

RCB : ಭಾರತ ಮತ್ತು ಪಾಕಿಸ್ತಾನ ನಡುವಿನ ಉದ್ವಿಗ್ನತೆಯಿಂದ ಸ್ಥಗಿತಗೊಂಡಿದ್ದ 18ನೇ ಆವೃತ್ತಿಯ ಐಪಿಎಲ್, ಒಂಬತ್ತು ದಿನಗಳ ನಂತರ ಪುನಾರಂಭವಾಗಿದೆ. ಆದರೆ, ಮರು ಆರಂಭದ ಮೊದಲ ದಿನವೇ ಅಭಿಮಾನಿಗಳು ಭಾರಿ ನಿರಾಸೆ ಅನುಭವಿಸಿದ್ದಾರೆ. ಶನಿವಾರ (ಮೇ 17) ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕೋಲ್ಕತ ನೈಟ್ ರೈಡರ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವಿನ ಪಂದ್ಯ ನಿರಂತರವಾಗಿ ಸುರಿದ ಮಳೆಯಿಂದಾಗಿ ರದ್ದಾಯಿತು. ಕನಿಷ್ಠ ಟಾಸ್ ಮಾಡಲು ಕೂಡ ಸಾಧ್ಯವಾಗಲಿಲ್ಲ. ಪರಿಣಾಮವಾಗಿ, ಎರಡೂ ತಂಡಗಳಿಗೆ ತಲಾ ಒಂದು ಅಂಕಗಳನ್ನು ನೀಡಲಾಯಿತು.
ಈ ಪಂದ್ಯದಲ್ಲಿ ಗೆಲುವಿನೊಂದಿಗೆ ಪ್ಲೇಆಫ್ ಆಸೆಯನ್ನು ಜೀವಂತವಾಗಿರಿಸಿಕೊಳ್ಳುವ ನಿರೀಕ್ಷೆಯಲ್ಲಿದ್ದ ಕೋಲ್ಕತ ನೈಟ್ ರೈಡರ್ಸ್ ತಂಡಕ್ಕೆ ಮಳೆರಾಯ ಭಾರಿ ನಿರಾಸೆ ಮೂಡಿಸಿದ. ಪಂದ್ಯ ರದ್ದಾಗುವುದರೊಂದಿಗೆ ಕೆಕೆಆರ್ ಅಧಿಕೃತವಾಗಿ ಪ್ಲೇಆಫ್ ರೇಸ್ನಿಂದ ಹೊರಬಿದ್ದಿದೆ. ಮತ್ತೊಂದೆಡೆ, ಕೆಕೆಆರ್ ವಿರುದ್ಧ ಗೆದ್ದು ಅಧಿಕೃತವಾಗಿ ಪ್ಲೇಆಫ್ ಸ್ಥಾನ ಖಚಿತಪಡಿಸಿಕೊಳ್ಳುವ ಭರವಸೆಯಲ್ಲಿದ್ದ ಆರ್‌ಸಿಬಿ ನಿರಾಶೆಗೊಂಡಿತು.
ಆರ್‌ಸಿಬಿ ಇದುವರೆಗೆ 12 ಪಂದ್ಯಗಳನ್ನು ಆಡಿದೆ. ಅದರಲ್ಲಿ 8 ಪಂದ್ಯಗಳಲ್ಲಿ ಗೆಲುವು ಕಂಡಿದ್ದು, ಮೂರು ಪಂದ್ಯಗಳನ್ನು ಸೋತಿದೆ. ಕೆಕೆಆರ್ ವಿರುದ್ಧದ ಪಂದ್ಯ ಮಳೆಯಿಂದಾಗಿ ರದ್ದಾಯಿತು. ಇದರೊಂದಿಗೆ ಆರ್‌ಸಿಬಿ 17 ಅಂಕಗಳನ್ನು ಹೊಂದಿದೆ. ನೆಟ್ ರನ್ ರೇಟ್ +0.482 ಇದೆ. ಪ್ರಸ್ತುತ ಅಂಕಪಟ್ಟಿಯಲ್ಲಿ ಆರ್‌ಸಿಬಿ ಅಗ್ರಸ್ಥಾನದಲ್ಲಿದ್ದು, ಪ್ಲೇಆಫ್‌ಗೆ ಹತ್ತಿರವಾಗಿದ್ದಾರೆ.
ಇಂದು (ಮೇ 18) ಮಧ್ಯಾಹ್ನ ಪಂಜಾಬ್ ಕಿಂಗ್ಸ್ ತಂಡ ರಾಜಸ್ಥಾನ ರಾಯಲ್ಸ್ ತಂಡವನ್ನು ಎದುರಿಸಲಿದೆ. ರಾತ್ರಿ ಡೆಲ್ಲಿ ಕ್ಯಾಪಿಟಲ್ಸ್ ತಂಡ ಗುಜರಾತ್ ಟೈಟಾನ್ಸ್ ತಂಡವನ್ನು ಎದುರಿಸಲಿದೆ. ಇಂದಿನ ಪಂದ್ಯಗಳಲ್ಲಿ ಪಂಜಾಬ್ ಅಥವಾ ಡೆಲ್ಲಿ ಕ್ಯಾಪಿಟಲ್ಸ್ (ಯಾವುದೇ ತಂಡ) ಸೋತರೆ, ಆರ್‌ಸಿಬಿ ಅಧಿಕೃತವಾಗಿ ಪ್ಲೇಆಫ್‌ಗೆ ಪ್ರವೇಶಿಸುತ್ತದೆ. ಇಲ್ಲವಾದಲ್ಲಿ ಆರ್‌ಸಿಬಿ ಪ್ಲೇಆಫ್ ರೇಸ್ನಲ್ಲೇ ಉಳಿಯುತ್ತದೆ.
ಪಂಜಾಬ್ ತಂಡ ಪ್ರಸ್ತುತ ಪಾಯಿಂಟ್ ಪಟ್ಟಿಯಲ್ಲಿ 15 ಅಂಕಗಳೊಂದಿಗೆ ಮೂರನೇ ಸ್ಥಾನದಲ್ಲಿದ್ದರೆ, ದೆಹಲಿ 13 ಅಂಕಗಳೊಂದಿಗೆ ಐದನೇ ಸ್ಥಾನದಲ್ಲಿದೆ. ಪಂಜಾಬ್ ಅಥವಾ ಡೆಲ್ಲಿ ಯಾವುದೇ ತಂಡ ಇಂದು ಸೋತರೆ, ಆರ್‌ಸಿಬಿ ಖಂಡಿತವಾಗಿಯೂ ಟಾಪ್ -4 ರಲ್ಲಿ ಸ್ಥಾನ ಪಡೆಯುತ್ತದೆ. ಹೀಗಾಗಿ ಆರ್‌ಸಿಬಿ ಪಾಲಿಗೆ ಇಂದಿನ ಪಂದ್ಯಗಳು ಭಾರಿ ನಿರ್ಣಾಯಕವಾಗಿವೆ. ಫಲಿತಾಂಶ ಹೇಗಿರಲಿದೆ ಎಂಬುದನ್ನು ಕಾದು ನೋಡಬೇಕಿದೆ. (ಏಜೆನ್ಸೀಸ್)