2020ರಲ್ಲಿ ಇನ್ನು ಫೆಡರರ್ ಆಡಲ್ಲ!

Roger
Published on

ಲಂಡನ್: ಸ್ವಿಸ್ ದಿಗ್ಗಜ ರೋಜರ್ ಫೆಡರರ್ ಬಲ ಮೊಣಕಾಲು ಶಸ್ತ್ರಚಿಕಿತ್ಸೆಯಿಂದ ಚೇತರಿಸಿಕೊಳ್ಳಲು ಹೆಚ್ಚಿನ ಸಮಯ ಬೇಕಾಗಿರುವ ಕಾರಣದಿಂದಾಗಿ 2021ರವರೆಗೆ ಮತ್ತೆ ಟೆನಿಸ್ ಅಂಗಣಕ್ಕಿಳಿಯದಿರಲು ನಿರ್ಧರಿಸಿದ್ದಾರೆ. ಕರೊನಾ ಹಾವಳಿಯಿಂದಾಗಿ ಸದ್ಯಕ್ಕೆ ಸ್ಥಗಿತಗೊಂಡಿರುವ ಟೆನಿಸ್ ಚಟುವಟಿಕೆ ಈ ವರ್ಷವೇ ಮತ್ತೆ ಆರಂಭಗೊಂಡರೂ, 38 ವರ್ಷದ ಫೆಡರರ್ ಮರಳಿ ಕಣಕ್ಕಿಳಿಯುವುದಿಲ್ಲ.

20 ಗ್ರಾಂಡ್ ಸ್ಲಾಂ ಪ್ರಶಸ್ತಿಗಳ ಒಡೆಯ ಫೆಡರರ್ ಬುಧವಾರ ಟ್ವಿಟರ್​ನಲ್ಲಿ ಈ ಬಗ್ಗೆ ಘೋಷಣೆ ಮಾಡಿದ್ದಾರೆ. ಅವರು ಕಳೆದ ಫೆಬ್ರವರಿಯಲ್ಲಿ ಬಲ ಮೊಣಕಾಲಿನ ಆಥೋಸ್ಕೋಪಿಕ್ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಇದರಿಂದ ಚೇತರಿಕೆ ಕಾಣಲು 4 ತಿಂಗಳು ಬೇಕಾಗಬಹುದು ಎಂಬುದು ಅವರ ಆರಂಭಿಕ ಲೆಕ್ಕಾಚಾರವಾಗಿತ್ತು. ಕರೊನಾ ಹಾವಳಿಯಿಂದಾಗಿ ಈ ಸಮಯದಲ್ಲಿ ಅವರು ಯಾವುದೇ ಟೂರ್ನಿಯನ್ನು ತಪ್ಪಿಸಿಕೊಳ್ಳುವ ಪ್ರಸಂಗವೂ ಬಂದಿರಲಿಲ್ಲ. ‘ಕೆಲವು ವಾರಗಳ ಹಿಂದೆ ನನ್ನ ಪ್ರಾಥಮಿಕ ಪುನಶ್ಚೇತನದ ವೇಳೆ ಹಿನ್ನಡೆ ಕಂಡಿದ್ದೆ. ನನ್ನ ಬಲ ಮೊಣಕಾಲಿನಲ್ಲಿ ಹೆಚ್ಚುವರಿ ಆಥೋಸ್ಕೋಪಿಕ್ ಪ್ರಕ್ರಿಯೆ ಕಾಣುವುದು ಅಗತ್ಯವೆನಿಸಿತ್ತು. ಈಗ ನಾನು 2017ರ ಋತುವಿನಂತೆ, ನನ್ನ ಉನ್ನತ ಮಟ್ಟದ ಆಟವನ್ನು ಆಡಲು ಶೇ. 100ರಷ್ಟು ಸಿದ್ಧಗೊಳ್ಳುವ ಯೋಜನೆ ಹಾಕಿಕೊಂಡಿದ್ದೇನೆ. 2021ರ ಋತುವಿನ ಆರಂಭದಲ್ಲಷ್ಟೇ ನಾನು ಮತ್ತೆ ನಿಮ್ಮನ್ನು ನೋಡಲಿದ್ದೇನೆ’ ಎಂದು ಫೆಡರರ್ ಟ್ವೀಟಿಸಿದ್ದಾರೆ. -ಪಿಟಿಐ

ಯುಎಸ್ ಓಪನ್​ಗೆ ಜೋಕೊವಿಕ್ ಚಕ್ಕರ್?

ಬೆಲ್​ಗ್ರೇಡ್ (ಸೆರ್ಬಿಯಾ): ವಿಶ್ವ ನಂ. 1 ಆಟಗಾರ ಸೆರ್ಬಿಯಾದ ನೊವಾಕ್ ಜೋಕೊವಿಕ್ ಮುಂಬರುವ ಯುಎಸ್ ಓಪನ್ ಟೆನಿಸ್ ಟೂರ್ನಿಯಿಂದ ಹೊರಗುಳಿದು ಫ್ರೆಂಚ್ ಓಪನ್​ಗೆ ಸಿದ್ಧತೆ ನಡೆಸುವ ಬಗ್ಗೆ ಚಿಂತನೆ ನಡೆಸಿದ್ದಾರೆ. ಅಮೆರಿಕದಲ್ಲಿ ಕರೊನಾ ವೈರಸ್ ಹಾವಳಿ ಅತಿಯಾಗಿದ್ದು, ಈ ಸಮಯದಲ್ಲಿ ಆಡಲು ಅಲ್ಲಿಗೆ ತೆರಳುವುದು ಸೂಕ್ತವಲ್ಲ ಎಂದೂ 17 ಗ್ರಾಂಡ್ ಸ್ಲಾಂ ಪ್ರಶಸ್ತಿಗಳ ಒಡೆಯ ಜೋಕೋ ಅಭಿಪ್ರಾಯಪಟ್ಟಿದ್ದಾರೆ. ಸದ್ಯ ಜುಲೈವರೆಗೆ ಟೆನಿಸ್ ಚಟುವಟಿಕೆಗಳನ್ನು ಸ್ಥಗಿತಗೊಳಿಸಲಾಗಿದೆ. ಬಳಿಕ ಆಗಸ್ಟ್ 31ರಿಂದ ಯುಎಸ್ ಓಪನ್ ಸಂಘಟಿಸುವ ಸಿದ್ಧತೆಗಳು ನಡೆಯುತ್ತಿವೆ. ಈ ಟೂರ್ನಿ ಮುಗಿದ ಒಂದೇ ವಾರದ ಬಳಿಕ ಸೆಪ್ಟೆಂಬರ್ 21ರಂದು ಫ್ರೆಂಚ್ ಓಪನ್ ಆರಂಭವಾಗಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net