VIDEO: ಇಂಗ್ಲೆಂಡ್ ತಂಡಕ್ಕೆ 5 ವಿಕೆಟ್ ಜಯ, ಸರಣಿಯಲ್ಲಿ 1-0 ಯಿಂದ ಮುನ್ನಡೆ

morgan and malan for web
Published on

ಮ್ಯಾಂಚೆಸ್ಟರ್: ನಾಯಕ ಏವೊಯಿನ್ ಮಾರ್ಗನ್ (66 ರನ್, 33 ಎಸೆತ, 6 ಬೌಂಡರಿ, 4 ಸಿಕ್ಸರ್) ಹಾಗೂ ಡೇವಿಡ್ ಮಲನ್ (54*ರನ್, 36 ಎಸೆತ, 6 ಬೌಂಡರಿ, 1 ಸಿಕ್ಸರ್) ಸ್ಫೋಟಕ ಬ್ಯಾಟಿಂಗ್ ಫಲವಾಗಿ ಆತಿಥೇಯ ಇಂಗ್ಲೆಂಡ್ ತಂಡ 2ನೇ ಟಿ20 ಪಂದ್ಯದಲ್ಲಿ ಪ್ರವಾಸಿ ಪಾಕಿಸ್ತಾನ ತಂಡವನ್ನು 5 ವಿಕೆಟ್‌ಗಳಿಂದ ಮಣಿಸಿತು. ಓಲ್ಡ್ ಟ್ರಾಫೋರ್ಡ್​ ಮೈದಾನದಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ತಾನ ತಂಡ, ಅನುಭವಿ ಬ್ಯಾಟ್ಸ್‌ಮನ್ ಮೊಹಮದ್ ಹಫೀಜ್ (69ರನ್, 36ಎಸೆತ, 5ಬೌಂಡರಿ, 4ಸಿಕ್ಸರ್) ಹಾಗೂ ನಾಯಕ ಬಾಬರ್ ಅಜಮ್ (56ರನ್, 44ಎಸೆತ, 7 ಬೌಂಡರಿ) ಜೋಡಿ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ 4 ವಿಕೆಟ್‌ಗೆ 195 ರನ್‌ಗಳಿಸಿತು. ಪ್ರತಿಯಾಗಿ ಈ ಬೃಹತ್ ಮೊತ್ತ ಬೆನ್ನಟ್ಟಿದ ಆತಿಥೇಯ ಇಂಗ್ಲೆಂಡ್ ತಂಡ 19.1 ಓವರ್‌ಗಳಲ್ಲಿ 5 ವಿಕೆಟ್‌ಗೆ 199 ರನ್‌ಗಳಿಸಿ ಗೆಲುವಿನ ದಡ ಸೇರಿತು. ಈ ಗೆಲುವಿನಿಂದ ಇಂಗ್ಲೆಂಡ್ ತಂಡ 3 ಪಂದ್ಯಗಳ ಚುಟುಕು ಕ್ರಿಕೆಟ್ ಸರಣಿಯಲ್ಲಿ 1-0 ಯಿಂದ ಮುನ್ನಡೆ ಸಾಧಿಸಿತು. ಮೊದಲ ಟಿ20 ಪಂದ್ಯ ಮಳೆಯಿಂದಾಗಿ ರದ್ದುಗೊಂಡಿತ್ತು.

ಮಾರ್ಗನ್ ಅಬ್ಬರದ ಬ್ಯಾಟಿಂಗ್:

ಪಾಕಿಸ್ತಾನದ ನೀಡಿದ ಬೃಹತ್ ಮೊತ್ತ ಬೆನ್ನಟ್ಟಿದ ಇಂಗ್ಲೆಂಡ್ ತಂಡಕ್ಕೆ ಆರಂಭದಲ್ಲೇ ಟಾಮ್ ಬ್ಯಾನ್ ಟನ್ (20ರನ್, 16 ಎಸೆತ, 1 ಬೌಂಡರಿ) ಹಾಗೂ ಜಾನಿ ಬೇರ್‌ಸ್ಟೋ ಮೊದಲ ವಿಕೆಟ್‌ಗೆ 66 ರನ್ ಪೇರಿಸಿ ಉತ್ತಮ ಆರಂಭ ನೀಡಿತು. ಈ ಜೋಡಿಗೆ ಒಂದೇ ಸ್ಪಿನ್ನರ್ ಶಾದಾಬ್ ಖಾನ್ ಆಘಾತ ನೀಡಿದರು. ಇದರಿಂದ ಇಂಗ್ಲೆಂಡ್ ತಂಡ 66 ರನ್‌ಗಳಿಗೆ 2 ವಿಕೆಟ್‌ಕಳೆದುಕೊಂಡಿತು. ಈ ವೇಳೆಯಾದ ನಾಯಕ ಏವೊಯಿನ್ ಮಾರ್ಗನ್ ಹಾಗೂ ಡೇವಿಡ್ ಮಲನ್ ಜೋಡಿ 3ನೇ ವಿಕೆಟ್‌ಗೆ 112 ಪೇರಿಸಿ ತಂಡದ ಗೆಲುವಿನ ದಡ ಸೇರಿಸಿತು. ಪಾಕಿಸ್ತಾನ ಪರ ಶಾದಾಬ್ ಖಾನ್ 3 ವಿಕೆಟ್ ಕಬಳಿಸಿದರು.

ಹಫೀಜ್ ಬಿರುಸಿನ ಬ್ಯಾಟಿಂಗ್

ಇದಕ್ಕೂ ಮೊದಲು ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ತಾನ ತಂಡಕ್ಕೆ ನಾಯಕ ಬಾಬರ್ ಅಜಮ್ ಹಾಗೂ ಫಖರ್ ಜಮಾನ್ ಜೋಡಿ ಮೊದಲ ವಿಕೆಟ್‌ಗೆ ಎದುರಿಸಿದ 51 ಎಸೆತಗಳಲ್ಲಿ 72 ರನ್ ಜತೆಯಾಟವಾಡಿ ಭರ್ಜರಿ ಆರಂಭ ನೀಡಿತು. ಬಳಿಕ ಕ್ರೀಸ್‌ಗಿಳಿದ ಮೊಹಮದ್ ಹಫೀಜ್ ತಂಡದ ಮೊತ್ತ ಹಿಗ್ಗಿಸುವಲ್ಲಿ ಪ್ರಮುಖ ಪಾತ್ರವಹಿಸಿದರು. ಬಾಬರ್ ಜತೆಗೂಡಿ 2ನೇ ವಿಕೆಟ್‌ಗೆ 40 ರನ್ ಜತೆಯಾಟವಾಡಿದರೆ, ಶೋಯಿಬ್ ಮಲಿಕ್ (14) 3ನೇ ವಿಕೆಟ್‌ಗೆ 50 ರನ್ ಕಲೆಹಾಕಿದರು. ಅಂತಿಮ ಓವರ್‌ನಲ್ಲಿ ಕರ‌್ರನ್‌ಗೆ ಹಫೀಜ್ ವಿಕೆಟ್ ಒಪ್ಪಿಸಿದರು. ಚುಟುಕು ಕ್ರಿಕೆಟ್ ಸರಣಿಗೂ ಮುನ್ನ ನಡೆದ 3 ಪಂದ್ಯಗಳ ಟೆಸ್ಟ್ ಸರಣಿಯನ್ನು ಇಂಗ್ಲೆಂಡ್ 1-0 ಯಿಂದ ವಶಪಡಿಸಿಕೊಂಡಿತ್ತು.

ಪಾಕಿಸ್ತಾನ: 4 ವಿಕೆಟ್‌ಗೆ 195 (ಬಾಬರ್ ಅಜಮ್ 56, ಮೊಹಮದ್ ಹಫೀಜ್ 69, ಫಖರ್ ಜಮಾನ್ 36, ಆದಿಲ್ ರಶೀದ್ 32ಕ್ಕೆ 2, ಜೋರ್ಡಾನ್ 41ಕ್ಕೆ 1, ಟಾಮ್ ಕರ‌್ರನ್ 46ಕ್ಕೆ 1). ಇಂಗ್ಲೆಂಡ್ : 19.1 ಓವರ್‌ಗಳಲ್ಲಿ 5 ವಿಕೆಟ್‌ಗೆ 199 (ಬೇರ್‌ಸ್ಟೋ 44, ಮಾರ್ಗನ್ 66, ಮಲನ್ 54*, ಶಾದಾಬ್ 34ಕ್ಕೆ 3). 

ಮೂರನೇ ಟಿ20: ಮಂಗಳವಾರ (ಸೆ.1)

ಆರಂಭ: ರಾತ್ರಿ 10.30ಕ್ಕೆ (ಭಾರತೀಯ ಕಾಲಮಾನ)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net