ಅಂದು ಅವಮಾನ ಇಂದು ಸನ್ಮಾನ: ಇದಕ್ಕೆ ಹೇಳೋದು… ಹಾರ್ದಿಕ್​ಗೆ ಫ್ಯಾನ್ಸ್ ಕೊಟ್ಟ ಸಂದೇಶವಿದು!

Untitled design - 2024-07-01T120203.281
Published on

ನವದೆಹಲಿ: ನಿನ್ನೆ (ಜೂ.29) ಬಾರ್ಬಡೋಸ್​ನ ಕೆನ್ಸಿಂಗ್ಟನ್ ಓವಲ್​ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಐಸಿಸಿ ಟಿ20 ವಿಶ್ವಕಪ್​ ಫೈನಲ್ ಗೆದ್ದ ಭಾರತ, 17 ವರ್ಷಗಳ ಬಳಿಕ ರೋಹಿತ್ ಶರ್ಮಾ ನಾಯಕತ್ವದಲ್ಲಿ ವಿಶ್ವಕಪ್ ಟ್ರೋಫಿಗೆ ಮುತ್ತಿಟ್ಟಿತು. 7 ರನ್​ಗಳ ಅಂತರದಿಂದ ದಕ್ಷಿಣ ಆಫ್ರಿಕಾ ಮಣಿಸಿದ ಟೀಮ್ ಇಂಡಿಯಾಗೆ ಕ್ರಿಕೆಟ್ ಅಭಿಮಾನಿಗಳು ಅಪಾರ ಮೆಚ್ಚುಗೆ, ಪ್ರಶಂಸೆಗಳನ್ನು ವ್ಯಕ್ತಪಡಿಸಿದರು. ಗೆಲುವಿನ ಖುಷಿಯಲ್ಲಿದ್ದ ಭಾರತೀಯರಿಗೆ ಕ್ಯಾಪ್ಟನ್ ರೋಹಿತ್ ಶರ್ಮ, ವಿರಾಟ್ ಕೊಹ್ಲಿ ಮತ್ತು ರವೀಂದ್ರ ಜಡೇಜಾರ ಟಿ20 ಕ್ರಿಕೆಟ್​ ನಿವೃತ್ತಿ ದೊಡ್ಡ ಆಘಾತವನ್ನು ತಂದೊಡ್ಡಿತು.

ದಕ್ಷಿಣ ಆಫ್ರಿಕಾ ವಿರುದ್ಧ ಐತಿಹಾಸಿಕ ಗೆಲುವು ದಾಖಲಿಸುತ್ತಿದ್ದಂತೆ ಮೈದಾನದಲ್ಲೇ ಸಂಭ್ರಮಿಸಿದ ಟೀಮ್ ಇಂಡಿಯಾ ಆಟಗಾರರ ಪೈಕಿ ನಾಯಕ ರೋಹಿತ್ ಶರ್ಮ ಮತ್ತು ಉಪನಾಯಕ ಹಾರ್ದಿಕ್ ಪಾಂಡ್ಯ ಭಾವುಕರಾಗಿ ನಿಂತಲ್ಲೇ ನಿಂತಿದ್ದರು. ಈ ಕ್ಷಣಕ್ಕಾಗಿ ಕ್ರಿಕೆಟ್ ಅಭಿಮಾನಿಗಳಂತೆ ಬಹುದಿನಗಳಿಂದ ಕಾಯುತ್ತಿದ್ದ ರೋಹಿತ್, ಪಾಂಡ್ಯ ಗೆದ್ದ ತಕ್ಷಣ ಮೈದಾನದಲ್ಲೇ ಕಣ್ಣೀರಿಟ್ಟರು. ಅದರಲ್ಲೂ ಹಾರ್ದಿಕ್​ ಬಿಕ್ಕಿ ಬಿಕ್ಕಿ ಅತ್ತಿದ್ದು, ನೋಡುಗರ ಕಣ್ಣಲ್ಲಿ ನೀರು ತರುವಂತಿತ್ತು.

ತಮ್ಮ ತಂಡದ ಸಹ ಆಟಗಾರರನ್ನು ತಬ್ಬಿಕೊಂಡು ಕಣ್ಣೀರಾಕಿದ ಪಾಂಡ್ಯಗೆ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಅಪ್ಪುಗೆ ಹಳೆಯ ನೋವುಗಳನ್ನು ಮರೆಸಿತು ಎಂದೇ ಹೇಳಬಹುದು. ಐಪಿಎಲ್​ನಲ್ಲಿ ಮುಂಬೈ ಇಂಡಿಯನ್ಸ್ ನಾಯಕತ್ವವನ್ನು ರೋಹಿತ್​ರಿಂದ ಕಸಿದ ಹಾರ್ದಿಕ್​ ಎಂದು ಕೂಗಿದ್ದ ಕ್ರಿಕೆಟ್ ಪ್ರಿಯರು, ಮೈದಾನದಲ್ಲಿ ವ್ಯಾಪಕ ಛೀಮಾರಿ ಹಾಕಿದ್ದರು. ಪಂದ್ಯದ ವೇಳೆ ಸ್ಟೇಡಿಯಂನೊಳಗೆ ಓಡಿಬಂದ ಶ್ವಾನವನ್ನು ಕಂಡು ಹಾರ್ದಿಕ್​ ಹೆಸರೇಳಿ ತೀವ್ರವಾಗಿ ಟೀಕಿಸಿದ್ದರು.

ಅಂದಿನಿಂದಲೂ ಭಾರೀ ಬೇಸರಕ್ಕೆ ಒಳಗಾಗಿದ್ದ ಹಾರ್ದಿಕ್​, ಯಾವುದೇ ಟೀಕೆ, ವ್ಯಂಗ್ಯಕ್ಕೂ ಪ್ರತಿಕ್ರಿಯಿಸದೆ, ತನಗಾದ ಅವಮಾನಗಳನ್ನು ಸಹಿಸಿಕೊಂಡೇ ಆಟದ ಬಗ್ಗೆ ಹೆಚ್ಚು ಗಮನಹರಿಸಿದರು. ಐಪಿಎಲ್​ನ 17ನೇ ಆವೃತ್ತಿಯಲ್ಲಿ ಮುಂಬೈ ಇಂಡಿಯನ್ಸ್​ ತಂಡವನ್ನು ಗೆಲುವಿನ ಹಂತಕ್ಕೆ ಕೊಂಡೊಯ್ಯದ ಕಾರಣಕ್ಕೂ ಪಾಂಡ್ಯ ವಿರುದ್ಧ ವ್ಯಾಪಕ ಅಸಮಾಧಾನಗಳು ವ್ಯಕ್ತವಾಗಿತ್ತು. ಆದ್ರೆ, ಇಂದು ಇದನ್ನೆಲ್ಲಾ ಮೆಟ್ಟಿನಿಂತ ಹಾರ್ದಿಕ್ ಪಾಂಡ್ಯ, ಟೀಮ್ ಇಂಡಿಯಾ ಗೆಲುವಿಗೆ ಅಪಾರ ಕೊಡುಗೆಯನ್ನು ಕೊಟ್ಟು, ಇಂದು ಅಭಿಮಾನಿಗಳ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಅಂದು ಅವಮಾನ ಇಂದು ಸನ್ಮಾನ. ಇದಕ್ಕೆ ಹೇಳೋದು ಕಾಲಾಯ ತಸ್ಮೈ ನಮಃ ಎಂದು ನೆಟ್ಟಿಗರು ಹಾರ್ದಿಕ್​ ಬೆನ್ನುತಟ್ಟಿ, ಪ್ರೋತ್ಸಾಹಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net