ಮಾಸ್ಕ್ ವಿತರಿಸಿ ಸೌರವ್​ ಗಂಗೂಲಿ ಜನ್ಮದಿನವನ್ನು ಸಂಭ್ರಮಿಸಿದ ಅಭಿಮಾನಿಗಳು!

mask
Published on

ಕೋಲ್ಕತ: ಭಾರತೀಯ ಕ್ರಿಕೆಟ್ ಇತಿಹಾಸ ಕಂಡ ಯಶಸ್ವಿ ನಾಯಕರಲ್ಲೊಬ್ಬರಾದ ಸೌರವ್ ಗಂಗೂಲಿಗೆ ಬುಧವಾರ 48ನೇ ಜನ್ಮದಿನದ ಸಂಭ್ರಮ. ಈ ಹಿನ್ನೆಲೆಯಲ್ಲಿ ಅವರ ಅಭಿಮಾನಿಗಳು ಬುಧವಾರ ಕೋಲ್ಕತದಲ್ಲಿ ಉಚಿತ ಮಾಸ್ಕ್ ವಿತರಿಸಿ ಸಂಭ್ರಮಿಸಲಿದ್ದಾರೆ.

ಲಾಕ್‌ಡೌನ್ ನಿರ್ಬಂಧದಿಂದಾಗಿ ಗಂಗೂಲಿ ಅವರ ಬೆಹಲಾ ಮನೆ ಬಳಿ ಹೋಗದಿರಲು ನಿರ್ಧರಿಸಿರುವ ಅಭಿಮಾನಿಗಳು, ಗಂಗೂಲಿ ಚಿತ್ರವಿರುವ ಮಾಸ್ಕ್ ಹಂಚಿಕೆ ಮಾಡಲಿದ್ದಾರೆ. 1996ರಲ್ಲಿ ಗಂಗೂಲಿ ಆಡಿದ ಚೊಚ್ಚಲ ಟೆಸ್ಟ್ ಪಂದ್ಯ ಮತ್ತು ಹಾಲಿ ಚಿತ್ರವಿರುವ 100 ಮಾಸ್ಕ್ ಸಿದ್ಧಪಡಿಸಲಾಗಿದೆ ಎಂದು ಗಂಗೂಲಿ ಫ್ಯಾನ್ ಗ್ರೂಪ್‌ನ ಮುಖ್ಯಸ್ಥ ಮನಸ್ ಚಟರ್ಜಿ ತಿಳಿಸಿದ್ದಾರೆ.

‘ಬಿಸಿಸಿಐ ಅಧ್ಯಕ್ಷರಾಗಿ ಗಂಗೂಲಿ ಅವರಿಗೆ ಇದು ಮೊದಲ ಜನ್ಮದಿನ. ಹೀಗಾಗಿ ಇದು ಹೆಚ್ಚು ವಿಶೇಷವಾಗಿದೆ. ಆದರೆ ದುರದೃಷ್ಟಕರವಾಗಿ ನಮಗೆ ಅವರ ಬಳಿ ಹೋಗಿ ಕೇಕ್ ಕತ್ತರಿಸಿ ಸಂಭ್ರಮಿಸಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ನಾವು ಮಾಸ್ಕ್‌ಗಳನ್ನು ವಿತರಿಸಿ ಸಂಭ್ರಮಿಸಲು ನಿರ್ಧರಿಸಿದ್ದೇವೆ’ ಎಂದು ಮನಾಸ್ ಚಟರ್ಜಿ ತಿಳಿಸಿದ್ದಾರೆ.

ಗಂಗೂಲಿ ಫ್ಯಾನ್ ಗ್ರೂಪ್‌ನಲ್ಲಿ ಪಶ್ಚಿಮ ಬಂಗಾಳದೆಲ್ಲಡೆಯ 9 ಸಾವಿರ ಮಂದಿ ಸದಸ್ಯರಿದ್ದಾರೆ. ಈ ಸದಸ್ಯರಿಗೂ ಮಾಸ್ಕ್ ವಿತರಣೆಯಾಗಲಿದೆ. ಇದಲ್ಲದೆ ಗಂಗೂಲಿ ಅವರ ಟೆಸ್ಟ್ ಪದಾರ್ಪಣೆಯ ವರ್ಷದ ಹಿನ್ನೆಲೆಯಲ್ಲಿ 96 ರೂ. ಮುಖಬೆಲೆಯೊಂದಿಗೆ ಮಾಸ್ಕ್ ಮಾರಾಟ ಮಾಡಿ ಬಂದ ಹಣವನ್ನು ಚಾರಿಟಿ ಕೆಲಸಗಳಿಗೆ ವಿನಿಯೋಗಿಸುವ ಯೋಜನೆಯನ್ನೂ ಹಾಕಿಕೊಂಡಿದ್ದಾರೆ.

ಗಂಗೂಲಿ ಅವರ ಬೆಹಲಾದ ಮನೆಯ ಹತ್ತಿರ ನೆಲೆಸಿರುವ ಅಭಿಮಾನಿಗಳಿಗೂ ಈ ಬಾರಿ ಬರ್ತ್‌ಡೇ ಸಂಭ್ರಮದಲ್ಲಿ ಭಾಗಿಯಾಗಲು ಸಾಧ್ಯವಾಗುತ್ತಿಲ್ಲ. ‘ನಾನು ಗಂಗೂಲಿ ಮನೆಯ ಭದ್ರತಾ ಸಿಬ್ಬಂದಿ ಜತೆಗೆ ಮಾತನಾಡಿದ್ದೆ. ಅವರು ದಯವಿಟ್ಟು ಕೇಕ್ ತೆಗೆದುಕೊಂಡು ಬರಬೇಡಿ ಎಂದಿದ್ದಾರೆ. ಈ ಬಾರಿ ಅವರ ಜನ್ಮದಿನಾಚರಣೆ ಸರಳವಾಗಿರಲಿದೆ’ ಎಂದು ಗಂಗೂಲಿ ಅಭಿಮಾನಿ ಬಳಗದ ಸದಸ್ಯ ರತನ್ ಹಲ್ದಾರ್ ತಿಳಿಸಿದ್ದಾರೆ. ಅವರು ಈ ಹಿಂದೆಲ್ಲ ಗಂಗೂಲಿ ಜನ್ಮದಿನದಂದು ಶಾಲಾ ಮಕ್ಕಳಿಗೆ ಕೇಕ್, ಸಿಹಿತಿಂಡಿಗಳನ್ನು ವಿತರಿಸುತ್ತಿದ್ದರು. ಆದರೆ ಈ ಬಾರಿ ಅದು ಸಾಧ್ಯವಿಲ್ಲದಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net