

ಮುಂಬೈ: ಭಾರತ ಮಹಿಳಾ ತಂಡದ ಬ್ಯಾಟರ್ ಜೆಮೀಮಾ ರೋಡ್ರಿಗಸ್ ಅವರ ತಂದೆ ಐವಾನ್ ರೋಡ್ರಿಗಸ್ ಮುಂಬೈನ ಅತ್ಯಂತ ಹಳೆಯ ಕ್ರಿಕೆಟ್ ಕ್ಲಬ್ಗಳಲ್ಲಿ ಒಂದಾರುವ ಖಾರ್ ಜಿಮ್ಖಾನದ ಸಭಾಂಗಣವನ್ನು ಮತಾಂತರ ಪ್ರಯತ್ನದಂಥ ಧಾರ್ಮಿಕ ಚಟುವಟಿಕೆಗಳಿಗೆ ಬಳಸಿರುವ ಆರೋಪ ಎದುರಿಸಿದ್ದಾರೆ. ಇದರಿಂದಾಗಿ ಜೆಮೀಮಾಗೆ ನೀಡಲಾಗಿದ್ದ ಖಾರ್ ಜಿಮ್ಖಾನಾದ ಗೌರವ ಸದಸ್ಯತ್ವವನ್ನು ರದ್ದುಗೊಳಿಸಲಾಗಿದೆ.
ಭಾರತ ಪರ 3 ಟೆಸ್ಟ್, 30 ಏಕದಿನ, 104 ಟಿ20 ಪಂದ್ಯಗಳನ್ನು ಆಡಿರುವ ಜೆಮೀಮಾ, ಇತ್ತೀಚೆಗೆ ಮಹಿಳೆಯರ ಟಿ20 ವಿಶ್ವಕಪ್ನಲ್ಲೂ ಭಾಗವಹಿಸಿದ್ದರು. 2023ರಲ್ಲಿ ಅವರು 3 ವರ್ಷಗಳಿಗೆ ಖಾರ್ ಜಿಮ್ಖಾನಾದ ಸದಸ್ಯತ್ವ ಪಡೆದ ಮೊದಲ ಮಹಿಳಾ ಕ್ರಿಕೆಟರ್ ಎನಿಸಿದ್ದರು. ಆದರೆ ಭಾನುವಾರ ನಡೆದ ಕ್ಲಬ್ನ ವಾರ್ಷಿಕ ಮಹಾಸಭೆಯಲ್ಲಿ ಜೆಮೀಮಾ ಸದಸ್ಯತ್ವ ರದ್ದುಗೊಳಿಸಲಾಗಿದೆ.
ಜೆಮೀಮಾ ತಂದೆ ಐವಾನ್ ರೋಡ್ರಿಗಸ್ ಪುತ್ರಿಯ ಕ್ಲಬ್ ಸದಸ್ಯತ್ವವನ್ನು ಬಳಸಿಕೊಂಡು, ಕಳೆದ ಒಂದು ವರ್ಷದಿಂದ ಪ್ರತಿ ವಾರಾಂತ್ಯಕ್ಕೆ ಕ್ಲಬ್ನ ಸಭಾಂಗಣವನ್ನು ತನ್ನ ಧಾರ್ಮಿಕ ಚಟುವಟಿಕೆಗಳಿಗೆ ಬಳಸಿದ್ದಾರೆ. "ಬ್ರದರ್ ಮ್ಯಾನ್ಯುಯೆಲ್ ಮಿನಿಸ್ಟ್ರೀಸ್' ಗುಂಪಿನ ಭಾಗವಾಗಿರುವ ಅವರು ಅದರ ಮತಾಂತರ ಪ್ರಯತ್ನಗಳಿಗೆ ಕ್ಲಬ್ ಸಭಾಂಗಣವನ್ನು ಬಳಸಿಕೊಂಡಿದ್ದಾರೆ. ಹೀಗಾಗಿ ಕ್ಲಬ್ ಸದಸ್ಯತ್ವವನ್ನು ದುರುಪಯೋಗ ಪಡಿಸಿಕೊಂಡಿರುವ ಆರೋಪದ ಮೇಲೆ ಜೆಮೀಮಾ ಸದಸ್ಯತ್ವ ರದ್ದುಗೊಳಿಸಲಾಗಿದೆ ಎಂದು ವರದಿಯಾಗಿದೆ.
ಕ್ರಿಕೆಟ್ ಕೋಚ್ ಕೂಡ ಆಗಿರುವ ಐವಾನ್ ರೋಡ್ರಿಗಸ್ ಕಳೆದ ಒಂದು ವರ್ಷದಿಂದ ಕ್ಲಬ್ ಸಭಾಂಗಣದಲ್ಲಿ 35 ಧಾರ್ಮಿಕ ಸಮಾರಂಭಗಳನ್ನು ನಡೆಸಿದ್ದಾರೆ ಎಂದು ಕ್ಲಬ್ ಆಡಳಿತ ಮಂಡಳಿ ಸದಸ್ಯ ಶಿವ ಮಲ್ಹೋತ್ರಾ ಆರೋಪಿಸಿದ್ದಾರೆ.
ಈ ನಡುವೆ ಖಾರ್ ಜಿಮ್ಖಾನಾದ ಅಧ್ಯಕ್ಷ ವಿವೇಕ್ ದೇವ್ನಾನಿ, ಕ್ಲಬ್ನಲ್ಲಿ ಮತಾಂತರ ಚಟುವಟಿಕೆಯ ಆರೋಪವನ್ನು ತಳ್ಳಿಹಾಕಿದ್ದು, ಮುಂಬರುವ ಚುನಾವಣೆಯ ಹಿನ್ನೆಲೆಯಲ್ಲಿ ಇದು ಎದುರಾಳಿಗಳ ಸುಳ್ಳು ಆರೋಪವಾಗಿದೆ ಎಂದಿದ್ದಾರೆ.