IPL 2024: ಕರ್ನಾಟಕದ ತಂಡಕ್ಕೆ ಇಂದು ಕನ್ನಡಿಗರ ಸವಾಲು! ಆರ್​ಸಿಬಿಗೆ ಲಖನೌ ಎದುರು ಗೆಲುವಿನ ಲಕ್​ ನಿರೀಕ್ಷೆ

web rcb vs lsg web
Published on

ವಿಜಯವಾಣಿ ಸುದ್ದಿಜಾಲ ಬೆಂಗಳೂರು

ಟೂರ್ನಿಯ ಆರಂಭಿಕ 3 ಪಂದ್ಯಗಳಲ್ಲಿ ಅಸ್ಥಿರ ನಿರ್ವಹಣೆ ತೋರಿರುವ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡ ಐಪಿಎಲ್​-17ರಲ್ಲಿ ಮಂಗಳವಾರ ನಡೆಯಲಿರುವ ತನ್ನ 4ನೇ ಲೀಗ್​ ಪಂದ್ಯದಲ್ಲಿ ಲಖನೌ ಸೂಪರ್​ಜೈಂಟ್ಸ್​ ತಂಡವನ್ನು ಎದುರಿಸಲಿದ್ದು, ಗೆಲುವಿನ ಹಳಿಗೆ ಮರಳುವ ಹಂಬಲದಲ್ಲಿದೆ. ಪ್ರವಾಸಿ ತಂಡಕ್ಕೆ ಕನ್ನಡಿಗ ಕೆಎಲ್​ ರಾಹುಲ್​ ಕಾಯಂ ನಾಯಕರಾಗಿದ್ದ, ರಾಜ್ಯದ ಎಡಗೈ ಬ್ಯಾಟರ್​ ದೇವದತ್​ ಪಡಿಕಲ್​ ಕೂಡ ತಂಡದಲ್ಲಿದ್ದಾರೆ. ಹೀಗಾಗಿ ಇದು ಚಿನ್ನಸ್ವಾಮಿ ಅಂಗಣದಲ್ಲಿ ಕರ್ನಾಟಕದ ತಂಡಕ್ಕೆ ಕನ್ನಡಿಗರೇ ಸವಾಲೊಡ್ಡುವ ಪಂದ್ಯವೆನಿಸಿದೆ.

ಉದ್ಘಾಟನಾ ಪಂದ್ಯದ ಸೋಲಿನ ಬಳಿಕ ತವರಿನಲ್ಲಿ ಆಡಿದ ಮೊದಲ ಪಂದ್ಯದಲ್ಲಿ ಪಂಜಾಬ್​ ಎದುರು ಗೆದ್ದಿದ್ದ ಆರ್​ಸಿಬಿ, ಕಳೆದ ಪಂದ್ಯದಲ್ಲಿ ಕೆಕೆಆರ್​ ಎದುರು ಎಡವಿತ್ತು. ಈ ಮೂಲಕ ಹಾಲಿ ಆವೃತ್ತಿಯಲ್ಲಿ ತವರಿನಲ್ಲೇ ಸೋತ ಮೊದಲ ತಂಡವೆನಿಸಿತ್ತು. ಜತೆಗೆ ದೊಡ್ಡ ಅಂತರದ ಸೋಲು ಫಾಫ್​ ಡು ಪ್ಲೆಸಿಸ್​ ಬಳಗದ ರನ್​ರೇಟ್​ಗೂ ಭಾರಿ ಹೊಡೆತ ನೀಡಿದೆ. ಹೀಗಾಗಿ ಆರ್​ಸಿಬಿ ಮುಂದಿನ ಪಂದ್ಯಗಳಲ್ಲಿ ಗೆಲುವಿನೊಂದಿಗೆ ರನ್​ರೇಟ್​ ಸುಧಾರಿಸಲು ಕೂಡ ಪ್ರಯತ್ನಿಸಬೇಕಾಗಿದೆ.

ಕೊಹ್ಲಿಗೆ ಬೇಕಿದೆ ಬೆಂಬಲ

ಮೊದಲ 3 ಪಂದ್ಯಗಳಲ್ಲಿ 2 ಅರ್ಧಶತಕ ಸಹಿತ 181 ರನ್​ ಬಾರಿಸಿರುವ ವಿರಾಟ್​ ಕೊಹ್ಲಿ ಆರ್​ಸಿಬಿ ತಂಡಕ್ಕೆ ಬ್ಯಾಟಿಂಗ್​ ವಿಭಾಗದಲ್ಲಿ ಏಕಾಂಗಿ ಆಸರೆ ಒದಗಿಸಿದ್ದಾರೆ. ಅವರಿಗೆ ತಂಡದ ಇತರ ಬ್ಯಾಟರ್​ಗಳಿಂದ, ಅದರಲ್ಲೂ ಪ್ರಮುಖವಾಗಿ ವಿದೇಶಿ ಬ್ಯಾಟರ್​ಗಳಿಂದ ಬೆಂಬಲ ಅಗತ್ಯವಾಗಿದೆ. ಕೆಕೆಆರ್​ ಎದುರು ಕೊಹ್ಲಿ ಇತರರಿಂದ ಸಮರ್ಥ ಬೆಂಬಲ ಲಭಿಸಿದ್ದರೆ, ಇನಿಂಗ್ಸ್​ ಪೂರ್ತಿ ಆಡಿದಾಗ 83ಕ್ಕೆ ಬದಲಾಗಿ 125 ರನ್​ ಗಳಿಸಲು ಸಾಧ್ಯವಿತ್ತು. ನಾಯಕ ಪ್ಲೆಸಿಸ್​ (46 ರನ್​), ಗ್ಲೆನ್​ ಮ್ಯಾಕ್ಸ್​ವೆಲ್​ (31), ಆಲ್ರೌಂಡರ್​ ಕ್ಯಾಮರಾನ್​ ಗ್ರೀನ್​ (54) ಮತ್ತು ರಜತ್​ ಪಾಟೀದಾರ್​ (21) ರನ್​ಬರ ಎದುರಿಸಿದ್ದಾರೆ. ಟಿ20 ವಿಶ್ವಕಪ್​ ವರ್ಷದಲ್ಲಿ ದಿನೇಶ್​ ಕಾರ್ತಿಕ್​ ಫಿನಿಷರ್​ ಪಾತ್ರದಲ್ಲಿ ಮತ್ತೆ ಲಯ ಕಂಡುಕೊಂಡಿರುವುದು ಆರ್​ಸಿಬಿಗೆ ಸಮಾಧಾನಕರ ಅಂಶ. ಮಹಿಪಾಲ್​ ಲೊಮ್ರೊರ್​ ಅಥವಾ ಸುಯಶ್​ ಪ್ರಭುದೇಸಾಯಿಗೆ ಈ ಬಾರಿ ಆರಂಭಕ 11ರ ಬಳಗದಲ್ಲೇ ಸ್ಥಾನ ಕಲ್ಪಿಸಿ ಬ್ಯಾಟಿಂಗ್​ ಬಲಪಡಿಸಬಹುದಾಗಿದೆ.

ಬೌಲಿಂಗ್​ ಸುಧಾರಣೆ ಅಗತ್ಯ

ಕಳೆದ ಹರಾಜಿನಲ್ಲಿ ಆರ್​ಸಿಬಿ ಖರೀದಿಸಿದ ಬೌಲರ್​ಗಳ ಪಟ್ಟಿಯನ್ನು ನೋಡಿದ ಬಳಿಕ ಅಭಿಮಾನಿಗಳು, ಈ ಬೌಲಿಂಗ್​ ವಿಭಾಗವನ್ನು ಇಟ್ಟುಕೊಂಡು ಚಿನ್ನಸ್ವಾಮಿ ಅಂಗಣದಲ್ಲಿ ಗೆಲ್ಲಬೇಕಾದರೆ 300 ಪ್ಲಸ್​ ರನ್​ ಗಳಿಸಬೇಕಾಗುತ್ತದೆ ಎಂದು ಬೇಸರಿಸಿದ್ದರು. ಟೂರ್ನಿಯಲ್ಲಿ ಆರ್​ಸಿಬಿಯ ನೀರಸ ಬೌಲಿಂಗ್​ ಗಮನಿಸಿದ ಬಳಿಕ ನಿರಾಸೆ ಇನ್ನಷ್ಟು ಹೆಚ್ಚಿದೆ. ಸ್ಟಾರ್​ ಸ್ಪಿನ್ನರ್​ ಇಲ್ಲದ ತಂಡದಲ್ಲಿ ವೇಗಿಗಳ ದಾಳಿಯೂ ಸತ್ವಹಿನವೆನಿಸಿದೆ. ಪ್ರಮುಖವಾಗಿ ಅಲ್ಜಾರಿ ಜೋಸೆಫ್, ಮೊಹಮದ್​ ಸಿರಾಜ್​ ದುಬಾರಿಯಾಗಿದ್ದು, ಲಾಕಿ ಫಗ್ಯುರ್ಸನ್​ ಅಥವಾ ರೀಸ್​ ಟಾಪ್ಲೆ ಕಣಕ್ಕಿಳಿಸುವ ಅಗತ್ಯವಿದೆ. ಜತೆಗೆ ಕನ್ನಡಿಗ ವೈಶಾಕ್​ ವಿಜಯ್​ಕುಮಾರ್​ ಅವರ ಚಿನ್ನಸ್ವಾಮಿ ಅಂಗಣದ ಅನುಭವವನ್ನು ಸಮರ್ಥವಾಗಿ ಬಳಸಿಕೊಳ್ಳುವ ಅಗತ್ಯವಿದೆ. ಪ್ರಮುಖವಾಗಿ ಪವರ್​ಪ್ಲೇ ಮತ್ತು ಸ್ಲಾಗ್​ ಓವರ್​ಗಳಲ್ಲಿ ಆರ್​ಸಿಬಿ ಬೌಲಿಂಗ್​ ಸುಧಾರಿಸಬೇಕಿದೆ.

ಲಖನೌಗೆ ಕನ್ನಡಿಗರ ಬಲ

ಕರ್ನಾಟಕದ ಇಬ್ಬರು ಆಟಗಾರರು ತಂಡದ ಪ್ರಮುಖ ಸದಸ್ಯರಾಗಿರುವುದು ಲಖನೌ ಆತ್ಮವಿಶ್ವಾಸ ಹೆಚ್ಚಿಸಿದೆ. ಆದರೆ ಫಿಟ್ನೆಸ್​ ದೃಷ್ಟಿಯಿಂದ ಕೆಎಲ್​ ರಾಹುಲ್​ ಮತ್ತೆ ನಾಯಕತ್ವ ತೊರೆದು ಕೇವಲ ಬ್ಯಾಟಿಂಗ್​ ಮಾತ್ರ ಮಾಡುವರೇ ಎಂಬುದು ಸ್ಪಷ್ಟವಿಲ್ಲ. ಇನ್ನು ಕಳೆದ ದೇಶೀಯ ಋತುವಿನಲ್ಲಿ ರನ್​ಮಳೆ ಹರಿಸಿ ಟೆಸ್ಟ್​ ಪದಾರ್ಪಣೆಯನ್ನೂ ಮಾಡಿರುವ ಎಡಗೈ ಬ್ಯಾಟರ್​ ದೇವದತ್​ ಪಡಿಕ್ಕಲ್​, ಮೊದಲ 2 ಪಂದ್ಯಗಳಲ್ಲೂ ಒಂದಂಕಿ ದಾಟಿಲ್ಲ. ಹೀಗಾಗಿ ಈಗ ತವರಿನಲ್ಲೇ ಲಯಕ್ಕೆ ಮರಳುವ ತವಕದಲ್ಲಿದ್ದಾರೆ. ಇನ್ನು ಉಪನಾಯಕ ನಿಕೋಲಸ್​ ಪೂರನ್​, ಕ್ವಿಂಟನ್​ ಡಿಕಾಕ್​ ಬ್ಯಾಟಿಂಗ್​ ಈಗಾಗಲೆ ಲಖನೌಗೆ ಬಲ ತುಂಬಿದ್ದರೆ, ಬೌಲಿಂಗ್​ನಲ್ಲಿ ಕಳೆದ ಪಂದ್ಯದಲ್ಲಿ ಸೆನ್ಸೇಶನ್​ ಸೃಷ್ಟಿಸಿದ ಯುವ ವೇಗಿ ಮಯಾಂಕ್​ ಯಾದವ್​ ಈ ಬಾರಿ ಕೇಂದ್ರಬಿಂದುವಾಗಿರಲಿದ್ದಾರೆ.

ಕಳೆದ ವರ್ಷ ರೋಚಕ ಫೈಟ್​

ಕಳೆದ ಆವೃತ್ತಿಯಲ್ಲಿ ಆರ್​ಸಿಬಿ-ಲಖನೌ ನಡುವಿನ ಪಂದ್ಯ ಸಾಕಷ್ಟು ಬಿಸಿ ಏರಿಸಿತ್ತು. ಬೆಂಗಳೂರಿನಲ್ಲಿ ಆರ್​ಸಿಬಿಯನ್ನು ಸೋಲಿಸಿ ಅಭಿಮಾನಿಗಳ ಬಾಯಿ ಮುಚ್ಚಿಸಿದ್ದ ಲಖನೌದ ಆಗಿನ ಮೆಂಟರ್​ ಗಂಭೀರ್​ಗೆ ಕೊಹ್ಲಿ, ಲಖನೌದಲ್ಲಿ ಗೆದ್ದು ದಿಟ್ಟ ಉತ್ತರ ನೀಡಿದ್ದರು. ಜತೆಗೆ ಕೊಹ್ಲಿ ಮತ್ತು ಆಫ್ಘನ್​​ ವೇಗಿ ನವೀನ್​ ಉಲ್​ ಹಕ್​ ಜಟಾಪಟಿಯೂ ಗಮನಸೆಳೆದಿತ್ತು. ಆದರೆ ಕಳೆದ ಏಕದಿನ ವಿಶ್ವಕಪ್​ ವೇಳೆ ಕೊಹ್ಲಿ-ನವೀನ್​ ರಾಜಿಯಾಗಿದ್ದರೆ, ಗಂಭೀರ್​ ಈ ಬಾರಿ ಕೆಕೆಆರ್​ಗೆ ಹೋಗಿದ್ದಾರೆ. ಹೀಗಾಗಿ ಹಿಂದಿನ ಸೇಡು ಈ ಬಾರಿ ಮುಂದುವರಿಯುವ ಸಾಧ್ಯತೆಗಳಿಲ್ಲ.

ಮುಖಾಮುಖಿ: 4

ಆರ್​ಸಿಬಿ: 3

ಲಖನೌ: 1

ಆರಂಭ: ರಾತ್ರಿ 7.30

ನೇರಪ್ರಸಾರ: ಸ್ಟಾರ್​ ಸ್ಪೋರ್ಟ್ಸ್​, ಜಿಯೋಸಿನಿಮಾ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net