

ಕ್ಯಾನ್ಬೆರ: ವೇಗಿ ಕ್ಸೇವಿಯರ್ ಬಾರ್ಟ್ಲೆಟ್ (21ಕ್ಕೆ 4) ಬಿಗಿ ಬೌಲಿಂಗ್ ದಾಳಿಯ ನೆರವಿನಿಂದ ಆತಿಥೇಯ ವಿಶ್ವ ಚಾಂಪಿಯನ್ ಆಸ್ಟ್ರೆಲಿಯಾ ಮೂರನೇ ಹಾಗೂ ಅಂತಿಮ ಏಕದಿನ ಪಂದ್ಯದಲ್ಲಿ ಪ್ರವಾಸಿ ವೆಸ್ಟ್ ಇಂಡೀಸ್ ವಿರುದ್ಧ 8 ವಿಕೆಟ್ಗಳ ಭರ್ಜರಿ ಗೆಲುವು ದಾಖಲಿಸಿದೆ. ಇದರೊಂದಿಗೆ ಸ್ಟೀವನ್ ಸ್ಮಿತ್ ಬಳಗ ಮೂರು ಪಂದ್ಯಗಳ ಸರಣಿಯನ್ನು 3&0 ಕ್ಲೀನ್ಸ್ವೀಪ್ ಮಾಡಿದೆ.
ಮಂಗಳವಾರ ನಡೆದ ಔಪಚಾರಿಕ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್ ಇಳಿದ ವೆಸ್ಟ್ ಇಂಡೀಸ್, 24.1 ಓವರ್ಗಳಲ್ಲಿ ಕೇವಲ 86 ರನ್ಗಳಿಗೆ ಆಲೌಟ್ ಆಯಿತು. ಒಂದು ಹಂತದಲ್ಲಿ 71 ರನ್ಗಳಿಗೆ 5 ವಿಕೆಟ್ ಕಳೆದುಕೊಂಡಿದ್ದ ವಿಂಡೀಸ್ ಬಳಿಕ ದಿಢೀರ್ ಕುಸಿತ ಕಂಡಿತು. ಪ್ರತಿಯಾಗಿ ಆಸೀಸ್ 6.5 ಓವರ್ಗಳಲ್ಲಿ 2 ವಿಕೆಟ್ಗೆ 87 ರನ್ಗಳಿಸಿ, ಇನ್ನೂ 259 ಎಸೆತ ಬಾಕಿಯಿರುವಂತೆಯೇ ಸುಲಭ ಜಯ ದಕ್ಕಿಸಿಕೊಂಡಿತು.
ವಿಂಡೀಸ್: 24.1 ಓವರ್ಗಳಲ್ಲಿ 86 (ಅಥಾನೆಜ್ 32, ಕಾರ್ಟಿ 10, ಚೇಸ್ 12, ಕ್ಸೇವಿಯರ್ ಬಾರ್ಟ್ಲೆಟ್ 21ಕ್ಕೆ 4, ಮೊರೀಸ್ 13ಕ್ಕೆ 2, ಜಂಪಾ 14ಕ್ಕೆ 2).
ಆಸೀಸ್: 6.5 ಓವರ್ಗಳಲ್ಲಿ 87 (ಮ್ಯಾಕ್ಗುರ್ಕ್ 41, ಇಂಗ್ಲಿಸ್ 35*, ಸ್ಮಿತ್ 6*, ಥಾಮಸ್ 7ಕ್ಕೆ 1). ಪಂದ್ಯಶ್ರೇಷ್ಠ ಹಾಗೂ ಸರಣಿ ಶ್ರೇಷ್ಠ: ಕ್ಸೇವಿಯರ್ ಬಾರ್ಟ್ಲೆಟ್.