ನಿಧಿ ಹಾಗೂ ಮಹಾರಾಷ್ಟ್ರ ಮುಖ್ಯಮಂತ್ರಿ ಪರಿಹಾರ ನಿಧಿಗೆ ತಲಾ 25 ಲಕ್ಷ ರೂಪಾಯಿ ನೀಡಿದ್ದಾರೆ. ಅಲ್ಲದೆ, ಸೌರಾಷ್ಟ್ರ ಕ್ರಿಕೆಟ್ ಸಂಸ್ಥೆಯೂ ಕೋವಿಡ್ ಪರಿಹಾರ ನಿಧಿಗೆ 42 ಲಕ್ಷ ರೂಪಾಯಿ ನೀಡಿದೆ.

ಫೌಂಡೇಷನ್ ಮೂಲಕ ಅಭಿನವ್ ಬಿಂದ್ರಾ ಸಹಾಯ

2008ರ ಬೀಜಿಂಗ್ ಒಲಿಂಪಿಕ್ಸ್ ಸ್ವರ್ಣ ಪದಕ ವಿಜೇತ ಅಭಿನವ್ ಬಿಂದ್ರಾ ತಮ್ಮ ಎರಡು ಫೌಂಡೇಷನ್​ಗಳಾದ ಅಭಿನವ್ ಬಿಂದ್ರಾ ಫೌಂಡೇಷನ್ ಹಾಗೂ ಫೆಸಿಲಿಟಿ ಫಾರ್ ಫಿಸಿಕಲ್ ಎಕ್ಸೆಲೆನ್ಸ್ (ಎಬಿಟಿಪಿ) ಸಂಸ್ಥೆ ಮೂಲಕ ಸಹಾಯ ನೀಡಲು ಮುಂದಾಗಿದ್ದಾರೆ.

ಪಾಕ್ ಅಂಪೈರ್ ದಾರ್ ಉಚಿತ ಆಹಾರ ವಿತರಣೆ

ಪಾಕಿಸ್ತಾನದ ಕ್ರಿಕೆಟ್ ಅಂಪೈರ್ ಅಲೀಮ್ ದಾರ್ ಕರೊನಾದಿಂದಾಗಿ ನೌಕರಿ ಕಳೆದುಕೊಂಡಿರುವವರಿಗೆ ತಮ್ಮ ರೆಸ್ಟೋರೆಂಟ್​ನಲ್ಲಿ ಉಚಿತ ಆಹಾರ ನೀಡುವುದಾಗಿ ಘೊಷಿಸಿದ್ದಾರೆ. ಜತೆಗೆ ಪಾಕಿಸ್ತಾನದ ಮಾಜಿ ನಾಯಕ ಶಾಹಿದ್ ಆಫ್ರಿದಿ ತಮ್ಮ ಚಾರಿಟಿ ಫೌಂಡೇಷನ್​ನಿಂದ ಪರಿಹಾರ ಕಾರ್ಯಕೈಗೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net