

ಢಾಕಾ: ಕಳೆದ ಕೆಲವು ದಿನಗಳಿಂದ ಸಾಮಾಜಿಕ ಜಾಲತಾಣದಲ್ಲಿ ಬಾಂಗ್ಲಾದೇಶದ ಸ್ಟಾರ್ ಕ್ರಿಕೆಟಿಗ, ಮಾಜಿ ಕ್ಯಾಪ್ಟನ್ ಶಕೀಬ್ ಅಲ್ ಹಸನ್ ವಿರುದ್ಧ ದೊಡ್ಡ ಆರೋಪವೊಂದು ಕೇಳಿಬಂದಿದ್ದು, ಶಕೀಬ್ ತನ್ನ ಹೆಂಡತಿಗೆ ವಂಚನೆ ಮಾಡಿದ್ದಾನೆ. ಪತ್ನಿಗೆ ಮೋಸ ಮಾಡಿ, ಸಿಕ್ಕಿಬಿದ್ದಿದ್ದಾನೆ ಎಂಬ ಹಲವು ಆರೋಪಗಳು ಆಲ್ರೌಂಡರ್ ವಿರುದ್ಧ ವ್ಯಾಪಕವಾಗಿ ವ್ಯಕ್ತವಾಗಿತ್ತು. ಈ ವಿಷಯವು ಭಾರೀ ವಿವಾದಕ್ಕೆ ತಿರುಗುತ್ತಿದ್ದಂತೆ ಪ್ರತಿಕ್ರಿಯಿಸಿರುವ ಶಕೀಬ್ ಪತ್ನಿ ಉಮ್ಮೆ ಅಹಮದ್ ಶಿಶಿರ್, ಕಡೆಗೂ ಸ್ಪಷ್ಟನೆ ನೀಡುವ ಮೂಲಕ ವದಂತಿಗಳಿಗೆ ತೆರೆ ಎಳೆದಿದ್ದಾರೆ.
ಜಾಲತಾಣಗಳಲ್ಲಿ ಆಗಾಗ್ಗೆ ಟ್ರೋಲ್, ಟೀಕೆಗಳಿಗೆ ಸುಲಭವಾಗಿ ಗುರಿಯಾಗುವ ಶಕೀಬ್, ಈ ಬಾರಿ ತಮ್ಮ ದಾಂಪತ್ಯ ಜೀವನಕ್ಕೆ ಸಂಬಂಧಿಸಿದಂತೆ ವಿವಾದವೊಂದಕ್ಕೆ ಸಿಲುಕಿದ್ದಾರೆ. ಇದೀಗ ಪತಿಯ ವಿರುದ್ಧ ಕೇಳಿಬಂದ ಆರೋಪಗಳಿಗೆ ಸ್ಪಂದಿಸಿರುವ ಹಸನ್ ಪತ್ನಿ ಉಮ್ಮೆ ಅಹಮದ್ ಶಿಶಿರ್, "ನಾವಿಬ್ಬರು ಮದುವೆಯಾಗಿ ಇಂದಿಗೆ 13 ವರ್ಷಗಳು ಕಳೆದಿವೆ. ಅಂದಿನಿಂದ ಇಂದಿನವರೆಗೂ ಅವರು ಒಬ್ಬ ಒಳ್ಳೆಯ ಗಂಡನಾಗಿ ನನ್ನನ್ನು ಆರೈಕೆ ಮಾಡುತ್ತಿದ್ದಾರೆ. ನೀವೇಳುವಂತೆ ಯಾವ ರೀತಿಯಲ್ಲಿಯೂ ನನ್ನ ಪತಿ ನನಗೆ ಮೋಸ ಮಾಡಿಲ್ಲ" ಎಂದು ಖಡಕ್ ಆಗಿ ಹೇಳಿದರು.
"ನೀವು ಅವರ ವೃತ್ತಿ ಅಥವಾ ಆಯ್ಕೆಗಳ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ಹೊರಹಾಕುಬಹುದೇ ವಿನಃ ನಮ್ಮ ಖಾಸಗಿ ಜೀವನದ ಬಗ್ಗೆ ಅಲ್ಲ. ಶಕೀಬ್ರ ಕ್ರಿಕೆಟ್ ಕರಿಯರ್ ಕುರಿತು ವ್ಯಂಗ್ಯವಾಡಿ, ಆರೋಪಿಸಿ ನನಗೆ ಏನೂ ಬೇಸರವಿಲ್ಲ. ಆದ್ರೆ, ನನ್ನ ಕುಟುಂಬಕ್ಕೆ ಸಂಬಂಧಿಸಿದಂತೆ ಏನಾದರೂ ಹೇಳಿದ್ರೆ ಖಂಡಿತ ಆಕ್ಷೇಪಿಸುವೆ. ಹಸನ್ ಒಳ್ಳೆಯ ಪತಿ ಹಾಗೂ ತಂದೆ. ಅವರು ಸದಾ ಪ್ರಾಮಾಣಿಕವಾಗಿದ್ದು, ನನ್ನನ್ನು ನೋಯಿಸುವ ಕೆಲಸವನ್ನು ಎಂದಿಗೂ ಮಾಡುವುದಿಲ್ಲ" ಎಂದು ಹೇಳಿದರು.
"ದಯವಿಟ್ಟು ಇದನ್ನೆಲ್ಲಾ ಇಲ್ಲಿಗೆ ನಿಲ್ಲಿಸಿ. ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುವ ಸುಳ್ಳು ವಿಚಾರಗಳನ್ನು ನಮಗೆ ಅಂಟಿಸಿ, ನಮ್ಮ ಭಾವನೆಗಳೊಂದಿಗೆ ಚೆಲ್ಲಾಟವಾಡಬೇಡಿ. ಸೋಷಿಯಲ್ ಮೀಡಿಯಾದಲ್ಲಿ ಬರುವುದು ಕೇವಲ ಕಟ್ ಅಂಡ್ ಪೇಸ್ಟ್ ಫೋಟೋಗಳು, ಸುದ್ದಿಗಳು. ಇದನ್ನು ಮುಂದಿಟ್ಟು ಸುಖಾಸುಮ್ಮನೆ ಕಥೆ ಕಟ್ಟಿ ಮಾತನಾಡಬೇಡಿ. ನನ್ನ ವೈಯಕ್ತಿಕ ಬದುಕಿನ ಬಗ್ಗೆ ವಿವರಿಸುವ ಅವಶ್ಯಕತೆ ನನಗಿಲ್ಲ. ಶಕೀಬ್ಗೆ ಮುಂಬರುವ ಪಾಕ್ ವಿರುದ್ಧದ ಸರಣಿಯತ್ತ ಗಮನಹರಿಸಿದ್ದಾರೆ ಮತ್ತು ನಾನು ನನ್ನ ಕುಟುಂಬದ ಜವಾಬ್ದಾರಿಗಳನ್ನು ನಿಭಾಯಿಸುತ್ತಿದ್ದೀನಿ. ನಾವಿಬ್ಬರು ಒಂದು ತಂಡದಂತೆ" ಎಂದು ಹೇಳಿದ್ದಾರೆ,(ಏಜೆನ್ಸೀಸ್).