ಪಂದ್ಯದ ನಡುವೆ ಓಡಿ ಬಂದು ರಿಯಾನ್​ ಪರಾಗ್​ ಕಾಲಿಗೆ ಬಿದ್ದ ಅಭಿಮಾನಿ! ಹಣ ಕೊಟ್ಟು ಕರೆಸಿದ್ರಂತೆ...Riyan Parag

Riyan Parag
Published on

Riyan Parag : ಐಪಿಎಲ್ 2025ರ ಸೀಸನ್‌ನಲ್ಲಿ ರಾಜಸ್ಥಾನ ರಾಯಲ್ಸ್ ತಂಡ ಸತತ ಎರಡನೇ ಪಂದ್ಯದಲ್ಲಿ ಸೋಲು ಕಂಡಿದೆ. ಮೊದಲ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಸೋತಿದ್ದ ರಾಜಸ್ಥಾನ ನಿನ್ನೆ (ಮಾರ್ಚ್​ 26) ಕೋಲ್ಕತ್ತ ನೈಟ್ ರೈಡರ್ಸ್ ವಿರುದ್ಧ ನಡೆದ ಎರಡನೇ ಪಂದ್ಯದಲ್ಲಿ 8 ವಿಕೆಟ್‌ಗಳಿಂದ ಸೋಲುಂಡಿತು.

ಈ ಪಂದ್ಯದಲ್ಲಿ ರಾಜಸ್ಥಾನ ಮೊದಲು ಬ್ಯಾಟಿಂಗ್ ಮಾಡಿತು. ಕೆಕೆಆರ್​ ಬೌಲಿಂಗ್​ ದಾಳಿಗೆ ತತ್ತರಿಸಿದ ರಾಜಸ್ಥಾನ ನಿಗದಿತ 20 ಓವರ್‌ಗಳಲ್ಲಿ 9 ವಿಕೆಟ್‌ಗಳ ನಷ್ಟಕ್ಕೆ 151 ರನ್ ಗಳಿಸಿತು. ಕೋಲ್ಕತ್ತ ಬೌಲರ್‌ಗಳಲ್ಲಿ ವರುಣ್ ಚಕ್ರವರ್ತಿ, ವೈಭವ್ ಅರೋರಾ, ಹರ್ಷಿತ್ ರಾಣಾ ಮತ್ತು ಮೊಯೀನ್ ಅಲಿ ತಲಾ ಎರಡು ವಿಕೆಟ್ ಪಡೆದರು. ನಂತರ ಕೋಲ್ಕತ ತಂಡವು 17.3 ಓವರ್‌ಗಳಲ್ಲಿ 2 ವಿಕೆಟ್‌ಗಳ ನಷ್ಟಕ್ಕೆ ಗುರಿ ಮುಟ್ಟಿತು. ಕ್ವಿಂಟನ್ ಡಿ ಕಾಕ್ (ಅಜೇಯ 97 ರನ್​, 61 ಎಸೆತ, 8 ಬೌಂಡರಿ, 6 ಸಿಕ್ಸರ್) ಕೆಕೆಆರ್ ಪರ ಸ್ಟಾರ್ ಬ್ಯಾಟ್ಸ್‌ಮನ್ ಆದರು. ರಾಜಸ್ಥಾನ ಪರ ವನಿಂದು ಹಸರಂಗ ಒಂದು ವಿಕೆಟ್ ಪಡೆದರು.

ಈ ಪಂದ್ಯದಲ್ಲಿ ಅನಿರೀಕ್ಷಿತ ಘಟನೆ ಒಂದು ನಡೆಯಿತು. ಅದೇನೆಂದರೆ, ಕೆಕೆಆರ್ ಬ್ಯಾಟಿಂಗ್ ಮಾಡುತ್ತಿದ್ದಾಗ, ಅಭಿಮಾನಿಯೊಬ್ಬರು ಭದ್ರತಾ ಸಿಬ್ಬಂದಿಯ ಕಣ್ತಪ್ಪಿಸಿ, ಮೈದಾನಕ್ಕೆ ಓಡಿ ಬಂದರು. ರಾಜಸ್ಥಾನ ತಂಡದ ನಾಯಕ ರಿಯಾನ್ ಪರಾಗ್ ಅವರ ಪಾದಗಳನ್ನು ಸ್ಪರ್ಶಿಸಿದರು. ಬಳಿಕ, ಪರಾಗ್​ ಆತನನ್ನು ತಬ್ಬಿಕೊಂಡರು. ಈ ಘಟನೆ ಇನ್ನಿಂಗ್ಸ್‌ನ 11ನೇ ಓವರ್‌ನಲ್ಲಿ ಸಂಭವಿಸಿತು. ಈ ವೇಳೆ ಪರಾಗ್ ಬೌಲಿಂಗ್​ ಮಾಡುತ್ತಿದ್ದರು. ಇದರಿಂದಾಗಿ, ಪಂದ್ಯಕ್ಕೆ ಸ್ವಲ್ಪ ಸಮಯ ಅಡಚಣೆಯಾಯಿತು.

ಇದೇ ಸಂದರ್ಭದಲ್ಲಿ ಈ ಘಟನೆಯ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಟ್ರೋಲ್​ ಮಾಡಲಾಗುತ್ತಿದೆ. ತನ್ನ ಪಾದಗಳನ್ನು ಸ್ಪರ್ಶಿಸಿದ ಅಭಿಮಾನಿಗೆ ನೀವು ಏನು ಮಾಡಿದ್ರಿ ಎಂದು ಪರಾಗ್​ ಅವರನ್ನು ಕೇಳುತ್ತಿದ್ದಾರೆ. ಕೆಲವರು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಈ ರೀತಿ ಮಾಡಲು ಪರಾಗ್​, ಆತನಿಗೆ ಹಣ ಕೊಟ್ಟಿದ್ದಾರೆ ಎಂದು ಆರೋಪಿಸಿದ್ದಾರೆ. ಆದಾಗ್ಯೂ, ಈ ಘಟನೆಯ ನಂತರ, ಡಿಕಾಕ್ ಅವರು ಪರಾಗ್ ಎಸೆದ ಚೆಂಡನ್ನು ಸಿಕ್ಸರ್​ಗೆ ಅಟ್ಟಿದರು.​​

ಅಂದಹಾಗೆ ರಿಯಾನ್ ಪರಾಗ್ ಅಸ್ಸಾಂನಿಂದ ಟೀಮ್ ಇಂಡಿಯಾವನ್ನು ಪ್ರತಿನಿಧಿಸಿದ ಮೊದಲ ಕ್ರಿಕೆಟಿಗ. ಅವರು ಬಹಳ ಸಮಯದಿಂದ ರಾಜಸ್ಥಾನ ತಂಡವನ್ನು ಪ್ರತಿನಿಧಿಸುತ್ತಿದ್ದಾರೆ. ಅಲ್ಲದೆ, ಅಸ್ಸಾಂನಲ್ಲಿ ಪರಾಗ್​ ಓರ್ವ ಸ್ಟಾರ್ ಆಟಗಾರ. ಆದ್ದರಿಂದ ಅವರ ಪಾದಗಳನ್ನು ಸ್ಪರ್ಶಿಸಿರಬಹುದೆಂದು ಹೇಳಲಾಗುತ್ತಿದೆ. ಆದರೂ ಟ್ರೋಲ್​ ಮಾಡುವುದು ಮಾತ್ರ ಇನ್ನೂ ನಿಂತಿಲ್ಲ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net