ಕಿರಿಯರ ಫಿಫಾ ವಿಶ್ವಕಪ್ ಮುಂದಕ್ಕೆ

Fifa
Published on

ನವದೆಹಲಿ: ಭಾರತದ ಆತಿಥ್ಯದಲ್ಲಿ ನವೆಂಬರ್​ನಲ್ಲಿ ನಡೆಯಬೇಕಾಗಿದ್ದ ಮಹಿಳೆಯರ 17 ವಯೋಮಿತಿ ಫಿಫಾ ವಿಶ್ವಕಪ್ ಟೂರ್ನಿಯನ್ನು ಮುಂದೂಡಲಾಗಿದೆ. ವಿಶ್ವ ಫುಟ್​ಬಾಲ್ ಆಡಳಿತ ಸಂಸ್ಥೆ ಫಿಫಾ, ಕರೊನಾ ಕಳವಳ ಜಗತ್ತಿನ ಎಲ್ಲೆಡೆ ವ್ಯಾಪಕವಾಗಿರುವ ಹಿನ್ನೆಲೆಯಲ್ಲಿ ಶನಿವಾರ ಈ ಮಹತ್ವದ ನಿರ್ಧಾರವನ್ನು ಕೈಗೊಂಡಿದೆ. ಈಗಾಗಲೆ 2017ರಲ್ಲಿ ಪುರುಷರ 17 ವಯೋಮಿತಿ ಫಿಫಾ ವಿಶ್ವಕಪ್ ಟೂರ್ನಿಯನ್ನು ಯಶಸ್ವಿಯಾಗಿ ಆಯೋಜಿಸಿದ್ದ ಭಾರತ, ಈ ವರ್ಷ ನವೆಂಬರ್ 2 ರಿಂದ 21ರವರೆಗೆ ಕೋಲ್ಕತ, ಗುವಾಹಟಿ, ಭುವನೇಶ್ವರ, ಅಹಮದಾಬಾದ್ ಮತ್ತು ನವಿ ಮುಂಬೈನಲ್ಲಿ ಮಹಿಳಾ ವಿಭಾಗದ ಭವಿಷ್ಯದ ತಾರೆಯರ ಪ್ರಮುಖ ಟೂರ್ನಿಯನ್ನು ಆಯೋಜಿಸಲು ಸಜ್ಜಾಗಿತ್ತು. 16 ತಂಡಗಳ ಈ ಟೂರ್ನಿಗೆ ಆತಿಥೇಯ ತಂಡವಾಗಿ ಭಾರತ ಈಗಾಗಲೆ ನೇರಪ್ರವೇಶ ಪಡೆದುಕೊಂಡಿತ್ತು. ಮಹಿಳೆಯರ 17 ವಯೋಮಿತಿ ವಿಶ್ವಕಪ್ ಟೂರ್ನಿಯಲ್ಲಿ ಭಾರತಕ್ಕಿದು ಮೊದಲ ಅವಕಾಶವೆನಿಸಿದೆ.

ಕೋವಿಡ್-19ರ ಪರಿಣಾಮಗಳ ಬಗ್ಗೆ ಪರಿಶೀಲನೆ ನಡೆಸಲು ಫಿಫಾ ಕೌನ್ಸಿಲ್ ರಚಿಸಿದ್ದ ಫಿಫಾ ಕಾನ್ಪೆಡರೇಷನ್​ಗಳ ರ್ವಂಗ್ ಗ್ರೂಪ್​ನ ಸಲಹೆಯಂತೆ ಫಿಫಾ ಈ ನಿರ್ಧಾರವನ್ನು ತೆಗೆದುಕೊಂಡಿದೆ. ಇದೇ ಫಿಫಾ ರ್ವಂಗ್ ಗ್ರೂಪ್ ಸೂಚನೆಯಂತೆ ಈ ಮುನ್ನ, ಆಗಸ್ಟ್-ಸೆಪ್ಟೆಂಬರ್​ನಲ್ಲಿ ಪನಾಮ-ಕೋಸ್ಟಾರಿಕಾದಲ್ಲಿ ನಡೆಯಬೇಕಿದ್ದ ಮಹಿಳೆಯರ 20 ವಯೋಮಿತಿ ಫಿಫಾ ವಿಶ್ವಕಪ್ ಟೂರ್ನಿಯನ್ನೂ ಮುಂದೂಡಲಾಗಿತ್ತು. ಟೂರ್ನಿಯ ಹೊಸ ದಿನಾಂಕಗಳನ್ನು ಶೀಘ್ರದಲ್ಲೇ ನಿರ್ಧರಿಸಲಾಗುವುದು ಎಂದು ಫಿಫಾ ತಿಳಿಸಿದೆ.

ನಿರೀಕ್ಷಿತ ಎಂದ ಎಐಎಫ್​ಎಫ್: ಮಹಿಳೆಯರ 17 ವಯೋಮಿತಿ ಫಿಫಾ ವಿಶ್ವಕಪ್ ಮುಂದೂಡಿರುವುದು ನಿರೀಕ್ಷಿತ ನಿರ್ಧಾರವಾಗಿದೆ ಎಂದು ಅಖಿಲ ಭಾರತ ಫುಟ್​ಬಾಲ್ ಫೆಡರೇಷನ್ (ಎಐಎಫ್​ಎಫ್) ತಿಳಿಸಿದೆ. ಟೂರ್ನಿಗಾಗಿ ಯುರೋಪ್, ಒಶಿಯಾನಿಯಾ, ದಕ್ಷಿಣ, ಉತ್ತರ, ಕೇಂದ್ರ ಅಮೆರಿಕ, ಕೆರಿಬಿಯನ್ ಮತ್ತು ಆಫ್ರಿಕಾಗಳಲ್ಲಿ ನಡೆಯಬೇಕಾಗಿದ್ದ ಅರ್ಹತಾ ಪಂದ್ಯಗಳು ಇನ್ನೂ ನಡೆದಿಲ್ಲ. ಕರೊನಾದಿಂದಾಗಿ ಇವುಗಳನ್ನು ಮುಂದೂಡಲಾಗಿದೆ.

ಒಲಿಂಪಿಕ್ಸ್ ಫುಟ್​ಬಾಲ್​ಗೆ ಪುರುಷರ ವಯೋಮಿತಿ ಏರಿಕೆ

ಫಿಫಾ ನಿಯಮದ ಪ್ರಕಾರ ಒಲಿಂಪಿಕ್ಸ್ ನಲ್ಲಿ ನಡೆಯುವ ಫುಟ್​ಬಾಲ್ ಸ್ಪರ್ಧೆಯಲ್ಲಿ 23 ವಯೋಮಿತಿಯ ಆಟಗಾರರ ತಂಡ (ತಂಡದಲ್ಲಿ ಕೇವಲ ಮೂವರು ಅದಕ್ಕಿಂತ ಹೆಚ್ಚಿನ ವಯಸ್ಸಿನ ಆಟಗಾರರು ಆಡಬಹುದು) ಕಣಕ್ಕಿಳಿಯಲು ಅವಕಾಶವಿರುತ್ತದೆ. ಅದರೆ ಈ ಬಾರಿ ಟೋಕಿಯೊ ಒಲಿಂಪಿಕ್ಸ್ ಒಂದು ವರ್ಷದ ಮಟ್ಟಿಗೆ ಮುಂದೂಡಲ್ಪಟ್ಟಿರುವ ಕಾರಣ ಫಿಫಾ ಈ ನಿಯಮವನ್ನು ಸ್ವಲ್ಪ ಸಡಿಲಗೊಳಿಸಿದೆ. ಟೋಕಿಯೊ ಗೇಮ್ಸ್​ನ ಫುಟ್​ಬಾಲ್ ತಂಡಗಳಲ್ಲಿ ಆಡುವ ಆಟಗಾರರ ವಯೋಮಿತಿಯನ್ನು ಏರಿಸಿರುವ ಫಿಫಾ, 1997ರ ಜನವರಿ 1ರಂದು ಅಥವಾ ಅದರ ನಂತರ ಜನಿಸಿರುವ ಆಟಗಾರರಿಗೆ ಆಡುವ ಅವಕಾಶ ಕಲ್ಪಿಸಿದೆ. ಇದು ಈ ವರ್ಷದ ನಡೆಯಬೇಕಾಗಿದ್ದ ಒಲಿಂಪಿಕ್ಸ್​ಗೆ ನಿಗದಿಪಡಿಸಲಾಗಿದ್ದ ವಯೋಮಿತಿ ಗಡುವು ಆಗಿತ್ತು. ಅದನ್ನು ಈಗ ಮುಂದಿನ ವರ್ಷದ ಒಲಿಂಪಿಕ್ಸ್​ಗೂ ಮುಂದುವರಿಸಲು ನಿರ್ಧರಿಸಲಾಗಿದೆ. ಹೀಗಾಗಿ ಈ ವರ್ಷ ಒಲಿಂಪಿಕ್ಸ್​ನಲ್ಲಿ ಆಡಬೇಕಾಗಿದ್ದ ಕೆಲ ಫುಟ್​ಬಾಲ್ ಅಟಗಾರರುವ ವಯಸ್ಸಿನ ಏರಿಕೆ ಕಾರಣದಿಂದಾಗಿ ಮುಂದಿನ ವರ್ಷದ ಒಲಿಂಪಿಕ್ಸ್​ನಲ್ಲಿ ಆಡುವ ಅವಕಾಶದಿಂದ ವಂಚಿತರಾಗುವುದು ತಪ್ಪಿದೆ. ಅವರು ಈಗ 24ನೇ ವಯಸ್ಸಿನಲ್ಲಿ ಒಲಿಂಪಿಕ್ಸ್ ಆಡಬಹುದಾಗಿದೆ. ಜತೆಗೆ ಜೂನ್ ತಿಂಗಳಲ್ಲಿ ನಿಗದಿಯಾಗಿರುವ ಎಲ್ಲ ಅಂತಾರಾಷ್ಟ್ರೀಯ ಫುಟ್​ಬಾಲ್ ಪಂದ್ಯಗಳನ್ನು ರದ್ದುಗೊಳಿಸಲು ಫಿಫಾ ರ್ವಂಗ್ ಗ್ರೂಪ್ ನಿರ್ಧರಿಸಿದೆ.

ಅರ್ಹತಾ ಗಡುವು ನಿಗದಿಪಡಿಸಿದ ಐಒಸಿ

ಲೌಸನ್ನೆ: ಕೋವಿಡ್-19 ರಿಂದಾಗಿ ಈಗಾಗಲೆ ಮುಂದಿನ ವರ್ಷಕ್ಕೆ ಮುಂಡೂಡಲ್ಪಟ್ಟಿರುವ ಟೋಕಿಯೊ ಒಲಿಂಪಿಕ್ಸ್ ಕ್ರೀಡಾಕೂಟಕ್ಕೆ ಅರ್ಹತೆ ಪಡೆಯಲು ಕ್ರೀಡಾಪಟುಗಳಿಗೆ ಹೊಸ ಗಡುವಿನ ದಿನಾಂಕವನ್ನು ಅಂತಾರಾಷ್ಟ್ರೀಯ ಒಲಿಂಪಿಕ್ಸ್ ಸಮಿತಿ (ಐಒಸಿ) ನಿಗದಿಪಡಿಸಿದೆ. ಹೊಸ ವೇಳಾಪಟ್ಟಿಯ ಪ್ರಕಾರ ಎಲ್ಲ ಕ್ರೀಡಾ ಸಂಸ್ಥೆಗಳು 2021ರ ಜೂನ್ 29ರೊಳಗೆ ಕ್ರೀಡಾಪಟುಗಳ ಅರ್ಹತಾ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಬೇಕಾಗಿದೆ.

ರಾಷ್ಟ್ರೀಯ ಒಲಿಂಪಿಕ್ ಸಮಿತಿ (ಎನ್​ಒಸಿ) ಅಧ್ಯಕ್ಷರು, ಪ್ರಧಾನ ಕಾರ್ಯದರ್ಶಿಗಳು, ಚೆಫ್ ಡಿ ಮಿಷನ್ಸ್, ಐಒಸಿ ನಿರ್ದೇಶಕರಿಗೆ ಈ ಕುರಿತು ಈಗಾಗಲೇ ಮಾಹಿತಿ ರವಾನಿಸಲಾಗಿದೆ. ‘ನೂತನ ಅರ್ಹತಾ ಅವಧಿಯನ್ನು 2021ರ ಜೂನ್ 29ರವರೆಗೆ ವಿಸ್ತರಿಸಲಾಗಿದೆ. ಅಂತಾರಾಷ್ಟ್ರೀಯ ಕ್ರೀಡಾ ಫೆಡರೇಷನ್​ಗಳು ಅರ್ಹತಾ ಪ್ರಕ್ರಿಯೆಗಳನ್ನು ಇದೇ ಅವಧಿಯಲ್ಲಿ ಮುಗಿಸಬೇಕಿದೆ’ ಎಂದು ಐಒಸಿ ನಿರ್ದೇಶಕ ಜೇಮ್್ಸ ಮೆಕ್​ಲೊಯಿಡ್ ತಿಳಿಸಿದ್ದಾರೆ. ಜತೆಗೆ ಒಲಿಂಪಿಕ್ಸ್​ಗೆ

ಕ್ರೀಡಾಪಟುಗಳ ನೋಂದಣಿ ಪ್ರಕ್ರಿಯೆಯ ಗಡುವನ್ನು 2021ರ ಜುಲೈ 5ಕ್ಕೆ ನಿಗದಿಪಡಿಸಲಾಗಿದೆ. ಏಪ್ರಿಲ್ ಮಧ್ಯದ ವೇಳೆಗೆ ದಿನಾಂಕ, ಸ್ಥಳ ಮುಂತಾದ ಅರ್ಹತಾ ವ್ಯವಸ್ಥೆಗಳನ್ನು ಅಂತಿಮಗೊಳಿಸಬೇಕಿದೆ ಎಂದಿದ್ದಾರೆ. ಒಲಿಂಪಿಕ್ಸ್​ನಲ್ಲಿ 11 ಸಾವಿರಕ್ಕೂ ಅಧಿಕ ಕ್ರೀಡಾಪಟುಗಳು ಪಾಲ್ಗೊಳ್ಳಬೇಕಿದ್ದು, ಈ ಪೈಕಿ ಶೇ. 57ರಷ್ಟು ಕ್ರೀಡಾಪಟುಗಳ ಅರ್ಹತೆ ಖಚಿತಗೊಂಡಿದೆ. ಶೇ. 43ರಷ್ಟು ಕ್ರೀಡಾಪಟುಗಳ ಒಲಿಂಪಿಕ್ಸ್ ಅರ್ಹತೆ ಇನ್ನಷ್ಟೇ ಅಂತಿಮಗೊಳ್ಳಬೇಕಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net