

ನವದೆಹಲಿ: ಚೆನ್ನೈ ಸೂಪರ್ಕಿಂಗ್ಸ್ ತಂಡದಲ್ಲಿ ತಮ್ಮ ಸಹ-ಆಟಗಾರರಾಗಿರುವ ಸುರೇಶ್ ರೈನಾ 'ಕಾಣೆಯಾಗಿದ್ದಾರೆ' ಎಂಬ ರೀತಿಯ ಜಾಹೀರಾತಿನ ಪೋಸ್ಟರ್ ಅನ್ನು ಹಿರಿಯ ಸ್ಪಿನ್ನರ್ ಹರ್ಭಜನ್ ಸಿಂಗ್ ಇತ್ತೀಚೆಗೆ ಇನ್ಸ್ಟಾಗ್ರಾಂನಲ್ಲಿ ಪ್ರಕಟಿಸಿದ್ದರು. ಈ ಮೂಲಕ ಟೀಮ್ ಇಂಡಿಯಾದ ಮಾಜಿ ಸಹ-ಆಟಗಾರನೂ ಆಗಿರುವ ರೈನಾ ಅವರ ಕಾಲೆಳೆದಿದ್ದರು. ಇದಕ್ಕೆ ಪ್ರತಿಯಾಗಿ ಈಗ ಟೀಮ್ ಇಂಡಿಯಾದ ಎಡಗೈ ಆರಂಭಿಕ ಶಿಖರ್ ಧವನ್, ಹರ್ಭಜನ್ ಸಿಂಗ್ಗೆ ತಮಾಷೆಯಾಗಿ ಉತ್ತರ ನೀಡಿದ್ದಾರೆ.
'ಮಾರ್ಚ್ 20ರಿಂದ ಮಿಸ್ ಆಗಿದ್ದಾರೆ' ಎಂಬ ತಲೆಬರಹದ ಪೋಸ್ಟರ್ನೊಂದಿಗೆ ಹರ್ಭಜನ್ ಸಿಂಗ್, 'ಬಹುಶಃ ಈಗ ಅಡುಗೆ ಕಲಿತಿರಬಹುದು. ಆದರೆ ಖಂಡಿತವಾಗಿಯೂ ಟೆಕ್ಟ್ ಮಾಡುವುದನ್ನು ಮರೆತಿದ್ದಾರೆ. ಇವರು ಪತ್ತೆಯಾದಲ್ಲಿ ಮಾಹಿತಿಯನ್ನು ಪರ್ಕ್ಮಿಸ್ಸಿಂಗ್ಪೋಸ್ಟರ್ ಹ್ಯಾಷ್ಟ್ಯಾಗ್ನೊಂದಿಗೆ ಹಂಚಿಕೊಳ್ಳಿ' ಎಂದು ಕೆಳಗಡೆ ಬರೆದಿದ್ದರು. ಜತೆಗೆ, 'ನನ್ನ ಉತ್ತಮ ಗೆಳೆಯ ಸುರೇಶ್ ರೈನಾ ಬಗ್ಗೆ ಕಳೆದ ಕೆಲಸಮಯದಿಂದ ನನಗೆ ಏನೂ ತಿಳಿದುಬಂದಿಲ್ಲ. ಬಹುಶಃ ಅವರು ಅಂತಾರಾಷ್ಟ್ರೀಯ ಕ್ರಿಕೆಟ್ ಪ್ರವೇಶಿಸಿದ 15 ವರ್ಷದ ಸಂಭ್ರಮದಲ್ಲಿ ಬಿಜಿಯಾಗಿರಬಹುದು. ಅವರ ಬಗ್ಗೆ ನಿಮಗೆ ಏನಾದರು ತಿಳಿದರೆ, ನನಗೂ ತಿಳಿಸಿ' ಎಂದು ಬರೆದುಕೊಂಡಿದ್ದರು.
ಹರ್ಭಜನ್ ಪೋಸ್ಟ್ಗೆ ಪ್ರತಿಕ್ರಿಯೆ ನೀಡಿರುವ ಶಿಖರ್ ಧವನ್, 'ವಿವಾಹದ ನಂತರ ಎಲ್ಲರೂ ಕಾಣೆಯಾಗಿಬಿಡುತ್ತಾರೆ. ಪಾಜಿ ಇದನ್ನು ಅರ್ಥಮಾಡಿಕೊಳ್ಳಿ' ಎಂದು ಬರೆದಿದ್ದಾರೆ.