

ಲಂಡನ್: ಕಳೆದ ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್ ಸರಣಿ ಗೆಲುವಿನಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದ ಇಂಗ್ಲೆಂಡ್ ಆಲ್ರೌಂಡರ್ ಬೆನ್ ಸ್ಟೋಕ್ಸ್, ಪ್ರವಾಸಿ ಪಾಕಿಸ್ತಾನ ವಿರುದ್ಧ ಪ್ರಸಕ್ತ ನಡೆಯುತ್ತಿರುವ ಟೆಸ್ಟ್ ಸರಣಿಯಿಂದ ಹೊರನಡೆದಿದ್ದಾರೆ. ಸರಣಿಯ ಕೊನೆಯ 2 ಪಂದ್ಯಗಳಿಗೆ ಬೆನ್ ಸ್ಟೋಕ್ಸ್ ಅಲಭ್ಯರಾಗಿದ್ದಾರೆ. ಇದಕ್ಕೆ ಅವರು ಕೌಟುಂಬಿಕ ಕಾರಣವನ್ನು ನೀಡಿದ್ದಾರೆ.
ವಿಶ್ವ ನಂ. 1 ಆಲ್ರೌಂಡರ್ ಆಗಿರುವ ಬೆನ್ ಸ್ಟೋಕ್ಸ್ ಇದೀಗ ಕುಟುಂಬದ ಜತೆಗೆ ನ್ಯೂಜಿಲೆಂಡ್ನಲ್ಲಿ ಹೆಚ್ಚಿನ ಸಮಯ ಕಳೆಯಲು ಬಯಸಿದ್ದಾರೆ. ಹೀಗಾಗಿ ಪಾಕಿಸ್ತಾನ ವಿರುದ್ಧ ಮ್ಯಾಂಚೆಸ್ಟರ್ನಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದ ಬೆನ್ನಲ್ಲೇ ಅವರು ನ್ಯೂಜಿಲೆಂಡ್ನತ್ತ ಮುಖ ಮಾಡಿದ್ದಾರೆ. ಪಾಕಿಸ್ತಾನ ವಿರುದ್ಧದ 2ನೇ ಟೆಸ್ಟ್ ಪಂದ್ಯ ಆಗಸ್ಟ್ 13ರಿಂದ ಸೌಥಾಂಪ್ಟನ್ನಲ್ಲಿ ನಡೆಯಲಿದೆ. ಕೊನೆಯ ಟೆಸ್ಟ್ ಆಗಸ್ಟ್ 21ರಿಂದ ಅಲ್ಲೇ ನಡೆಯಲಿದೆ.
2013ರಲ್ಲಿ ಕ್ಲಾರ್ ರಾಟ್ಕ್ಲಿಫ್ರನ್ನು ವಿವಾಹವಾಗಿ ಇಬ್ಬರು ಮಕ್ಕಳನ್ನು ಹೊಂದಿರುವ 29 ವರ್ಷದ ಬೆನ್ ಸ್ಟೋಕ್ಸ್ ಅವರು ಈಗ ಕುಟುಂಬದೊಂದಿಗೆ ಹೆಚ್ಚಿನ ಸಮಯ ಕಳೆಯಲು ಬಯಸಿದ್ದಾರೆ. ಮಾಜಿ ರಗ್ಬಿ ಆಟಗಾರರಾಗಿರುವ ಅವರ ತಂದೆ ಗೆರಾರ್ಡ್ ಸ್ಟೋಕ್ಸ್, ಈಗ ಅನಾರೋಗ್ಯದಿಂದ ಬಳಲುತ್ತಿದ್ದಾರೆ ಎನ್ನಲಾಗಿದೆ. ಹೀಗಾಗಿ ಸ್ಟೋಕ್ಸ್ ಅಂತಾರಾಷ್ಟ್ರೀಯ ಕ್ರಿಕೆಟ್ ಆಡುವ ಸಲುವಾಗಿ ಜೈವಿಕ-ಸುರಕ್ಷಾ ವಾತಾವರಣದಲ್ಲಿ ಬಂಧಿಯಾಗಿರಲು ಬಯಸಿಲ್ಲ. ತಂದೆ-ತಾಯಿಯನ್ನು ಕರೆದುಕೊಂಡು ಮೂಲದೇಶ ನ್ಯೂಜಿಲೆಂಡ್ಗೆ ತೆರಳಿ ಸಮಯ ಕಳೆಯುವತ್ತ ಗಮನಹರಿಸಿದ್ದಾರೆ. ನ್ಯೂಜಿಲೆಂಡ್ನಲ್ಲಿ ಕರೊನಾ ವೈರಸ್ ಸಂಪೂರ್ಣ ನಿಯಂತ್ರಣದಲ್ಲಿರುವುದು ಕೂಡ ಅವರಿಗೆ ಅನುಕೂಲಕರವೆನಿಸಿದೆ. ಬೆನ್ ಸ್ಟೋಕ್ಸ್ ತಂದೆಯ ಜತೆಗೆ ಸದೃಢ ಬಾಂಧವ್ಯ ಹೊಂದಿದ್ದು, ಇಳಿ ವಯಸ್ಸಿನಲ್ಲಿ ಅವರಿಗೆ ಹೆಚ್ಚಿನ ಸಮಯ ನೀಡಲು ಬಯಸಿದ್ದಾರೆ ಎನ್ನಲಾಗಿದೆ. ಮುಂಬರುವ ಐಪಿಎಲ್ ಟೂರ್ನಿಯಲ್ಲಿ ರಾಜಸ್ಥಾನ ರಾಯಲ್ಸ್ ಪರ ಕಣಕ್ಕಿಳಿಯಬೇಕಿರುವ ಅವರು ಟೂರ್ನಿಗೆ ಲಭ್ಯರಿದ್ದಾರೆಯೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.