ಭಾರತಕ್ಕೂ ಬಿಸಿ ಮುಟ್ಟಿಸಿದ ಆಂಗ್ಲರ ಬಜ್​ಬಾಲ್​! ಹಾರ್ಟ್ಲಿ ಸ್ಪಿನ್​ ದಾಳಿಗೆ ಹಾರ್ಟ್​ಬ್ರೇಕ್​!

eng web
Published on

ಹೈದರಾಬಾದ್​: ಪದಾರ್ಪಣೆಯ ಪಂದ್ಯದಲ್ಲೇ ಮಿಂಚಿದ ಎಡಗೈ ಸ್ಪಿನ್ನರ್​ ಟಾಮ್​ ಹಾರ್ಟ್ಲಿ (62ಕ್ಕೆ 7) ಮಾರಕ ದಾಳಿಗೆ ತತ್ತರಿಸಿದ ಭಾರತ ತಂಡ ಮೊದಲ ಟೆಸ್ಟ್​ ಪಂದ್ಯದಲ್ಲಿ ಪ್ರವಾಸಿ ಇಂಗ್ಲೆಂಡ್​ ಎದುರು 28 ರನ್​ಗಳಿಂದ ಆಘಾತಕಾರಿ ಸೋಲು ಅನುಭವಿಸಿದೆ. ಸ್ಪರ್ಧಾತ್ಮಕ ಮೊತ್ತದ ಸವಾಲನ್ನು ಯಶಸ್ವಿಯಾಗಿ ಬೆನ್ನಟ್ಟಲು ವಿಫಲವಾದ ಭಾರತ ತಂಡ ದ್ವೀತಿಯ ಇನಿಂಗ್ಸ್​ನಲ್ಲಿ ಪ್ರಮುಖ ಬ್ಯಾಟರ್​ಗಳ ವೈಫಲ್ಯದಿಂದ ದಿಢೀರ್​ ಕುಸಿತ ಕಾಣುವುದರೊಂದಿಗೆ ತವರು ನೆಲದಲ್ಲೇ ಮುಗ್ಗರಿಸಿದೆ. ಇದರೊಂದಿಗೆ ರೋಹಿತ್​ ಶರ್ಮ ಬಳಗ 5 ಪಂದ್ಯಗಳ ಸರಣಿಯಲ್ಲಿ 0-1 ಹಿನ್ನಡೆ ಕಂಡಿದೆ.

ಆರ್​ಜಿಐ ಸ್ಟೇಡಿಯಂನಲ್ಲಿ ಭಾನುವಾರ ಮುಕ್ತಾಯಗೊಂಡ ಕಾದಾಟದಲ್ಲಿ 6 ವಿಕೆಟ್​ಗೆ 316 ರನ್​ಗಳಿಂದ 4ನೇ ದಿನದಾಟ ಮುಂದುವರಿಸಿದ ಇಂಗ್ಲೆಂಡ್​, ಭೋಜನ ವಿರಾಮದ ವೇಳೆಗೆ 102.1 ಓವರ್​ಗಳಲ್ಲಿ 420 ರನ್​ಗಳಿಗೆ 2ನೇ ಇನಿಂಗ್ಸ್​ ಮುಗಿಸಿತು. ಇದರೊಂದಿಗೆ ಗೆಲುವಿಗೆ 231 ರನ್​ ಸವಾಲು ಪಡೆದ ಭಾರತ, ಉತ್ತಮ ಆರಂಭ ಕಂಡರೂ ನಂತರದಲ್ಲಿ ಹಾರ್ಟ್ಲಿ ದಾಳಿಗೆ ತತ್ತರಿಸಿತು. ವಿಕೆಟ್​ ಕೀಪರ್​-ಬ್ಯಾಟರ್​ ಕೆಎಸ್​ ಭರತ್​ (28 ರನ್​, 59 ಎಸೆತ, 3 ಬೌಂಡರಿ) ಮತ್ತು ಆರ್​. ಅಶ್ವಿನ್​ (28 ರನ್​, 84 ಎಸೆತ, 2 ಬೌಂಡರಿ) ಹೋರಾಟದ ನಡುವೆಯೂ ಭಾರತ ತಂಡ, ಅರ್ಧಗಂಟೆಯವರೆಗೆ ವಿಸ್ತರಿಸಲ್ಪಟ್ಟ ದಿನದಾಟದಲ್ಲಿ 69.2 ಓವರ್​ಗಳಲ್ಲಿ 202 ರನ್​ಗಳಿಗೆ ಆಲೌಟ್​ ಆಗಿ ಸೋಲೊಪ್ಪಿಕೊಂಡಿತು.

ದ್ವಿಶತಕವಂಚಿತ ಪೋಪ್​

148 ರನ್​ಗಳಿಂದ ದಿನದಾಟ ಆರಂಭಿಸಿದ ಒಲಿ ಪೋಪ್​, ಬಾಲಂಗೋಚಿಗಳ ಜತೆಗೂಡಿ ಆಂಗ್ಲರ ಮೊತ್ತ ಏರಿಸಿದ ನಡುವೆ ದ್ವಿಶತಕ ತಪ್ಪಿಸಿಕೊಂಡರು. ಬೆಳಗ್ಗೆ ರೆಹನ್​ ಅಹ್ಮದ್​ (28) ಜತೆಗಿನ 7ನೇ ವಿಕೆಟ್​ ಜತೆಯಾಟವನ್ನು 64 ರನ್​ಗಳಿಗೆ ವಿಸ್ತರಿಸಿದ ಪೋಪ್​, 8ನೇ ವಿಕೆಟ್​ಗೆ ಟಾಮ್​ ಹಾರ್ಟ್ಲಿ (34) ಜತೆಗೂಡಿ ಅಮೂಲ್ಯ 80 ರನ್​ ಪೇರಿಸಿದರು. ಈ ಮೂಲಕ ಭಾರತಕ್ಕೆ 200ಕ್ಕೂ ಅಧಿಕ ರನ್​ಗಳ ಸವಾಲು ನಿಗದಿಪಡಿಸುವಲ್ಲಿ ಯಶಸ್ವಿಯಾದರು.

ಭಾರತಕ್ಕೆ ಹಾರ್ಟ್ಲಿ ಶಾಕ್​

ಆರಂಭಿಕರಾದ ಯಶಸ್ವಿ ಜೈಸ್ವಾಲ್​ (15) ಮತ್ತು ನಾಯಕ ರೋಹಿತ್​ ಶರ್ಮ (39) ಮೊದಲ ವಿಕೆಟ್​ಗೆ 42 ರನ್​ ಪೇರಿಸುವ ಮೂಲಕ ಭಾರತದ ಚೇಸಿಂಗ್​ಗೆ ಉತ್ತಮ ಬುನಾದಿಯನ್ನೇ ಹಾಕಿದರು. ಆದರೆ ಇವರಿಬ್ಬರನ್ನೂ 3 ಎಸೆತಗಳ ಅಂತರದಲ್ಲಿ ಔಟ್​ ಮಾಡಿದ ಹಾರ್ಟ್ಲಿ ಭಾರತಕ್ಕೆ ಆಘಾತ ನೀಡಿದರು. ಶುಭಮಾನ್​ ಗಿಲ್​ (0) ಮತ್ತು 5ನೇ ಕ್ರಮಾಂಕಕ್ಕೆ ಬಡ್ತಿ ಪಡೆದು ಆಡಿದ ಅಕ್ಷರ್​ ಪಟೇಲ್​ (17) ಕೂಡ ಹಾಟ್ಲಿಗೆ ವಿಕೆಟ್​ ಒಪ್ಪಿಸಿದರು. ಅರೆಕಾಲಿಕ ಸ್ಪಿನ್ನರ್​ ರೂಟ್​ ಎಸೆತದಲ್ಲಿ ಎಲ್​ಬಿ ಬಲೆಗೆ ಬಿದ್ದ ಕೆಎಲ್​ ರಾಹುಲ್​ (22) ಡಿಆರ್​ಎಸ್​ ಮೊರೆ ಹೋದರೂ ಬಚಾವ್​ ಆಗಲಿಲ್ಲ. ಶ್ರೇಯಸ್​ ಅಯ್ಯರ್​ (13) ವೈಲ್ಯ ಮುಂದುವರಿಸಿದರೆ, ರವೀಂದ್ರ ಜಡೇಜಾ (2) ರನ್​ ಕದಿಯಲು ಯತ್ನಿಸಿ ಸ್ಟೋಕ್ಸ್​ ಡೈರೆಕ್ಟ್​ ಹಿಟ್​ಗೆ ರನೌಟಾದರು.

ಅಶ್ವಿನ್​-ಭರತ್​ ಪ್ರತಿರೋಧ

ಭಾರತ 119 ರನ್​ಗಳಿಗೆ 7 ವಿಕೆಟ್​ ಕಳೆದುಕೊಂಡು ಸೋಲಿನ ಸುಳಿಗೆ ಸಿಲುಕಿದ್ದ ಸಮಯದಲ್ಲಿ ಅಶ್ವಿನ್​-ಭರತ್​ ಜೋಡಿ 8ನೇ ವಿಕೆಟ್​ಗೆ 130 ಎಸೆತಗಳಲ್ಲಿ 57 ರನ್​ ಸೇರಿಸಿ ಗೆಲುವಿನಾಸೆಗೆ ಮರುಜೀವ ತುಂಬಿತು. ಆದರೆ ದಿನದ ನಿಗದಿತ ಓವರ್​ ಮುಗಿದು ಇನ್ನೇನು ಪಂದ್ಯ ಅಂತಿಮ ದಿನದಾಟಕ್ಕೆ ವಿಸ್ತರಿಸುವುದೇ ಎಂಬ ಹಂತದಲ್ಲಿದ್ದಾಗ ಹಾರ್ಟ್ಲಿ ಈ ಜತೆಯಾಟ ಮುರಿದು ಭಾರತೀಯರ ಹಾರ್ಟ್​ಬ್ರೇಕ್​ ಮಾಡಿದರು. ಕೊನೇ ವಿಕೆಟ್​ಗೆ ಬುಮ್ರಾ&ಸಿರಾಜ್​ 25 ರನ್​ ಸೇರಿಸಿ ಸೋಲಿನ ಅಂತರ ತಗ್ಗಿಸಲಷ್ಟೇ ಶಕ್ತರಾದರು.

ಭಾರತಕ್ಕೂ ಬಿಸಿ ಮುಟ್ಟಿಸಿದ ಬಜ್​ಬಾಲ್​!

ಆಂಗ್ಲರ ಕ್ರಾಂತಿಕಾರಿ ಬಜ್​ಬಾಲ್​ ಕಾರ್ಯತಂತ್ರದಿಂದಾಗಿ ಸರಣಿ ಆರಂಭಕ್ಕೆ ಮೊದಲೇ ತೀವ್ರ ಕುತೂಹಲ ಹುಟ್ಟಿಸಿತ್ತು. ಬ್ರೆಂಡನ್​ ಮೆಕ್ಕಲಂ&ಬೆನ್​ ಸ್ಟೋಕ್ಸ್​ ಕೋಚ್​&ಕ್ಯಾಪ್ಟನ್​ ಕಾಂಬಿನೇಷನ್​ನಲ್ಲಿ ತವರು ಮಾತ್ರವಲ್ಲದೆ, ಪಾಕಿಸ್ತಾನ, ನ್ಯೂಜಿಲೆಂಡ್​, ಆಸ್ಟ್ರೆಲಿಯಾದಲ್ಲಿ ಯಶಸ್ಸು ಕಂಡಿದ್ದ ಈ ಆಕ್ರಮಣಕಾರಿ ಆಟ ಭಾರತದಲ್ಲೂ ಫಲಿಸುವುದೇ ಎಂಬ ಕುತೂಹಲ ಹರಡಿತ್ತು ಮತ್ತು ಅದು ಇಲ್ಲಿ ಫಲಿಸದು ಎಂಬ ಆತ್ಮವಿಶ್ವಾಸವೂ ಭಾರತೀಯರದ್ದಾಗಿತ್ತು. ಆದರೆ ಸರಣಿಯ ಮೊದಲ ಟೆಸ್ಟ್​ನಲ್ಲೇ ಭಾರತ ಸೋಲುವುದರೊಂದಿಗೆ ಬಜ್​ಬಾಲ್​ ಬಿಸಿ ಮುಟ್ಟಿಸಿದೆ. ಆಂಗ್ಲರ ಆಟ ಭಾರತದಲ್ಲಿ ಇತರೆಡೆಯಷ್ಟು ಆಕ್ರಮಣಕಾರಿ ಆಗಿರದಿದ್ದರೂ, ವಿಕೆಟ್​ ಬಿದ್ದಾಗಲೂ ಎದೆಗುಂದದೆ ಅವಕಾಶ ಸಿಕ್ಕಾಗಲೆಲ್ಲ ರನ್​ ಗಳಿಸುತ್ತ ಸಾಗುವ ಬಜ್​ಬಾಲ್​ ತಂತ್ರ ಯಶಸ್ಸನ್ನೇ ನೀಡಿದೆ ಎನ್ನಬಹುದು.

*231 ರನ್​ ಚೇಸಿಂಗ್​ ಮಾಡಬಹುದಾಗಿತ್ತು. ಆದರೆ ನಮ್ಮಿಂದ ಸಾಧ್ಯವಾಗಲಿಲ್ಲ. 190 ರನ್​ ಮುನ್ನಡೆಯೊಂದಿಗೆ ನಾವು ಪಂದ್ಯದ ಮೇಲೆ ನಿಯಂತ್ರಣ ಸಾಧಿಸಿದ್ದರೂ, ಪೋಪ್​ ಅದ್ಭುತ ಬ್ಯಾಟಿಂಗ್​ ಪಂದ್ಯವನ್ನು ಕಸಿಯಿತು.

| ರೋಹಿತ್​ ಶರ್ಮ, ಟೀಮ್​ ಇಂಡಿಯಾ ನಾಯಕ

*ಬಾಲಂಗೋಚಿಗಳ ಎದುರು ಅಶ್ವಿನ್​-ಜಡೇಜಾ ಪರದಾಟ

ಜಾನಿ ಬೇರ್​ಸ್ಟೋ, ಬೆನ್​ ಸ್ಟೋಕ್ಸ್​ರಂಥ ಪ್ರಮುಖ ಬ್ಯಾಟರ್​ಗಳಿಗೆ ಕಡಿವಾಣ ಹಾಕಿದ ಅಶ್ವಿನ್​-ಜಡೇಜಾ ಸ್ಪಿನ್​ ಜೋಡಿ ಇಂಗ್ಲೆಂಡ್​ ತಂಡದ ಬಾಲಂಗೋಚಿಗಳಿಗೆ ನಿಯಂತ್ರಣ ಹೇರಲು ಪರದಾಡಿತು. ಪಂದ್ಯದ ಮೊದಲ ದಿನವೇ ಆಂಗ್ಲರಿಗೆ ಆಘಾತ ನೀಡಿದ್ದ ಜೋಡಿ, 4ನೇ ದಿನದಾಟದಲ್ಲಿ ಬಾಲಂಗೋಚಿಗಳಿಗೆ ಹೆಚ್ಚಿನ ಸಮಯ ಕ್ರೀಸ್​ನಲ್ಲಿ ನಿಲ್ಲಲು ಅವಕಾಶ ಕಲ್ಪಿಸಿತು. ಒಲಿ ಪೋಪ್​ ಕೂಡ ಸ್ವೀಪ್​, ರಿವರ್ಸ್​ ಸ್ವೀಪ್​ಗಳ ಮೂಲಕ ಸ್ಪಿನ್ನರ್​ಗಳನ್ನು ಸಮರ್ಥವಾಗಿಯೇ ಎದುರಿಸಿದರು. 163 ರನ್​ಗಳಿಗೆ 5 ವಿಕೆಟ್​ ಕಳೆದುಕೊಂಡಿದ್ದ ಇಂಗ್ಲೆಂಡ್​ ಕೊನೇ 5 ವಿಕೆಟ್​ಗಳ ನೆರವಿನಿಂದ 257 ರನ್​ ಕಲೆಹಾಕಿತು.

*1: ತವರಿನ ಟೆಸ್ಟ್​ ಪಂದ್ಯದಲ್ಲಿ 100ಕ್ಕೂ ಅಧಿಕ ರನ್​ ಮುನ್ನಡೆ ಸಾಧಿಸಿದ ಬಳಿಕ ಭಾರತ ತಂಡ ಸೋಲು ಕಂಡ ಮೊದಲ ದೃಷ್ಟಾಂತ ಇದಾಗಿದೆ.

4: ಒಲಿ ಪೋಪ್​ ಗಳಿಸಿದ 196 ರನ್​ ಭಾರತದಲ್ಲಿನ ಟೆಸ್ಟ್​ ಪಂದ್ಯದ 2ನೇ ಇನಿಂಗ್ಸ್​ನಲ್ಲಿ ವಿದೇಶಿ ಬ್ಯಾಟರ್​ ಗಳಿಸಿದ 4ನೇ ಗರಿಷ್ಠ ರನ್​ ಆಗಿದೆ. ಆಂಡಿ ಫ್ಲವರ್​ (232*), ಬ್ರೆಂಡನ್​ ಮೆಕ್ಕಲಂ (225) ಮತ್ತು ಗ್ಯಾರಿ ಸೋಬರ್ಸ್​ (198) ಮೊದಲ 3 ಸ್ಥಾನದಲ್ಲಿದ್ದಾರೆ.

*14: ಮೆಕ್ಕಲಂ-ಸ್ಟೋಕ್ಸ್​ರ ಬಜ್​ಬಾಲ್​ ಕಾರ್ಯತಂತ್ರದೊಂದಿಗೆ ಇಂಗ್ಲೆಂಡ್​ ಆಡಿದ 19 ಟೆಸ್ಟ್​ಗಳಲ್ಲಿ ಕಂಡ 14ನೇ ಗೆಲುವು ಇದಾಗಿದೆ.

ಡಬ್ಲ್ಯುಟಿಸಿಯಲ್ಲಿ 5ನೇ ಸ್ಥಾನಕ್ಕೆ ಕುಸಿತ

ಭಾರತ ತಂಡ (ಶೇ.43.33) ಸೋಲಿನೊಂದಿಗೆ ಐಸಿಸಿ ವಿಶ್ವ ಟೆಸ್ಟ್​ ಚಾಂಪಿಯನ್​ಷಿಪ್​ (ಡಬ್ಲ್ಯುಟಿಸಿ) 3ನೇ ಆವೃತ್ತಿಯ ಅಂಕಪಟ್ಟಿಯಲ್ಲಿ 2ರಿಂದ 5ನೇ ಸ್ಥಾನಕ್ಕೆ ಕುಸಿದಿದೆ. ಆಸ್ಟ್ರೆಲಿಯಾ (ಶೇ.55) ತಂಡ ವಿಂಡೀಸ್​ ಎದುರು ಸೋಲು ಕಂಡ ನಡುವೆಯೂ ಅಗ್ರಸ್ಥಾನ ಕಾಯ್ದುಕೊಂಡಿದ್ದರೆ, ಇಂಗ್ಲೆಂಡ್​ (ಶೇ.29.16) 8ನೇ ಸ್ಥಾನದಲ್ಲೇ ಉಳಿದುಕೊಂಡಿದೆ.

4: ಭಾರತಕ್ಕೆ 2013ರ ನಂತರ ತವರಿನಲ್ಲಿ ಇದು 4ನೇ ಟೆಸ್ಟ್​ ಸೋಲು ಮತ್ತು ಹೈದರಾಬಾದ್​ನಲ್ಲಿ ಮೊದಲ ಸೋಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net