

ಕೋಪೆನ್ಹೆಗನ್(ಡೆನ್ಮಾರ್ಕ್): ಸ್ಟಾರ್ ಆಟಗಾರ ಕ್ರಿಶ್ಚಿಯನ್ ಎರಿಕ್ಸನ್ ಮೈದಾನದಲ್ಲೇ ಕುಸಿದು ಬಿದ್ದ ಆಘಾತದ ನಡುವೆಯೂ ಪ್ರಬಲ ಪೈಪೋಟಿ ತೋರಿದ ಡೆನ್ಮಾರ್ಕ್ ತಂಡ ಯುರೋ ಕಪ್ ಫುಟ್ಬಾಲ್ ಟೂರ್ನಿಯಲ್ಲಿ ನಿರಾಸೆ ಆರಂಭ ಕಂಡಿತು. ಪಾರ್ಕೆನ್ ಸ್ಟೇಡಿಯಂನಲ್ಲಿ ಶನಿವಾರ ನಡೆದ ಬಿ ಗುಂಪಿನ ಪಂದ್ಯದಲ್ಲಿ ಡೆನ್ಮಾರ್ಕ್ ತಂಡ 0-1 ಗೋಲುಗಳಿಂದ ಫಿನ್ಲ್ಯಾಂಡ್ ತಂಡಕ್ಕೆ ಶರಣಾಯಿತು. ಕ್ರಿಶ್ಚಿಯನ್ ಎರಿಕ್ಸನ್ ಮೈದಾನದಲ್ಲೇ ಕುಸಿದು ಬಿದ್ದ ಪರಿಣಾಮ ಪಂದ್ಯ 90 ನಿಮಿಷಗಳ ಕಾಲ ಸ್ಥಗಿತಗೊಂಡಿತು. ಮೊದಲಾರ್ಧದ ಕಡೇ ಹಂತದಲ್ಲಿ ಎರಿಕ್ಸನ್ ಮೈದಾನದಲ್ಲೇ ಕುಸಿದರು. ಇದರಿಂದ ಕೆಲಕಾಲ ಮೈದಾನದಲ್ಲಿ ಆತಂಕದ ವಾತವರಣ ಸೃಷ್ಟಿಯಾಯಿತು. ಜೋಯೆಲ್ ಪೊಜಾನ್ಪಾಲೊ 59ನೇ ನಿಮಿಷದಲ್ಲಿ ಫಿನ್ಲ್ಯಾಂಡ್ ಪರ ಏಕೈಕ ಗೋಲು ದಾಖಲಿಸಿದರೆ, ಗೋಲುಕೀಪರ್ ಲುಕಸ್ ಹಾರ್ಡೆಕ್ಲಿ ಪೆನಾಲ್ಟಿಯೊಂದನ್ನು ರಕ್ಷಿಸುವ ಮೂಲಕ ಜಯ ಫಿನ್ಲ್ಯಾಂಡ್ ತಂಡದಿಂದ ಕೈಜಾರದಂತೆ ನೋಡಿಕೊಂಡರು.
ಬೆಲ್ಜಿಯಂಗೆ ಸುಲಭ ತುತ್ತಾದ ರಷ್ಯಾ
ಸೇಂಟ್ ಪೀಟರ್ಸ್ರ್ಬಗ್ (ರಷ್ಯಾ): ಸ್ಟಾರ್ ಆಟಗಾರ ರೊಮೆಲು ಲುಕಾಕು (10, 88ನೇ ನಿಮಿಷ) ಸಿಡಿಸಿದ ಅವಳಿ ಗೋಲುಗಳ ನೆರವಿನಿಂದ ಬೆಲ್ಜಿಯಂ ತಂಡ ಬಿ ಗುಂಪಿನ ಮತ್ತೊಂದು ಪಂದ್ಯದಲ್ಲಿ ಶುಭಾರಂಭ ಕಂಡಿತು. ಕ್ರೆಸ್ಟೋವ್ಸ್ಕಿ ಸ್ಟೇಡಿಯಂನಲ್ಲಿ ಶನಿವಾರ ನಡೆದ ಪಂದ್ಯದಲ್ಲಿ ಬೆಲ್ಜಿಯಂ ತಂಡ 3-0 ಗೋಲುಗಳಿಂದ ರಷ್ಯಾ ತಂಡವನ್ನು ಮಣಿಸಿತು. ಪಂದ್ಯದ 10ನೇ ನಿಮಿಷದಲ್ಲೇ ಬಾಟಮ್ ಕಾರ್ನರ್ ಮೂಲಕ ಗೋಲುಗಳಿಸಿ ತಂಡಕ್ಕೆ ಆರಂಭದಲ್ಲೇ ಮುನ್ನಡೆ ತಂದುಕೊಟ್ಟರು. ಅತ್ತ ಲುಕಾಕು ಆತ್ಮೀಯ ಸ್ನೇಹಿತ ಹಾಗೂ ಇಟಲಿಯ ಇಂಟರ್ ಮಿಲನ್ ಕ್ಲಬ್ ತಂಡದ ಜತೆಗಾರ ಕ್ರಿಶ್ಚಿಯನ್ ಎರಿಕ್ಸನ್ ಮೈದಾನದಲ್ಲೇ ಕುಸಿದು ಬಿದ್ದ ಸುದ್ದಿ ಕೇಳಿ ಆಘಾತಕ್ಕೊಳಗಾಗಿದ್ದ ಲುಕಾಕು ಮೈದಾನದಲ್ಲಿ ತಮ್ಮ ಎಂದಿನ ಕಾಲ್ಚಳಕ ತೋರಿದರು. ಸುಮಾರು 26 ಸಾವಿರ ಪ್ರೇಕ್ಷಕರ ಸಮ್ಮುಖದಲ್ಲಿ ನಡೆದ ಪಂದ್ಯದಲ್ಲಿ ಬೆಲ್ಜಿಯಂ ಆಟಗಾರರ ಭರ್ಜರಿ ನಿರ್ವಹಣೆ ತೋರಿದರು.