ಏಕದಿನ ಸರಣಿಯಲ್ಲಿ ದಾಖಲೆಗಳ ನಿರೀಕ್ಷೆ; ರೋ-ಕೊಗೆ ಮೈಲಿಗಲ್ಲುಗಳನ್ನು ನೆಡುವ ಅವಕಾಶ!

ರೆಕಾರ್ಡ್​ ಸನಿಹದಲ್ಲಿ ಶುಭಮಾನ್​ ಗಿಲ್​, ಕೆಎಲ್​ ರಾಹುಲ್​
cricket
ರೋಹಿತ್​ ಶರ್ಮ-ವಿರಾಟ್​ ಕೊಹ್ಲಿಏಜೆನ್ಸಿ
Published on: 

ಬೆಂಗಳೂರು: ನ್ಯೂಜಿಲೆಂಡ್​ ಪ್ರವಾಸದ ಟಿ20 ಸರಣಿಯಲ್ಲಿ ಭಾರತದ ಯುವ ಆಟಗಾರರು ಭರ್ಜರಿ ನಿರ್ವಹಣೆ ತೋರಿ ಸರಣಿ ವಶಪಡಿಸಿಕೊಂಡಿದ್ದರು. ಇದೀಗ 5 ಪಂದ್ಯಗಳ ಏಕದಿನ ಸರಣಿಗೆ ವೇದಿಕೆ ಸಜ್ಜಾಗುತ್ತಿದ್ದು, ಅನುಭವಿ ಬ್ಯಾಟರ್​ಗಳಾದ ರೋಹಿತ್​ ಶರ್ಮ-ವಿರಾಟ್​ ಕೊಹ್ಲಿ ಕಣಕ್ಕಿಳಿಯಲಿರುವುದರಿಂದ ಈ ಸರಣಿ ಹೆಚ್ಚಿನ ಆಕರ್ಷಣೆಯನ್ನು ಪಡೆದುಕೊಂಡಿದೆ. ಟಿ20ಯಂತೆ ಏಕದಿನ ಸರಣಿಯಲ್ಲೂ ರನ್​ಪ್ರವಾಹ ಹರಿಯುವ ನಿರೀಕ್ಷೆ ಇದ್ದು, ಇದರೊಂದಿಗೆ ಹಲವು ದಾಖಲೆಗಳು ನಿರ್ಮಾಣಗೊಳ್ಳುವ ಅವಕಾಶವೂ ಇದೆ. ಬುಧವಾರ ಆಕ್ಲೆಂಡ್​ನಲ್ಲಿ ಶುರುವಾಗಲಿರುವ ಏಕದಿನ ಸರಣಿಯಲ್ಲಿ ಭಾರತೀಯರು ನಿರೀಸುತ್ತಿರುವ ಕೆಲ ಪ್ರಮುಖ ದಾಖಲೆಗಳ ಸಂಪ್ತ ವಿವರ ಇಲ್ಲಿದೆ.

ಕೊಹ್ಲಿಗೆ ಶತಕದ ದಾಖಲೆ ತವಕ

ವಿರಾಟ್​ ಕೊಹ್ಲಿ ಈಗಾಗಲೆ 55 ಶತಕಗಳೊಂದಿಗೆ ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್​ನಲ್ಲಿ ಗರಿಷ್ಠ ಶತಕ ಸಿಡಿಸಿದ ಬ್ಯಾಟರ್​ ಎನಿಸಿದ್ದಾರೆ. ಕಿವೀಸ್​ ವಿರುದ್ಧದ ಸರಣಿಯಲ್ಲಿ ಅವರು ಇನ್ನೊಂದು ಶತಕ ಸಿಡಿಸಿದರೆ ಲಿಸ್ಟ್​ ಎ ಏಕದಿನ ಕ್ರಿಕೆಟ್​ನಲ್ಲೂ ಗರಿಷ್ಠ ಶತಕ ಸಿಡಿಸಿದ ದಾಖಲೆ ಬರೆಯಲಿದ್ದಾರೆ. ಸದ್ಯ ಅವರು ತಲಾ 60 ಶತಕಗಳೊಂದಿಗೆ ದಿಗ್ಗಜ ಸಚಿನ್​ ತೆಂಡುಲ್ಕರ್​ ಜತೆಗೆ ಈ ದಾಖಲೆಯನ್ನು ಹಂಚಿಕೊಂಡಿದ್ದಾರೆ. ಕೊಹ್ಲಿ (8,720) ಇನ್ನು ಚೇಸಿಂಗ್​ನಲ್ಲಿ 54 ರನ್​ ಗಳಿಸಿದರೆ, ಏಕದಿನ ಕ್ರಿಕೆಟ್​ನಲ್ಲಿ ಚೇಸಿಂಗ್​ನಲ್ಲಿ ಗರಿಷ್ಠ ರನ್​ ಗಳಿಸಿದ ಸಚಿನ್​ ತೆಂಡುಲ್ಕರ್​ (8,667) ದಾಖಲೆಯನ್ನೂ ಮುರಿಯಲಿದ್ದಾರೆ. ಕೊಹ್ಲಿ ಸರಣಿಯಲ್ಲಿ 103 ರನ್​ ಗಳಿಸಿದರೆ, ನ್ಯೂಜಿಲೆಂಡ್​ ವಿರುದ್ಧ ಏಕದಿನ ಕ್ರಿಕೆಟ್​ನಲ್ಲಿ 2 ಸಾವಿರ ರನ್​ ಗಳಿಸಿದ ಮೊದಲ ಬ್ಯಾಟರ್​ ಎನಿಸಲಿದ್ದಾರೆ. 179 ರನ್​ ಗಳಿಸಿದರೆ, ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ನ್ಯೂಜಿಲೆಂಡ್​ ವಿರುದ್ಧ ಗರಿಷ್ಠ ರನ್​ ಗಳಿಸಿದ ಬ್ಯಾಟರ್​ ಎನಿಸಲಿದ್ದಾರೆ. 12 ರನ್​ ಗಳಿಸಿದರೆ ಏಕದಿನದಲ್ಲಿ 3ನೇ ಕ್ರಮಾಂಕದಲ್ಲಿ 13 ಸಾವಿರ ರನ್​ ಪೂರೈಸಿದ ಮೊದಲಿಗ ಎನಿಸಲಿದ್ದಾರೆ. ಕೊಹ್ಲಿ ಇನ್ನು 5 ಕ್ಯಾಚ್​ ಹಿಡಿದರೆ ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ 350 ಕ್ಯಾಚ್​ ಹಿಡಿದ ಮೊದಲ ಭಾರತೀಯ ಫೀಲ್ಡರ್​ ಎನಿಸಲಿದ್ದಾರೆ. ಕೊಹ್ಲಿ ಇನ್ನು 19 ಸಿಕ್ಸರ್​ ಸಿಡಿಸಿದರೆ, ಗಂಗೂಲಿ (189), ತೆಂಡುಲ್ಕರ್​ರನ್ನು (195) ಹಿಂದಿಕ್ಕಿ, ರೋಹಿತ್​ (381), ಧೋನಿ (222) ಬಳಿಕ ಏಕದಿನದಲ್ಲಿ 200 ಸಿಕ್ಸರ್​ ಸಿಡಿಸಿದ 3ನೇ ಭಾರತೀಯ ಎನಿಸಲಿದ್ದಾರೆ.

400 ಸಿಕ್ಸರ್​ ಸನಿಹ ರೋಹಿತ್​

ರೋಹಿತ್​ ಶರ್ಮ (381 ಸಿಕ್ಸರ್​) ಸರಣಿಯಲ್ಲಿ 19 ಸಿಕ್ಸರ್​ ಸಿಡಿಸಿದರೆ, ಏಕದಿನ ಕ್ರಿಕೆಟ್​ನಲ್ಲಿ 400 ಸಿಕ್ಸರ್​ ಪೂರೈಸಿದ ಮೊದಲಿಗರೆನಿಸುವ ಅವಕಾಶ ಹೊಂದಿದ್ದಾರೆ. ಇನ್ನು ಸರಣಿಯಲ್ಲಿ 26 ಸಿಕ್ಸರ್​ ಸಿಡಿಸಿದರೆ, ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ 700 ಸಿಕ್ಸರ್​ ಸಿಡಿಸಿದ ಮೊದಲಿಗರೆನಿಸಲಿದ್ದಾರೆ. ರೋಹಿತ್​ ಏಕದಿನ ಕ್ರಿಕೆಟ್​ನಲ್ಲಿ ಇದುವರೆಗೆ 35 ಶತಕ, 63 ಅರ್ಧಶತಕಗಳ ಸಹಿತ 98 ಬಾರಿ 50 ಪ್ಲಸ್​ ರನ್​ ಗಳಿಸಿದ್ದಾರೆ. ಇನ್ನೆರಡು ಬಾರಿ 50 ಪ್ಲಸ್​ ರನ್​ ಗಳಿಸಿದರೆ, 100 ಬಾರಿ ಈ ಸಾಧನೆ ಮಾಡಿದ ವಿಶ್ವದ 6ನೇ ಬ್ಯಾಟರ್​ ಎನಿಸಲಿದ್ದಾರೆ. ಸಚಿನ್​ ತೆಂಡುಲ್ಕರ್​, ವಿರಾಟ್​ ಕೊಹ್ಲಿ, ಸಂಗಕ್ಕರ, ಪಾಂಟಿಂಗ್​, ಕ್ಯಾಲಿಸ್​ ಹಿಂದಿನ ಸಾಧಕರು. ರೋಹಿತ್​ ಇನ್ನು 6 ಸಿಕ್ಸರ್​ ಸಿಡಿಸಿದರೆ, ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ 600 ಸಿಕ್ಸರ್​ ಸಿಡಿಸಿದ ಮೊದಲ ಆರಂಭಿಕ ಎನಿಸಲಿದ್ದಾರೆ. ಇದಲ್ಲದೆ, ರೋಹಿತ್​ ಸರಣಿಯಲ್ಲಿ ಶತಕ ಸಿಡಿಸಿದರೆ, ಕಿವೀಸ್​ ನೆಲದ ಏಕದಿನದಲ್ಲಿ ಶತಕ ಸಿಡಿಸಿದ ಅತಿ ಹಿರಿಯ ಎನಿಸಲಿದ್ದಾರೆ. 39 ವರ್ಷದ ಅವರು ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರೂ, ಭಾರತದ ಅತಿ ಹಿರಿಯ ಸಾಧಕ ಎನಿಸಲಿದ್ದಾರೆ.

ಕಪಿಲ್​ ದಾಖಲೆಯತ್ತ ಗಿಲ್​

ನಾಯಕ ಶುಭಮಾನ್​ ಗಿಲ್​ ಸರಣಿಯಲ್ಲಿ 71 ರನ್​ ಗಳಿಸಿದರೆ, ಏಕದಿನ ಕ್ರಿಕೆಟ್​ನ ಗರಿಷ್ಠ ರನ್​ ಸ್ಕೋರರ್​ಗಳ ಪಟ್ಟಿಯಲ್ಲಿ ಮಾಜಿ ನಾಯಕ ಕಪಿಲ್​ ದೇವ್​ ಅವರನ್ನು ಹಿಂದಿಕ್ಕಲಿದ್ದಾರೆ. ಕಪಿಲ್​ 3783 ರನ್​ಗಳೊಂದಿಗೆ ಏಕದಿನದಿಂದ ನಿವೃತ್ತಿಯಾಗಿದ್ದರೆ, ಗಿಲ್​ ಸದ್ಯ 3,713 ರನ್​ ಗಳಿಸಿದ್ದಾರೆ. ಇನ್ನು ಗಿಲ್​ಗೆ ಏಕದಿನದಲ್ಲಿ ನಾಯಕನಾಗಿ ಒಂದು ಸಾವಿರ ರನ್​ ಪೂರೈಸಲು 63 ರನ್​ಗಳಷ್ಟೇ ಅಗತ್ಯವಿದೆ.

7 ವರ್ಷಗಳ ಬಳಿಕ ಕಿವೀಸ್​ನಲ್ಲಿ ಏಕದಿನ ಸರಣಿ ಗೆಲುವಿನ ಗುರಿ

ನ್ಯೂಜಿಲೆಂಡ್​ ನೆಲದಲ್ಲಿ ಆಡಿದ ಸತತ 3ನೇ ಟಿ20 ಸರಣಿಯಲ್ಲೂ ಗೆದ್ದಿರುವ ಭಾರತ ತಂಡ, ಏಕದಿನ ಕ್ರಿಕೆಟ್​ನಲ್ಲಿ 7 ವರ್ಷಗಳ ಬಳಿಕ ಸರಣಿ ಜಯಿಸುವ ಗುರಿ ಹೊಂದಿದೆ. 2019ರಲ್ಲಿ ಕೊನೆಯದಾಗಿ ಭಾರತ ತಂಡ ನ್ಯೂಜಿಲೆಂಡ್​ ನೆಲದಲ್ಲಿ ಏಕದಿನ ಸರಣಿ ಗೆದ್ದಿತ್ತು. ನಂತರದ 2 ಪ್ರವಾಸಗಳಲ್ಲಿ ಭಾರತ ತಂಡ ಏಕದಿನ ಸರಣಿಯಲ್ಲಿ ಸೋತಿತ್ತು. 2009ರಲ್ಲಿ ಭಾರತ ಮೊದಲ ಬಾರಿಗೆ ನ್ಯೂಜಿಲೆಂಡ್​ನಲ್ಲಿ ಏಕದಿನ ಸರಣಿ ಗೆದ್ದಿತ್ತು. ಇದೀಗ 3ನೇ ಬಾರಿ ಕಿವೀಸ್​ ನೆಲದಲ್ಲಿ ಏಕದಿನ ಸರಣಿ ಗೆಲ್ಲಲು ಪ್ರಯತ್ನಿಸಲಿದೆ.

ಎರಡನೇ ಗರಿಷ್ಠ ರನ್​ ಗಳಿಸಿದ ಕೀಪರ್​ ಎನಿಸುವತ್ತ ರಾಹುಲ್​

ಕೆಎಲ್​ ರಾಹುಲ್​ ಸರಣಿಯಲ್ಲಿ 276 ರನ್​ ಗಳಿಸಿದರೆ ದಿಗ್ಗಜ ರಾಹುಲ್​ ದ್ರಾವಿಡ್​ (2,300) ಅವರನ್ನು ಹಿಂದಿಕ್ಕಿ ಏಕದಿನ ಕ್ರಿಕೆಟ್​ನಲ್ಲಿ ಎಂಎಸ್​ ಧೋನಿ ಬಳಿಕ ಗರಿಷ್ಠ ರನ್​ ಗಳಿಸಿದ ಭಾರತೀಯ ವಿಕೆಟ್​ ಕೀಪರ್​ ಎನಿಸಲಿದ್ದಾರೆ. ಸದ್ಯ ರಾಹುಲ್​ ವಿಕೆಟ್​ ಕೀಪರ್​ ಆಗಿ 2,025 ರನ್​ ಗಳಿಸಿದ್ದಾರೆ. ಅದಲ್ಲದೆ ಇನ್ನೊಂದು ಶತಕ ಸಿಡಿಸಿದರೂ, ಅವರು ಧೋನಿ (10) ಬಳಿಕ ಗರಿಷ್ಠ ಶತಕ ಸಿಡಿಸಿದ ಭಾರತೀಯ ವಿಕೆಟ್​ ಕೀಪರ್​ ಎನಿಸಲಿದ್ದಾರೆ. ಸದ್ಯ ಅವರು ಈ ಗೌರವವನ್ನು ರಾಹುಲ್​ ದ್ರಾವಿಡ್​ (4) ಜತೆ ಹಂಚಿಕೊಂಡಿದ್ದಾರೆ.

ವಿಶ್ವ ನಂ. 1 ಪಟ್ಟಕ್ಕೂ ಕಾದಾಟ

ಭಾರತ-ನ್ಯೂಜಿಲೆಂಡ್​ ನಡುವಿನ ಏಕದಿನ ಸರಣಿಯಲ್ಲಿ ಐಸಿಸಿ ಏಕದಿನ ರ್ಯಾಂಕಿಂಗ್​ನ ಅಗ್ರಸ್ಥಾನಕ್ಕೂ ಪೈಪೋಟಿ ನಡೆಯಲಿದೆ. ಸದ್ಯ ಭಾರತ 115 ಅಂಕದೊಂದಿಗೆ ಅಗ್ರಸ್ಥಾನದಲ್ಲಿದ್ದರೆ, ನ್ಯೂಜಿಲೆಂಡ್​ 109 ಅಂಕದೊಂದಿಗೆ ಅಗ್ರಸ್ಥಾನದಲ್ಲಿದೆ. ಭಾರತ ತಂಡ ನಂ. 1 ಪಟ್ಟ ಕಾಪಾಡಿಕೊಳ್ಳಬೇಕಾದರೆ, 2-3ಕ್ಕಿಂತ ಹೆಚ್ಚು ಅಂತರದಲ್ಲಿ ಸರಣಿ ಸೋಲಬಾರದು. ನ್ಯೂಜಿಲೆಂಡ್​ ತಂಡ 4-1ರಿಂದ ಸರಣಿ ಗೆದ್ದರೆ ವಿಶ್ವ ನಂ. 1 ಪಟ್ಟಕ್ಕೇರುವ ಅವಕಾಶ ಹೊಂದಿದೆ.