ಇಂಗ್ಲೆಂಡ್ ಸ್ಪಿನ್ ಜಾಲಕ್ಕೆ ಜಾರಿಬಿದ್ದ ಹಾಲಿ ಚಾಂಪಿಯನ್ ವೆಸ್ಟ್ ಇಂಡೀಸ್

england and west indies for web
Published on

ದುಬೈ: ಸ್ಪಿನ್ನರ್‌ಗಳಾದ ಆದಿಲ್ ರಶೀದ್ (2ಕ್ಕೆ 4) ಹಾಗೂ ಮೊಯಿನ್ ಅಲಿ (17ಕ್ಕೆ 2) ಜೋಡಿಯ ಮಾರಕ ದಾಳಿಗೆ ನಲುಗಿದ ಹಾಲಿ ಚಾಂಪಿಯನ್ ವೆಸ್ಟ್ ಇಂಡೀಸ್ ತಂಡ ಟಿ20 ವಿಶ್ವಕಪ್ ಟೂರ್ನಿಯ ತನ್ನ ಮೊದಲ ಹಣಾಹಣಿಯಲ್ಲಿ ಹಾಲಿ ರನ್ನರ್‌ಅಪ್ ಇಂಗ್ಲೆಂಡ್ ಎದುರು 6 ವಿಕೆಟ್‌ಗಳಿಂದ ಶರಣಾಯಿತು. 2016ರ ಫೈನಲ್‌ನ ಕಡೇ ಓವರ್‌ನಲ್ಲಿ 19 ರನ್ ಬಿಟ್ಟುಕೊಟ್ಟು ಮುಖಭಂಗಕ್ಕೀಡಾಗಿದ್ದ ಆಂಗ್ಲರ ಪಡೆ, 5 ವರ್ಷಗಳ ಬಳಿಕ ವಿಂಡೀಸ್ ತಂಡಕ್ಕೆ ಆಘಾತ ನೀಡುವ ಮೂಲಕ ಸೇಡು ತೀರಿಸಿಕೊಂಡಿತು.

ದುಬೈ ಅಂತಾರಾಷ್ಟ್ರೀಯ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಜಯಿಸಿದ ಇಂಗ್ಲೆಂಡ್ ಇವೊಯಿನ್ ಮಾರ್ಗನ್, ವಿಂಡೀಸ್ ತಂಡವನ್ನು ಬ್ಯಾಟಿಂಗ್ ಆಹ್ವಾನಿಸಿದರು. ಆಂಗ್ಲರ ಸ್ಪಿನ್ ಜಾಲಕ್ಕೆ ಮಂಕಾದ ವಿಂಡೀಸ್ ತಂಡ 14.2 ಓವರ್‌ಗಳಲ್ಲಿ 55 ರನ್‌ಗಳಿಗೆ ಸರ್ವಪತನ ಕಂಡಿತು. ಟಿ20 ವಿಶ್ವಕಪ್‌ನಲ್ಲೇ ತನ್ನ ಕನಿಷ್ಠ ಮೊತ್ತ ಪೇರಿಸಿತು. ಕ್ರಿಸ್ ಗೇಲ್ (13) ಹೊರತುಪಡಿಸಿ ವಿಂಡೀಸ್ ಉಳಿದ 10 ಬ್ಯಾಟರ್‌ಗಳು ಕನಿಷ್ಠ ಒಂದಂಕಿ ಮೊತ್ತ ಮುಟ್ಟಲು ವಿಫಲರಾದರು. ಬಳಿಕ ಈ ಅಲ್ಪ ಮೊತ್ತದ ಗುರಿ ಬೆನ್ನಟ್ಟಿದ ಇಂಗ್ಲೆಂಡ್ 8.2 ಓವರ್‌ಗಳಲ್ಲಿ 4 ವಿಕೆಟ್‌ಗೆ 56 ರನ್‌ಗಳಿಸಿ ಜಯದ ನಗೆ ಬೀರಿತು. ಜೋಸ್ ಬಟ್ಲರ್ (24*ರನ್, 22 ಎಸೆತ, 3 ಬೌಂಡರಿ) ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಿದರು.

ವೆಸ್ಟ್ ಇಂಡೀಸ್: 14.2 ಓವರ್‌ಗಳಲ್ಲಿ 55 (ಕ್ರಿಸ್ ಗೇಲ್ 13, ಆದಿಲ್ ರಶೀದ್ 2ಕ್ಕೆ 4, ತೈಮಲ್ ಮಿಲ್ಸ್ 17ಕ್ಕೆ 2, ಮೊಯಿನ್ ಅಲಿ 17ಕ್ಕೆ 2), ಇಂಗ್ಲೆಂಡ್: 8.2 ಓವರ್‌ಗಳಲ್ಲಿ 4 ವಿಕೆಟ್‌ಗೆ 56 (ಜೋಸ್ ಬಟ್ಲರ್ 24*, ಜೇಸನ್ ರಾಯ್ 11, ಅಕೀಲ್ ಹುಸೇನ್ 24ಕ್ಕೆ 2, ರವಿ ರಾಂಪಾಲ್ 14ಕ್ಕೆ 1).

* 2ಕ್ಕೆ 4: ಆದಿಲ್ ರಶೀದ್, ಟಿ20 ವಿಶ್ವಕಪ್‌ನಲ್ಲಿ ಅತ್ಯುತ್ತಮ ನಿರ್ವಹಣೆ ತೋರಿದ ಇಂಗ್ಲೆಂಡ್ ಸ್ಪಿನ್ನರ್ ಎನಿಸಿಕೊಂಡರು. ಇದಕ್ಕೂ ಮೊದಲು ಕ್ರಿಸ್ ಜೋರ್ಡನ್ (28ಕ್ಕೆ 4) ಈ ಶ್ರೇಯಕ್ಕೆ ಪಾತ್ರರಾಗಿದ್ದರು.

* 55: ಟಿ20 ವಿಶ್ವಕಪ್‌ನಲ್ಲಿ ದಾಖಲಾದ 3ನೇ ಕಡಿಮೆ ಮೊತ್ತ ಇದಾಗಿದೆ. ಮೊದಲ ಎರಡು ಕಡಿಮೆ ಮೊತ್ತ (39, 44) ನೆದರ್ಲೆಂಡ್ ದಾಖಲಿಸಿದೆ.

* 2: ಟಿ20 ಕ್ರಿಕೆಟ್‌ನಲ್ಲಿ ವಿಂಡೀಸ್ ತಂಡ ದಾಖಲಿಸಿದ 2ನೇ ಕನಿಷ್ಠ ಮೊತ್ತ ಇದಾಗಿದೆ. 2019ರಲ್ಲಿ ಇಂಗ್ಲೆಂಡ್ ಎದುರೇ 45 ರನ್ ದಾಖಲಿಸಿದ್ದು, ಕನಿಷ್ಠ ಮೊತ್ತವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net