

ನವದೆಹಲಿ: ಪ್ರಸ್ತುತ ಪ್ರವಾಸಿ ಆಸ್ಟ್ರೇಲಿಯಾ ವಿರುದ್ಧ ನಡೆಯುತ್ತಿರುವ ಐದು ಪಂದ್ಯಗಳ ಟಿ-20 ಸರಣಿಯಲ್ಲಿ 2-0 ಅಂತರದಿಂದ ಭಾರತ ಮುನ್ನಡೆ ಕಾಯ್ದುಕೊಂಡಿದೆ. ಎರಡೂ ಪಂದ್ಯಗಳಲ್ಲಿ ಯುವ ಆಟಗಾರ ರಿಂಕು ಸಿಂಗ್ ತಮ್ಮ ಸ್ಫೋಟಕ ಪ್ರದರ್ಶನದೊಂದಿಗೆ ಗಮನ ಸೆಳೆದಿದ್ದು, ಟೀಮ್ ಇಂಡಿಯಾದ ಸ್ಟಾರ್ ಬ್ಯಾಟ್ಸ್ಮನ್ ಆಗುವ ಎಲ್ಲ ಲಕ್ಷಣಗಳು ಗೋಚರಿಸುತ್ತಿವೆ. ಇದರ ನಡುವೆ ರಿಂಕು ಸಿಂಗ್ ಕುರಿತಾದ ಸುದ್ದಿಯೊಂದು ಹರಿದಾಡುತ್ತಿದೆ. ಅದೇನೆಂದರೆ, ರಿಂಕು ಕ್ರಿಕೆಟಿಗನಾಗುವ ಮುಂಚೆ ಸ್ವೀಪರ್ (ಸ್ವಚ್ಛತಾ ಸಿಬ್ಬಂದಿ) ಆಗಿದ್ದರಂತೆ. ಇದು ನಿಜವೋ? ಸುಳ್ಳೋ? ಎಂಬುದನ್ನು ನಾವೀಗ ತಿಳಿದುಕೊಳ್ಳೋಣ.
ರಿಂಕು ಸಿಂಗ್ ಯಶಸ್ಸಿನ ಹಿಂದಿನ ಹಾದಿ ಸುಲಭವಾಗಿರಲಿಲ್ಲ. ಈ ಹಂತಕ್ಕೆ ಬರಲು ರಿಂಕು ಸಾಕಷ್ಟು ಸವಾಲುಗಳನ್ನು ಎದುರಿಸಿದ್ದಾರೆ. ಅವರ ತಂದೆ ಇಂದಿಗೂ ಎಲ್ಪಿಜಿ ಸಿಲಿಂಡರ್ ಡಿಲಿವರಿ ಮ್ಯಾನ್ ಆಗಿ ಕೆಲಸ ಮಾಡುತ್ತಿದ್ದಾರೆ. ಸಾಕಷ್ಟು ಆರ್ಥಿಕ ತೊಂದರೆಗಳನ್ನು ಎದುರಿಸಿರುವ ರಿಂಕು, ಒಂದೊಮ್ಮೆ ಮನೆಗೆ ನೆರವಾಗಲು ಕೆಲಸದ ಆಫರ್ಗಳು ಸಹ ಬಂದಿದ್ದವು. ತನಗೆ ಬಂದಿದ್ದ ಸ್ವೀಪರ್ ಕೆಲಸವನ್ನು ತಿರಸ್ಕರಿಸಿದ ರಿಂಕು, ತಾಯಿಯೊಂದಿಗೆ ಕ್ರಿಕೆಟ್ ಆಡುವ ಆಸೆಯನ್ನು ವ್ಯಕ್ತಪಡಿಸಿದ್ದರು. ಮನೆಯವರು ಕೂಡ ರಿಂಕು ಸಿಂಗ್ ಆಸೆಗೆ ಒತ್ತಾಸೆಯಾಗಿ ನಿಂತರು. ಅಲ್ಲಿಂದಾಚೆಗೆ ರಿಂಕು ಜೀವನದಲ್ಲಿ ನಡೆದಿದ್ದೆಲ್ಲ ಇತಿಹಾಸ ಪುಟಗಳಿಗೆ ಸೇರಿದೆ.
ರಿಂಕು ಸಿಂಗ್ ಕುರಿತು
ರಿಂಕು ಅವರು ಉತ್ತರ ಪ್ರದೇಶದ ಆಲಿಗಢದಲ್ಲಿ ಜನಿಸಿದರು. 2023ನೇ ಸಾಲಿನ ಐಪಿಎಲ್ಗೆ ಅವರನ್ನು 55 ಲಕ್ಷ ರೂ.ಗೆ ಕೆಕೆಆರ್ ತಂಡ ತಮ್ಮಲ್ಲೇ ಉಳಿಸಿಕೊಂಡಿತು. 2018ರಲ್ಲಿ 80 ಲಕ್ಷ ರೂ.ಗೆ ರಿಂಕು ಅವರನ್ನು ಕೆಕೆಆರ್ ಪ್ರಪ್ರಥಮವಾಗಿ ಹರಾಜಿನಲ್ಲಿ ಖರೀದಿ ಮಾಡಿತು. ಆದರೆ, ತನ್ನ ಚೊಚ್ಚಲ ಸೀಸನ್ನಲ್ಲಿ ರಿಂಕು ಅವರು ಉತ್ತಮ ಪ್ರದರ್ಶನವನ್ನು ತೋರದಿದ್ದರೂ ಅವರ ಸಾಮರ್ಥ್ಯವನ್ನು ಪರಿಗಣಿಸಲಾಯಿತು ಮತ್ತು ಅವರನ್ನು 2019ನೇ ಸಾಲಿನ ಐಪಿಎಲ್ ಟೂರ್ನಿಗೂ ತಂಡದಲ್ಲಿ ಉಳಿಸಿಕೊಳ್ಳಲಾಯಿತು. ರಿಂಕು ಅವರು ತಮ್ಮ ಬ್ಯಾಟಿಂಗ್ ನೈಪುಣ್ಯತೆಯನ್ನು ಹೆಚ್ಚಿಸಿಕೊಳ್ಳಲು ಕೆಕೆಆರ್ ಅಕಾಡೆಮಿಯಲ್ಲಿ ಕೆಕೆಆರ್ ಸಹಾಯಕ ಕೋಚ್ ಅಭಿಷೇಕ್ ನಾಯರ್ ಸಲಹೆ ಪಡೆದುಕೊಂಡಿದ್ದಾರೆ. ಅದರ ಫಲಿತಾಂಶಗಳು ಉತ್ತರ ಪ್ರದೇಶಕ್ಕಾಗಿ ಅವರ 2018-19 ರಣಜಿ ಟ್ರೋಫಿ ಆಡಿದಾಗ ಗೋಚರಿಸಿದವು. ರಣಜಿಯಲ್ಲಿ ರಿಂಕು ಉತ್ತಮ ಪ್ರದರ್ಶನ ನೀಡಿದರು. ನಾಲ್ಕು ಶತಕಗಳೊಂದಿಗೆ ಪಂದ್ಯಾವಳಿಯಲ್ಲಿ ಮೂರನೇ ಅತಿ ಹೆಚ್ಚು ರನ್ ಗಳಿಸಿದ (10 ಇನ್ನಿಂಗ್ಸ್‌ಗಳಲ್ಲಿ 953 ರನ್) ಆಟಗಾರ ಎನಿಸಿಕೊಂಡರು. 2017ರಲ್ಲಿ ರಿಂಕು ಅವರು ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ (ಈಗ ಪಂಜಾಬ್ ಕಿಂಗ್ಸ್) ಭಾಗವಾಗಿದ್ದರು. ಅನುಮತಿ ಪಡೆಯದೆ ಅಬುಧಾಬಿಯಲ್ಲಿ ರಂಜಾನ್ ಟಿ20 ಪಂದ್ಯಾವಳಿಯಲ್ಲಿ ಭಾಗವಹಿಸಿದ್ದಕ್ಕಾಗಿ ಬಿಸಿಸಿಐ ಮೂರು ತಿಂಗಳು ರಿಂಕು ಅವರನ್ನು ಅಮಾನತುಗೊಳಿಸಿತ್ತು. ಇಲ್ಲಿಯವರೆಗೆ ರಿಂಕು ಅವರು 40 ಪ್ರಥಮ ದರ್ಜೆ, 50 ಲಿಸ್ಟ್-ಎ ಮತ್ತು 78 ಟಿ20 ಪಂದ್ಯಗಳನ್ನು ಆಡಿದ್ದಾರೆ. ಎಂಟು ಶತಕಗಳು ಮತ್ತು 41 ಅರ್ಧಶತಕಗಳೊಂದಿಗೆ 6,016 ರನ್ ಗಳಿಸಿದ್ದಾರೆ.
ಏಷ್ಯನ್ ಗೇಮ್ಸ್ನಲ್ಲಿ ಭಾಗವಹಿಸಿದ್ದ ರಿಂಕು ಚಿನ್ನದ ಪದಕವನ್ನು ಗೆದ್ದಿದ್ದಾರೆ. ಐಪಿಎಲ್ನಲ್ಲಿ ಕೊಲ್ಕತ್ತ ನೈಟ್ ರೈಡರ್ಸ್ ಪರ ಆಡುತ್ತಿರುವ ರಿಂಕು, ತಮ್ಮ ಸ್ಫೋಟಕ ಪ್ರದರ್ಶನದೊಂದಿಗೆ ಎಲ್ಲರ ಗಮನ ಸೆಳೆದಿದ್ದಾರೆ. ಒಂದೇ ಓವರ್ನಲ್ಲಿ ಐದು ಸಿಕ್ಸರ್ ಸಿಡಿಸಿ ರಿಂಕು ಎಲ್ಲರ ಗಮನ ಸೆಳೆದರು.
ಇನ್ನು ಪ್ರಸಕ್ತ ಆಸೀಸ್ ವಿರುದ್ಧ ನಡೆಯುತ್ತಿರುವ ಟಿ20 ಸರಣಿಯಲ್ಲಿ ಮೊದಲ ಎರಡೂ ಪಂದ್ಯಗಳಲ್ಲಿ ಅಮೋಘ ಆಟವಾಡುವ ಮೂಲಕ ರಿಂಕು ಸಿಂಗ್ ಭರವಸೆ ಮೂಡಿಸಿದ್ದಾರೆ. ನ.23ರಂದು ನಡೆದ ಮೊದಲ ಟಿ20 ಪಂದ್ಯದಲ್ಲಿ ಅಬ್ಬರಿಸಿದ ರಿಂಕು ಸಿಂಗ್ ಕೊನೆಯಲ್ಲಿ 14 ಎಸೆತಕ್ಕೆ 4 ಬೌಂಡರಿ ನೆರವಿನಿಂದ ಅಜೇಯ 22 ರನ್ ರನ್ ಗಳಿಸಿದರು. ನ. 26 ರಂದು ನಡೆದ 2ನೇ ಟಿ20 ಪಂದ್ಯದಲ್ಲಿ 19ನೇ ಓವರ್ನಲ್ಲಿ ಕ್ರೀಸ್ಗೆ ಬಂದ ರಿಂಕು ಸಿಂಗ್ ಕೊನೆಯಲ್ಲಿ ಅಬ್ಬರಿಸಿ ಬೊಬ್ಬಿರಿದರು. ಕೇವಲ 9 ಎಸೆತಗಳನ್ನು ಎದುರಿಸಿದ ರಿಂಕು 4 ಬೌಂಡರಿ ಮತ್ತು 2 ಸಿಕ್ಸರ್ ನೆರವಿನಿಂದ 31 ರನ್ ಗಳಿಸಿ ಅಜೇಯರಾಗಿ ಉಳಿದರು. (ಏಜೆನ್ಸೀಸ್)