

ನವದೆಹಲಿ: ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಹೇಳಿಕೆಗೆ ದಿಟ್ಟ ಪ್ರತಿಹೇಳಿಕೆ ನೀಡುವ ಮೂಲಕ ದಕ್ಷಿಣ ಆಫ್ರಿಕಾ ಪ್ರವಾಸಕ್ಕೆ ಮುನ್ನ ಟೆಸ್ಟ್ ನಾಯಕ ವಿರಾಟ್ ಕೊಹ್ಲಿ ಕಿಡಿ ಹೊತ್ತಿಸಿದ್ದರು. ಆದರೂ, ಸರಣಿಯ ಮೊದಲ ಟೆಸ್ಟ್ ಪಂದ್ಯದ ವೇಳೆ ಈ ಕಿಡಿ ತಣ್ಣಗಾಗಿತ್ತು. ಇದೀಗ ಮೊದಲ ಟೆಸ್ಟ್ ಮುಗಿದ ಬೆನ್ನಲ್ಲೇ ಆಯ್ಕೆ ಸಮಿತಿ ಅಧ್ಯಕ್ಷ ಚೇತನ್ ಶರ್ಮ ಈ ಕಿಡಿಯನ್ನು ಬೆಂಕಿಯಾಗಿಸಿದ್ದಾರೆ. ‘ವಿರಾಟ್ ಕೊಹ್ಲಿ ಟಿ20 ನಾಯಕತ್ವ ತ್ಯಜಿಸುವುದಾಗಿ ತಿಳಿಸಿದಾಗ, ಭಾರತೀಯ ಕ್ರಿಕೆಟ್ ಹಿತದೃಷ್ಟಿಯಿಂದ ಈ ನಿರ್ಧಾರವನ್ನು ಮರುಪರಿಶೀಲಿಸುವಂತೆ ಎಲ್ಲ ಆಯ್ಕೆಗಾರರು ವಿನಂತಿಸಿದ್ದೆವು. ಇದು ವಿಶ್ವಕಪ್‌ಗೆ ಪರಿಣಾಮ ಬೀರಬಹುದೆಂದು ಕಳವಳ ವ್ಯಕ್ತಪಡಿಸಿದ್ದೆವು. ಟಿ20 ವಿಶ್ವಕಪ್‌ಗೆ ಮುನ್ನ ನಾಯಕತ್ವ ತ್ಯಜಿಸುವ ಬಗ್ಗೆ ಪ್ರಕಟಿಸದಂತೆಯೂ ಕೇಳಿಕೊಂಡಿದ್ದೆವು’ ಎಂದು ಆಯ್ಕೆ ಸಮಿತಿ ಅಧ್ಯಕ್ಷ ಚೇತನ್ ಶರ್ಮ ಶುಕ್ರವಾರ ಹೇಳಿದ್ದಾರೆ.
ಈ ಮೂಲಕ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಪರವಾಗಿ ಮಾತನಾಡಿರುವ ಚೇತನ್ ಶರ್ಮ, ಟಿ20 ನಾಯಕತ್ವ ತ್ಯಜಿಸದಂತೆ ನನಗೆ ಯಾರೂ ಹೇಳಿರಲಿಲ್ಲ ಎಂಬ ಕೊಹ್ಲಿ ಹೇಳಿಕೆ ಸತ್ಯಕ್ಕೆ ದೂರವಾದುದು ಎಂದು ಸಾರಿದ್ದಾರೆ. ಟಿ20 ನಾಯಕತ್ವ ತ್ಯಜಿಸದಂತೆ ಕೊಹ್ಲಿಗೆ ಮನವಿ ಮಾಡಿದ್ದೆವು ಎಂದು ಗಂಗೂಲಿ ಕೂಡ ಹೇಳಿದ್ದರು. ಆದರೆ ಕೊಹ್ಲಿ, ಗಂಗೂಲಿ ಹೇಳಿಕೆಯನ್ನು ತಳ್ಳಿಹಾಕಿದ್ದಲ್ಲದೆ, ಆಯ್ಕೆ ಸಮಿತಿ ಸಭೆಗೆ 90 ನಿಮಿಷ ಮೊದಲಷ್ಟೇ ನನಗೆ ಏಕದಿನ ತಂಡದ ನಾಯಕತ್ವದಿಂದ ಕೆಳಗಿಳಿಯುವ ಮಾಹಿತಿ ಲಭಿಸಿತ್ತು ಎಂದಿದ್ದರು.
ಕೊಹ್ಲಿ ಹೇಳಿಕೆ ನಿಜವೇ ಎಂಬ ಪ್ರಶ್ನೆಗೆ ಉತ್ತರಿಸಿದ ಚೇತನ್ ಶರ್ಮ, ಟಿ20 ವಿಶ್ವಕಪ್‌ಗೆ ತಂಡದ ಆಯ್ಕೆಗೆ ಸಭೆ ಆರಂಭಗೊಂಡಾಗ ಕೊಹ್ಲಿ, ಟಿ20 ತಂಡದ ನಾಯಕತ್ವ ತ್ಯಜಿಸುವ ಸುದ್ದಿಯನ್ನು ತಿಳಿಸಿ ಎಲ್ಲರಿಗೂ ಶಾಕ್ ನೀಡಿದ್ದರು. ಸಭೆಯಲ್ಲಿದ್ದ ಎಲ್ಲರೂ ಆಗ ಪದತ್ಯಾಗ ಮಾಡದಂತೆ ಕೇಳಿಕೊಂಡಿದ್ದರು. ಟಿ20 ವಿಶ್ವಕಪ್ ಬಳಿಕವಷ್ಟೇ ಈ ಬಗ್ಗೆ ಚಿಂತಿಸುವಂತೆ ಹೇಳಿದ್ದೆವು. ಸಭೆಯಲ್ಲಿ ಹಾಜರಿದ್ದ ಬಿಸಿಸಿಐ ಕಾರ್ಯದರ್ಶಿ ಜಯ್ ಷಾ ಮತ್ತು ಸೌರವ್ ಗಂಗೂಲಿ ಸಹಿತ ಎಲ್ಲರೂ ಟಿ20 ನಾಯಕತ್ವದಲ್ಲೂ ಮುಂದುವರಿಯುವಂತೆ ಕೇಳಿಕೊಂಡಿದ್ದೆವು ಎಂದಿದ್ದಾರೆ.
ಕೊಹ್ಲಿ ತಮ್ಮದೇ ಯೋಜನೆ ಹೊಂದಿರುವಾಗ ನಾವು ಅದನ್ನು ಗೌರವಿಸಬೇಕಾಗುತ್ತದೆ. ಅವರು ತಂಡದ ಆಧಾರ ಸ್ತಂಭ ಮತ್ತು ನಾವು ಅವರ ನಿರ್ಧಾರವನ್ನು ಗೌರವಿಸಬೇಕಾಗುತ್ತದೆ. ಆದರೆ ಏಕದಿನ-ಟಿ20 ತಂಡಕ್ಕೆ ಒಬ್ಬನೇ ನಾಯಕನನ್ನು ಹೊಂದುವುದು ನಮ್ಮ ಯೋಜನೆಯಾಗಿತ್ತು ಎಂದು ಚೇತನ್ ಶರ್ಮ ತಿಳಿಸಿದ್ದಾರೆ.