

ಗುವಾಹಟಿ: ಸತತ ಎರಡು ಪಂದ್ಯಗಳಲ್ಲಿ ಗೆದ್ದು ಮುನ್ನಡೆ ಕಂಡಿರುವ ಭಾರತದ ಯುವ ತಂಡ ಜಯದ ಓಟ ಮುಂದುವರಿಸುವ ಮೂಲಕ ಸರಣಿ ವಶಪಡಿಸಿಕೊಳ್ಳುವ ತವಕದಲ್ಲಿದೆ. ಪ್ರವಾಸಿ ಆಸ್ಟ್ರೇಲಿಯಾ ಎದುರು ಮೂರನೇ ಟಿ20 ಪಂದ್ಯ ಮಂಗಳವಾರ ಬರ್ಸಾಪುರ ಕ್ರೀಡಾಂಗಣದಲ್ಲಿ ನಡೆಯಲಿದ್ದು, ಸೂರ್ಯಕುಮಾರ್ ಯಾದವ್ ನಾಯಕನಾಗಿ ಮೊದಲ ಸರಣಿ ಜಯದ ನಿರೀಕ್ಷೆಯಲ್ಲಿದ್ದಾರೆ. ಏಕದಿನ ವಿಶ್ವಕಪ್ ಗೆಲುವಿನ ಬಳಿಕ ಮೈಮರೆತಂತಿರುವ ಕಾಂಗರೂ ಪಡೆ ಈ ಸಲ ಪುಟಿದೆದ್ದು ಆತಿಥೇಯರಿಗೆ ತಿರುಗೇಟು ನೀಡುವ ಮೂಲಕ ಸರಣಿ ಜೀವಂತವಿರಿಸುವ ಹಂಬಲದಲ್ಲಿದೆ.
ಒತ್ತಡದಲ್ಲಿ ಆಸ್ಟ್ರೇಲಿಯಾ: ಏಕದಿನ ವಿಶ್ವ ಚಾಂಪಿಯನ್ ಆಸ್ಟ್ರೇಲಿಯಾ ತಂಡ ಸರಣಿ ಜೀವಂತವಿರಿಸಲು ಗೆಲ್ಲಲೇಬೇಕಾದ ಒತ್ತಡದಲ್ಲಿ ಕಣಕ್ಕಿಳಿಯಲಿದೆ. ತಿರುವನಂತಪುರದಲ್ಲಿ ಅಗ್ರ ಕ್ರಮಾಂಕದ ವೈಲ್ಯದ ನಡುವೆಯೂ ಟಿಮ್ ಡೇವಿಡ್, ಮಾರ್ಕಸ್ ಸ್ಟೋಯಿನಿಸ್ ಹೋರಾಟ ಜೀವಂತವಿಟ್ಟರು. ಆದರೆ ಗ್ಲೆನ್ ಮ್ಯಾಕ್ಸ್‌ವೆಲ್, ಆಡಂ ಜಂಪಾ ಪ್ರದರ್ಶನ ಆಸೀಸ್‌ಗೆ ಹಿನ್ನಡೆ ತಂದಿತ್ತು. ಸ್ಟೀವನ್ ಸ್ಮಿತ್ ವಿಶ್ವಕಪ್ ಟೂರ್ನಿಯ ಬಳಿಕ ಟಿ20 ಸರಣಿಯಲ್ಲೂ ಆಡುತ್ತಿದ್ದು 3ನೇ ಪಂದ್ಯದ ಬಳಿಕ ತವರಿಗೆ ಮರಳುವ ಸಾಧ್ಯತೆಗಳಿವೆ. ಅನನುಭವಿ ಬೌಲಿಂಗ್ ವಿಭಾಗ ಸಂಪೂರ್ಣ ವೈಲ್ಯ ಕಂಡಿದೆ.
ಪಿಚ್ ರಿಪೋರ್ಟ್
ಬರ್ಸಾಪುರ ಕ್ರೀಡಾಂಗಣದ ಪಿಚ್ ಬ್ಯಾಟರ್‌ಗಳಿಗೆ ಹೆಚ್ಚಿನ ನೆರವು ಒದಗಿಸಲಿದ್ದು, ರನ್‌ಮಳೆ ಹರಿಯುವ ಸಾಧ್ಯತೆ ಹೆಚ್ಚು. ಟಾಸ್ ಗೆದ್ದ ತಂಡ ಚೇಸಿಂಗ್‌ಗೆ ಆದ್ಯತೆ ನೀಡಲಿದೆ. ಪಂದ್ಯ ಸಾಗಿದಂತೆ ಬೌಲರ್‌ಗಳಿಗೆ ಇಬ್ಬನಿ ಸಮಸ್ಯೆ ಕಾಡಲಿದೆ. ಪಂದ್ಯಕ್ಕೆ ಮಳೆ ಆಡಚಣೆಯ ಯಾವುದೆ ಸೂಚನೆಗಳಿಲ್ಲ