

ಐಪಿಎಲ್ 2020ರಲ್ಲಿ ಕೋಲ್ಕತ್ತ ನೈಟ್ ರೈಡರ್ಸ್ ತಂಡ ಹಿಂದೆ ಬಿದ್ದಿದೆ. ಗುರುವಾರ ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್ಕೆ) ವಿರುದ್ಧ ಸೋಲುಂಡ ಬಳಿಕ ಅದರ ಪ್ಲೇ ಆಫ್ ಹಾದಿಯೂ ಕಠಿಣಗೊಂಡಿದೆ.
ಹೀಗಿರುವಾಗ ಕೆಕೆಆರ್ ಮಾಜಿ ಕ್ಯಾಪ್ಟನ್ ಗೌತಮ್ ಗಂಭೀರ್, ತಂಡದ ವೈಫಲ್ಯಕ್ಕೆ ಕಾರಣ ಮಧ್ಯಂತರದಲ್ಲಿ ನಾಯಕತ್ವ ಬದಲಾವಣೆ ಮಾಡಿದ್ದು ಎಂದು ಅಭಿಪ್ರಾಯಪಟ್ಟಿದ್ದಾರೆ. ಐಪಿಎಲ್ ಶುರುವಾದ ಬಳಿಕ ಮಧ್ಯದಲ್ಲಿ ನಾಯಕತ್ವ ಸ್ಥಾನದಿಂದ ದಿನೇಶ್ ಕಾರ್ತೀಕ್ ಅವರನ್ನು ಕೆಳಗಿಳಿಸಿ, ಇಯಾನ್ ಮೋರ್ಗಾನ್ ಅವರಿಗೆ ಜವಾಬ್ದಾರಿ ವಹಿಸಿದ ಮ್ಯಾನೇಜ್ಮೆಂಟ್ನ್ನು ಹಾಗೂ ಸುಲಭವಾಗಿ ನಾಯಕತ್ವ ಬಿಟ್ಟುಕೊಟ್ಟ ದಿನೇಶ್ ಕಾರ್ತೀಕ್ ಅವರನ್ನು ಗಂಭೀರ್ ಟೀಕಿಸಿದ್ದಾರೆ.
ನೀವು ನಾಯಕತ್ವವನ್ನು ಬಿಟ್ಟಿಕೊಟ್ಟಿದ್ದು ನಿಮ್ಮ ಮನಸ್ಥಿತಿಯನ್ನು ತೋರಿಸುತ್ತದೆ. ನಿಮ್ಮ ಬ್ಯಾಟಿಂಗ್ ಮೇಲೆ ಹೆಚ್ಚಿನ ಗಮನ ಹರಿಸಬೇಕು ಎಂಬ ಕಾರಣಕ್ಕೆ ಕ್ಯಾಪ್ಟನ್ಸಿ ಬಿಟ್ಟುಕೊಟ್ಟಿರಿ. ಆದರೆ ನಿಮ್ಮ ಈ ಯೋಜನೆ ಕೆಲಸ ಮಾಡಲಿಲ್ಲ. ನಿಮಗೆ ನೆನಪಿರಬಹುದು..2014ರಲ್ಲಿ ನಾನು ಅದೆಷ್ಟು ಕೆಟ್ಟ ಸಂದರ್ಧ ಎದುರಿಸಿದ್ದೆ ಎಂಬುದು. ಆ ಪಂದ್ಯಾವಳಿಯಲ್ಲಿ ನಾನು ಸತತ ಮೂರು ಬಾರಿ ಶೂನ್ಯಕ್ಕೆ ಹೊರನಡೆದೆ. ಆದರೆ ನಂತರ ನನಗೆ ಮತ್ತೆ ಫಾರ್ಮ್ಗೆ ಮರಳಲು ಸಹಾಯ ಮಾಡಿದ್ದು ನಾಯಕತ್ವ. ಹಾಗೇ ನೀವು ಜವಾಬ್ದಾರಿಯನ್ನು ಬಿಟ್ಟುಕೊಡುವ ಅಗತ್ಯ ಇರಲಿಲ್ಲ. ಅದು ಒಳ್ಳೆಯದಲ್ಲ ಎಂದು ಗಂಭೀರ್ ಸಂದರ್ಶನವೊಂದರಲ್ಲಿ ಮಾತನಾಡುತ್ತ ದಿನೇಶ್ ಕಾರ್ತೀಕ್ಗೆ ಹೇಳಿದ್ದಾರೆ. ಇದನ್ನೂ ಓದಿ: 28ವರ್ಷಗಳ ಬಳಿಕ ಅಯೋಧ್ಯಾ ಶ್ರೀರಾಮನ ಸನ್ನಿಧಿಯಲ್ಲಿ ದೀಪಾವಳಿ; ಸಿಎಂ ಯೋಗಿಯಿಂದ ಆರತಿ
ತಮ್ಮನ್ನೇ ಉದಾಹರಣೆ ಕೊಟ್ಟುಕೊಂಡು ಕಾರ್ತೀಕ್ಗೆ ಸಲಹೆ ನೀಡಿದ ಗಂಭೀರ್, ಅಂದು ನನಗೆ ಬ್ಯಾಟಿಂಗ್ನಲ್ಲಿ ಫಾರ್ಮ್ ಇರಲಿಲ್ಲ. ಆಗ ನಾನು ನನ್ನ ನಾಯಕತ್ವದಲ್ಲಿ ತಂಡವನ್ನು ಹೇಗೆ ಬಲಿಷ್ಠಪಡಿಸಬಹುದು..ಏನೆಲ್ಲ ನಿರ್ಧಾರ ತೆಗೆದುಕೊಳ್ಳಬಹುದು ಎಂಬ ಬಗ್ಗೆ ಗಮನಹರಿಸಿದೆ. ಆದರೆ ನೀವು ನಿಮ್ಮ ನಾಯಕತ್ವವನ್ನೇ ಬಿಟ್ಟು, ಬ್ಯಾಟಿಂಗ್ ಬಗ್ಗೆ ಜಾಸ್ತಿ ಯೋಚಿಸುತ್ತಿದ್ದೀರಿ ಎಂದು ಹೇಳಿದ್ದಾರೆ.
ಹಾಗೇ ದಿನೇಶ್ ಕಾರ್ತೀಕ್ ಹೇಳಿದ ಮಾತ್ರಕ್ಕೆ ಅವರನ್ನು ನಾಯಕತ್ವದಿಂದ ಕೆಳಗಿಳಿಸಿ, ತಂಡದಲ್ಲಿ ಬದಲಾವಣೆ ಮಾಡಿದ ಮ್ಯಾನೇಜ್ಮೆಂಟ್ ಬಗ್ಗೆಯೂ ಅಸಮಾಧಾನ ವ್ಯಕ್ತಪಡಿಸಿದ್ದಾರೆ. (ಏಜೆನ್ಸೀಸ್)