

ಲಂಡನ್: ರಹೀಮ್ ಸ್ಟರ್ಲಿಂಗ್ (57ನೇ ನಿಮಿಷ) ಸಿಡಿಸಿದ ಏಕೈಕ ಗೋಲಿನ ನೆರವಿನಿಂದ ಇಂಗ್ಲೆಂಡ್ ತಂಡ ಪ್ರತಿಷ್ಠಿತ ಯುರೋಕಪ್ ಫುಟ್ಬಾಲ್ ಟೂರ್ನಿಯಲ್ಲಿ ಗೆಲುವಿನ ಶುಭಾರಂಭ ಕಂಡಿತು. ವೆಂಬ್ಲೆ ಸ್ಟೇಡಿಯಂನಲ್ಲಿ ಭಾನುವಾರ ನಡೆದ ಡಿ ಗುಂಪಿನ ಪಂದ್ಯದಲ್ಲಿ ಇಂಗ್ಲೆಂಡ್ ತಂಡ 1-0 ಗೋಲಿನಿಂದ ಕೊವ್ರೇಷಿಯಾ ತಂಡವನ್ನು ಸೋಲಿಸಿತು. ಯುರೋಕಪ್ ಇತಿಹಾಸದಲ್ಲಿ ಇಂಗ್ಲೆಂಡ್ ತಂಡ ಮೊದಲ ಬಾರಿಗೆ ಮೊದಲ ಪಂದ್ಯದಲ್ಲಿ ಗೆಲುವು ಕಂಡಿತು. ಸುಮಾರು 20 ಸಾವಿರ ಪ್ರೇಕ್ಷಕರ ಸಮ್ಮುಖದಲ್ಲಿ ನಡೆದ ಪಂದ್ಯದಲ್ಲಿ ಇಂಗ್ಲೆಂಡ್ ತಂಡ ಸಂಪೂರ್ಣ ಹಿಡಿತ ಸಾಧಿಸಿತು.
ಆರಂಭಿಕ ನಿಮಿಷಗಳಿಂದಲೂ ಉಭಯ ತಂಡಗಳ ಆಟಗಾರರು ಪರಸ್ಪರ ಪೈಪೋಟಿ ನೀಡಿದರು. ಇದರಿಂದ ಮೊದಲಾರ್ಧದ ಗೋಲುರಹಿತ ಸಮಬಲ ಕಂಡಿತು. ದ್ವೀತಿಯಾರ್ಧದಲ್ಲಿ ಆಕ್ರಮಣಕಾರಿ ನಿರ್ವಹಣೆ ತೋರಿದ ಇಂಗ್ಲೆಂಡ್ ತಂಡ ಎದುರಾಳಿ ತಂಡದ ಮೇಲೆ ಸವಾರಿ ನಡೆಸಿತು. 57ನೇ ನಿಮಿಷದಲ್ಲಿ ರಹೀಮ್ ಸ್ಟರ್ಲಿಂಗ್ ಗೋಲು ದಾಖಲಿಸಿ ತಂಡಕ್ಕೆ ಮುನ್ನಡೆ ತಂದುಕೊಟ್ಟರು. ಪ್ರಮುಖ ಟೂನಿರ್ಯಲ್ಲಿ ಸ್ಟರ್ಲಿಂಗ್ ಸಿಡಿಸಿದ ಚೊಚ್ಚಲ ಗೋಲು ಇದಾಗಿದೆ. ಉಳಿದ ಕೊವ್ರೇಷಿಯಾ ತಂಡ ತಿರುಗೇಟು ನೀಡಲು ಯತ್ನಿಸಿದರೂ ಇಂಗ್ಲೆಂಡ್ನ ರಕ್ಷಣಾತ್ಮಕ ಪಡೆ ಅವಕಾಶ ನೀಡಲಿಲ್ಲ. ಸ್ಟಾರ್ ಹಾಗೂ ಅನುಭವಿ ಆಟಗಾರರಿಂದ ಕೂಡಿರುವ ಇಂಗ್ಲೆಂಡ್ ತಂಡ ತವರಿನಂಗಳದಲ್ಲಿ ಗೆಲುವಿನ ನಗೆ ಬೀರಿತು. ವಿಜೇತ ಇಂಗ್ಲೆಂಡ್ ತಂಡ ಶುಕ್ರವಾರ ಸ್ಕಾಟ್ಲೆಂಡ್ ತಂಡವನ್ನು ಎದುರಿಸಿದರೆ, ಕೊವ್ರೇಷಿಯಾ ತಂಡ ಹಾಗೂ ಜೆಕ್ ಗಣರಾಜ್ಯ ಮುಖಾಮುಖಿಯಾಗಲಿವೆ.