ಮರಿಯಾ ಶರಪೋವಾ ವಿದಾಯ: 32ನೇ ವಯಸ್ಸಿಗೆ ಟೆನಿಸ್ ಕೋರ್ಟ್ ತ್ಯಜಿಸಿದ ರಷ್ಯಾ ನೀಳಕಾಯದ ಚೆಲುವೆ

Sp 11
Published on

ಪ್ಯಾರಿಸ್: ಸೆರೇನಾ ವಿಲಿಯಮ್್ಸ ಯುಗದಲ್ಲೂ ತನ್ನ ಛಾಪು ಮೂಡಿಸಿದ್ದ ಆಟಗಾರ್ತಿ, 21ನೇ ಶತಮಾನದಲ್ಲಿ ಅತ್ಯಂತ ಶ್ರೀಮಂತ ಹಾಗೂ ಪ್ರಖ್ಯಾತ ಮಹಿಳಾ ಕ್ರೀಡಾಪಟುಗಳಲ್ಲಿ ಒಬ್ಬರಾಗಿರುವ ಐದು ಬಾರಿಯ ಗ್ರಾಂಡ್ ಸ್ಲಾಂ ಚಾಂಪಿಯನ್ ರಷ್ಯಾದ ಚೆಲುವೆ ಮರಿಯಾ ಶರಪೋವಾ ವೃತ್ತಿಪರ ಟೆನಿಸ್​ಗೆ ವಿದಾಯ ಪ್ರಕಟಿಸಿದ್ದಾರೆ. ಉದ್ದೀಪನ ಪ್ರಕರಣದ ನಿಷೇಧ ಹಾಗೂ ಗಾಯದಿಂದಾಗಿ ಟೆನಿಸ್​ನ ಅಮೂಲ್ಯ ವರ್ಷಗಳನ್ನು ಕಳೆದುಕೊಂಡ ಶರಪೋವಾ 32ನೇ ವರ್ಷದಲ್ಲಿ ನಿವೃತ್ತಿ ನಿರ್ಧಾರವನ್ನು ಘೋಷಣೆ ಮಾಡಿದ್ದಾರೆ.

ನೆಲಕ್ಕೆ ಸಮನಾಂತರವಾಗಿ ಗ್ರೌಂಡ್​ಸ್ಟ್ರೋಕ್​ಗಳನ್ನು ಬಾರಿಸುವಲ್ಲಿ ಹೆಸರಾಗಿದ್ದ ನೀಳಕಾಯದ ರಷ್ಯಾ ಆಟಗಾರ್ತಿ, 2004ರಲ್ಲಿ 17ನೇ ವಯಸ್ಸಿಗೆ ಟೆನಿಸ್​ನ ಪ್ರಸಿದ್ಧ ಗ್ರಾಂಡ್ ಸ್ಲಾಂ ವಿಂಬಲ್ಡನ್​ಗೆ ಮುತ್ತಿಟ್ಟಿದ್ದರು. ಆ ವರ್ಷದ ಫೈನಲ್​ನಲ್ಲಿ ಆಗಿನ ವಿಶ್ವ ನಂ.1 ಸೆರೇನಾ ವಿಲಿಯಮ್್ಸ ರನ್ನು ಸೋಲಿಸುವ ಮೂಲಕ ಪದಕ ವೇದಿಕೆ ಏರಿದ್ದರು. ಟೆನಿಸ್ ಜೀವನದ ಯಶಸ್ಸಿನೊಂದಿಗೆ ಟೆನಿಸ್​ನ ಹೊರತಾಗಿಯೂ ಅವರು ಸುದ್ದಿಯಲ್ಲಿದ್ದರು. ಫೋರ್ಬ್ಸ್ ಪಟ್ಟಿಯಲ್ಲಿ ಸತತ 11 ವರ್ಷಗಳ ಕಾಲ, ಗರಿಷ್ಠ ಆದಾಯ ಸಂಪಾದಿಸಿದ ಮಹಿಳಾ ಕ್ರೀಡಾಪಟು ಎನ್ನುವ ಗೌರವ ಸಂಪಾದಿಸಿದ್ದರು. ವಿಶ್ವದ ಎಲ್ಲ ಪ್ರಖ್ಯಾತ ಬ್ರಾ್ಯಂಡ್​ಗಳಿಗೆ ರಾಯಭಾರಿಯಾಗಿದ್ದ ಶೆರ್ಪಿ, 2015ರ ವೇಳೆಗೆ 215 ಕೋಟಿ ರೂಪಾಯಿಯ ಒಡತಿಯಾಗಿದ್ದರು. ಆದರೆ, 2016ರಲ್ಲಿ ಉದ್ದೀಪನ ಪ್ರಕರಣದಲ್ಲಿ ಶಿಕ್ಷೆಯಾಗಿ ಟೆನಿಸ್​ನಿಂದ ಹೊರಗುಳಿದ ಬೆನ್ನಲ್ಲಿಯೇ ಅವರ ಪತನ ಆರಂಭವಾಗಿತ್ತು.

ಹೃದಯರೋಗಿಗಳಿಗೆ ರಕ್ತದ ಹರಿವು ವೇಗವಾಗಲಿ ಎನ್ನುವ ಕಾರಣಕ್ಕಾಗಿ ನೀಡಲಾಗುವ ಮೆಲ್ಡೋನಿಯಂಅನ್ನು ಶೀಘ್ರವಾಗಿ ಚೇತರಿಸಿಕೊಳ್ಳುವ ಕಾರಣಕ್ಕಾಗಿ ಕ್ರೀಡಾಪಟುಗಳು ಸೇವಿಸುತ್ತಾರೆ. ಇದನ್ನು ಸೇವಿಸಿದ ಕಾರಣಕ್ಕೆ ಶರಪೋವಾ ಉದ್ದೀಪನ ಪರೀಕ್ಷೆಯಲ್ಲಿ ಸಿಕ್ಕಿಬಿದ್ದಿದ್ದರು. ಅನುವಂಶಿಕವಾಗಿ ಮಧುಮೇಹ ಇದ್ದ ಕಾರಣಕ್ಕಾಗಿ ಕಳೆದ 10 ವರ್ಷಗಳಿಂದ ಇದನ್ನು ಸೇವಿಸುತ್ತಿದ್ದೆ ಎಂದಿದ್ದ ಶರಪೋವಾ, ವಾಡಾದ ನಿಷೇಧಿತ ಪಟ್ಟಿಯಲ್ಲಿ ಈ ಔಷಧಿ ಸೇರಿರುವುದು ತಮಗೆ ತಿಳಿದಿರಲಿಲ್ಲ ಎಂದಿದ್ದರು. ಎರಡು ವರ್ಷ ನಿಷೇಧ ಪಡೆದಿದ್ದ ಶರಪೋವಾ, ಮೇಲ್ಮನವಿಯ ಬಳಿಕ 15 ತಿಂಗಳಿಗೆ ಇಳಿಸಿಕೊಳ್ಳುವಲ್ಲಿ ಯಶ ಕಂಡಿದ್ದರು.

ಶರಪೋವಾ ಗೆದ್ದ 5 ಗ್ರಾಂಡ್ ಸ್ಲಾಂ

  • ಆಸ್ಟ್ರೇಲಿಯನ್ ಓಪನ್: 2008
  • ಫ್ರೆಂಚ್ ಓಪನ್: 2012, 2014
  • ವಿಬಲ್ಡನ್: 2004
  • ಯುಎಸ್ ಓಪನ್: 2006

ಟೆನಿಸ್​ಗೆ ನನ್ನ ಜೀವನವನ್ನು ಮುಡಿಪಾಗಿಟ್ಟ ಹಂತದಲ್ಲಿ, ಸ್ವತಃ ಟೆನಿಸ್ ನನಗೊಂದು ಸುಂದರ ಜೀವನ ನೀಡಿತ್ತು. ನಾನು ಈಗ ಎಲ್ಲವನ್ನೂ ಮಿಸ್ ಮಾಡಿಕೊಳ್ಳುತ್ತೇನೆ. ದಿನನಿತ್ಯದ ತರಬೇತಿ, ಬಲಗಾಲಿಗೆ ಮೊದಲು ಶೂ ಧರಿಸುವುದು, ಮೊದಲ ಚೆಂಡನ್ನು ಎದುರಿಸುವ ಮುನ್ನ ಕೋರ್ಟ್​ನ ಗೇಟ್ ಮುಚ್ಚುವುದು... ಹೀಗೆ ಕೆಲವೊಂದು ಅಭ್ಯಾಸವನ್ನು ತಪ್ಪಿಸಿಕೊಳ್ಳಲಿದ್ದೇನೆ. | ಮರಿಯಾ ಶರಪೋವಾ

ಟೆನಿಸ್​ಗೆ ಮರಳುವ ಯತ್ನ ವಿಫಲ

2017ರ ಏಪ್ರಿಲ್​ನಲ್ಲಿ ಟೆನಿಸ್​ಗೆ ಮರಳಿದ್ದ ಶರಪೋವಾ ಟೂರ್ನಿಗೆ ಪ್ರವೇಶ ಪಡೆದುಕೊಳ್ಳಲು ಹರಸಾಹಸ ಮಾಡಬೇಕಾಯಿತು. ಡೋಪಿಂಗ್ ಮಾಡಿ ಸಿಕ್ಕಿಬಿದ್ದವರಿಗೆ ವೈಲ್ಡ್​ಕಾರ್ಡ್ ನೀಡುವುದಿಲ್ಲ ಎಂದು ಕೆಲ ಟೂರ್ನಿಯ ಸಂಘಟಕರು ಬಹಿರಂಗವಾಗಿಯೇ ಹೇಳಿದರು. ಹಾಗಿದ್ದರೂ, ಜರ್ಮನಿಯಲ್ಲಿ ನಡೆದ ಟೂರ್ನಿಯಲ್ಲಿ ಸೆಮಿಫೈನಲ್​ಗೇರಿದ್ದ ಈಕೆ, ತಮ್ಮ ಎಂದಿನ ಟೆನಿಸ್ ಆಡುವಲ್ಲಿ ವಿಫಲರಾಗಿದ್ದರು. 2017ರ ಅಕ್ಟೋಬರ್​ನಲ್ಲಿ ಚೀನಾದ ಕೆಳಹಂತದ ಟೂರ್ನಿಯಲ್ಲಿ ಅವರ ಏಕೈಕ ಗೆಲುವು ದಾಖಲಾಗಿತ್ತು. ಇನ್ನು ಗ್ರಾಂಡ್ ಸ್ಲಾಂ ಟೂರ್ನಿಗಳ ಪೈಕಿ 2018ರ ಫ್ರೆಂಚ್ ಓಪನ್​ನಲ್ಲಿ ಕ್ವಾರ್ಟರ್​ಫೈನಲ್​ಗೇರಿದ್ದರೆ, ಕಳೆದ ಮೂರು ಸ್ಲಾಂಗಳಲ್ಲಿ ಮೊದಲ ಸುತ್ತಿನಲ್ಲಿಯೇ ಸೋಲು ಕಂಡಿದ್ದರು. ಆಸ್ಟ್ರೇಲಿಯನ್ ಓಪನ್​ನಲ್ಲಿ ಡೊನಾ ವೆಕಿಕ್ ವಿರುದ್ಧ 3-6, 4-6ರಿಂದ ಸೋಲು ಕಂಡಿದ್ದು ಅವರ ಕೊನೇ ವೃತ್ತಿಪರ ಪಂದ್ಯವಾಗಿದೆ.

ಶರಪೋವಾ 21 ವಾರಗಳ ಕಾಲ ಟೆನಿಸ್​ನಲ್ಲಿ ನಂ.1 ಆಗಿದ್ದರು. 2005ರ ಆಗಸ್ಟ್​ನಲ್ಲಿ ಮೊಟ್ಟಮೊದಲ ಬಾರಿಗೆ ರ್ಯಾಂಕಿಂಗ್​ನಲ್ಲಿ ಅಗ್ರಸ್ಥಾನಕ್ಕೇರಿದ್ದರು.

ಪ್ರತಿಭೆ ಗುರುತಿಸಿದ್ದ ನವ್ರಾಟಿಲೋವಾ

ಆರನೇ ವರ್ಷಕ್ಕೆ ಟೆನಿಸ್ ಆಡಲು ಆರಂಭಿಸಿದ್ದ ಶರಪೋವಾರ ಪ್ರತಿಭೆ ಮೊದಲಿಗೆ ಗುರುತಿಸಿದ್ದು ದಿಗ್ಗಜ ಆಟಗಾರ್ತಿ ಮಾರ್ಟಿನಾ ನವ್ರಾಟಿಲೋವಾ. ಮಾಸ್ಕೋದ ಟೆನಿಸ್ ಕ್ಲಿನಿಕ್​ನಲ್ಲಿ ಶರಪೋವಾ ಆಟ ನೋಡಿದ್ದ ನವ್ರಾಟಿಲೋವಾ, ವಿದೇಶದಲ್ಲಿ ಈಕೆ ತರಬೇತಿ ಪಡೆದಲ್ಲಿ ಗ್ರಾಂಡ್ ಸ್ಲಾಂ ಗೆಲ್ಲುವ ಆಟಗಾರ್ತಿಯಾಗಲಿದ್ದಾಳೆ ಎಂದಿದ್ದರು. ಅದರಂತೆ ಚಿಕ್ಕ ವಯಸ್ಸಿನಲ್ಲಿಯೇ ಅಪ್ಪ ಯೂರಿಯ ಜತೆಗೆ ರಷ್ಯಾವನ್ನು ತೊರೆದು ಫ್ಲಾರಿಡಾಕ್ಕೆ ವಾಸ್ತವ್ಯ ಬದಲಿಸಿದ್ದರು. ವೀಸಾ ನಿರ್ಬಂಧದ ಕಾರಣದಿಂದಾಗಿ ತಾಯಿ ಯೆಲೆನಾಗೆ 2 ವರ್ಷ ಅಮೆರಿಕಕ್ಕೆ ಬರಲು ಸಾಧ್ಯವಾಗಲಿಲ್ಲ. ಹಾಗಿದ್ದರೂ, ತನ್ನ ಪ್ರತಿಭೆಯ ಮೂಲಕ ಶರಪೋವಾ ಗಮನಸೆಳೆದಿದ್ದರು. 2006ರಲ್ಲಿ ಯುಎಸ್ ಓಪನ್, 2008ರಲ್ಲಿ ಆಸ್ಟ್ರೇಲಿಯನ್ ಓಪನ್, 2012 ಹಾಗೂ 2014ರಲ್ಲಿ ಫ್ರೆಂಚ್ ಓಪನ್ ಟೂರ್ನಿಯಲ್ಲಿ ಚಾಂಪಿಯನ್ ಆಗಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net