

ಮ್ಯಾಂಚೆಸ್ಟರ್: ಕ್ರಿಕೆಟ್ ಪುನರಾರಂಭದ ಬಳಿಕ ಮೊದಲ ಟೆಸ್ಟ್‌ನಲ್ಲಿ ಗೆದ್ದು ಬೀಗಿದ್ದ ಪ್ರವಾಸಿ ವೆಸ್ಟ್ ಇಂಡೀಸ್ ತಂಡ ಇದೀಗ ಆತಿಥೇಯ ಇಂಗ್ಲೆಂಡ್ ತಂಡದ ತಿರುಗೇಟಿಗೆ ತತ್ತರಿಸಿ ಸರಣಿ ಸೋಲಿನ ಅಪಾಯದಲ್ಲಿ ಬಂದು ನಿಂತಿದೆ. ನಿರ್ಣಾಯಕ 3ನೇ ಟೆಸ್ಟ್ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ತಂಡ ವೇಗಿ ಸ್ಟುವರ್ಟ್ ಬ್ರಾಡ್ (31ಕ್ಕೆ 6 ಮತ್ತು 8ಕ್ಕೆ 2) ದಾಳಿಗೆ ನಲುಗಿ ಸೋಲಿನ ಸುಳಿಯಲ್ಲಿ ಸಿಲುಕಿದೆ.
ಓಲ್ಡ್ ಟ್ರಾಫೋರ್ಡ್ ಮೈದಾನದಲ್ಲಿ ಭಾನುವಾರ 6 ವಿಕೆಟ್‌ಗೆ 137 ರನ್‌ಗಳಿಂದ 3ನೇ ದಿನದಾಟ ಆರಂಭಿಸಿದ ವೆಸ್ಟ್ ಇಂಡೀಸ್ ತಂಡ, ಭೋಜನ ವಿರಾಮಕ್ಕೂ ಮೊದಲೇ 197 ರನ್‌ಗೆ ಸರ್ವಪತನ ಕಂಡಿತು. ಇದರಿಂದ ಮೊದಲ ಇನಿಂಗ್ಸ್‌ನಲ್ಲಿ 172 ರನ್ ಮುನ್ನಡೆ ಸಂಪಾದಿಸಿದ ಇಂಗ್ಲೆಂಡ್ ತಂಡ 2ನೇ ಇನಿಂಗ್ಸ್‌ನಲ್ಲಿ ತನ್ನ ಹಿಡಿತವನ್ನು ಮತ್ತಷ್ಟು ಬಲಪಡಿಸಿತು. ಆರಂಭಿಕರಾದ ರೋರಿ ಬರ್ನ್ಸ್ (90), ಡೊಮಿನಿಕ್ ಸಿಬ್ಲೆ (56) ಮತ್ತು ನಾಯಕ ಜೋ ರೂಟ್ (68*) ಅರ್ಧಶತಕದ ನೆರವಿನಿಂದ ಇಂಗ್ಲೆಂಡ್ 2 ವಿಕೆಟ್‌ಗೆ 226 ರನ್ ಗಳಿಸಿ ಡಿಕ್ಲೇರ್ ಮಾಡಿಕೊಂಡಿತು. ಇದರಿಂದ 399 ರನ್ ಗುರಿ ಪಡೆದ ವಿಂಡೀಸ್‌ಗೆ ಮತ್ತೆ ಬ್ರಾಡ್ ಆಘಾತ ನೀಡಿದರು. ದಿನದಂತ್ಯಕ್ಕೆ 2 ವಿಕೆಟ್‌ಗೆ 10 ರನ್ ಗಳಿಸಿ ಸಂಕಷ್ಟದಲ್ಲಿರುವ ವಿಂಡೀಸ್, ಗೆಲುವಿನಿಂದ ಇನ್ನೂ 389 ರನ್ ದೂರದಲ್ಲಿದೆ. ಬ್ರಾಥ್‌ವೇಟ್ (2), ಶೈ ಹೋಪ್ (4) ಕ್ರೀಸ್‌ನಲ್ಲಿದ್ದಾರೆ.
ಇದನ್ನೂ ಓದಿ: PHOTO | ಕ್ರಿಕೆಟ್ ಪಂದ್ಯಕ್ಕೆ ಮತ್ತೆ ಪ್ರೇಕ್ಷಕರ ಹಾಜರಿ
ಫಾಲೋಆನ್ ತಪ್ಪಿಸಿದ ಹೋಲ್ಡರ್-ಡೋವ್ರಿಚ್
ನಾಯಕ ಜೇಸನ್ ಹೋಲ್ಡರ್ (46) ಮತ್ತು ಶೇನ್ ಡೋವ್ರಿಚ್ (37) 7ನೇ ವಿಕೆಟ್‌ಗೆ 68 ರನ್ ಜತೆಯಾಡುವ ಮೂಲಕ ವಿಂಡೀಸ್ ತಂಡವನ್ನು ಾಲೋಆನ್‌ನಿಂದ ಪಾರು ಮಾಡಿದರು. ಕ್ರಮವಾಗಿ 24 ಮತ್ತು 10 ರನ್‌ನಿಂದ ದಿನದಾಟ ಮುಂದುವರಿಸಿದ ಹೋಲ್ಡರ್ ಮತ್ತು ಡೋವ್ರಿಚ್ ಬೆಳಗ್ಗೆ ಸುಮಾರು 11 ಓವರ್‌ಗಳ ಕಾಲ ಇಂಗ್ಲೆಂಡ್ ಬೌಲರ್‌ಗಳನ್ನು ಕಾಡಿದರು. ಆದರೆ ಈ ಜೋಡಿ ಬೇರ್ಪಟ್ಟ ಬಳಿಕ ವಿಂಡೀಸ್ ಇನಿಂಗ್ಸ್‌ಗೆ ತೆರೆ ಎಳೆಯುವುದು ಆಂಗ್ಲರಿಗೆ ಕಷ್ಟವಾಗಲಿಲ್ಲ. 19 ರನ್ ಅಂತರದಲ್ಲಿ ವಿಂಡೀಸ್ ತಂಡದ ಕೊನೆಯ 4 ವಿಕೆಟ್‌ಗಳನ್ನೂ ಸ್ಟುವರ್ಟ್ ಬ್ರಾಡ್ ಕಬಳಿಸಿದರು.
ಇಂಗ್ಲೆಂಡ್: 369 ಮತ್ತು 58 ಓವರ್‌ಗಳಲ್ಲಿ 2 ವಿಕೆಟ್‌ಗೆ 226 ಡಿಕ್ಲೇರ್ (ಬರ್ನ್ಸ್ 90, ಸಿಬ್ಲೆ 56, ರೂಟ್ 68*, ಹೋಲ್ಡರ್ 24ಕ್ಕೆ 1), ವೆಸ್ಟ್ ಇಂಡೀಸ್: 65 ಓವರ್‌ಗಳಲ್ಲಿ 197 (ಹೋಲ್ಡರ್ 46, ಡೋವ್ರಿಚ್ 37, ಬ್ರಾಡ್ 31ಕ್ಕೆ 6) ಮತ್ತು 6 ಓವರ್‌ಗಳಲ್ಲಿ 2 ವಿಕೆಟ್‌ಗೆ 10 (ಹೋಪ್ 4*, ಬ್ರಾಡ್ 8ಕ್ಕೆ 2).
ಪ್ರಾಮುಖ್ಯತೆ ಸಾರಿದ ಬ್ರಾಡ್
ಸರಣಿಯ ಮೊದಲ ಟೆಸ್ಟ್‌ಗೆ ಕಡೆಗಣಿಸಲ್ಪಟ್ಟಿದ್ದ ಸ್ಟುವರ್ಟ್ ಬ್ರಾಡ್ ಸೌಥಾಂಪ್ಟನ್‌ನಲ್ಲಿ ಟಿವಿ ಸಂದರ್ಶನವೊಂದರ ವೇಳೆ ಈ ಬಗ್ಗೆ ಅಸಮಾಧಾನವನ್ನೂ ವ್ಯಕ್ತಪಡಿಸಿದ್ದರು. ಇದೀಗ 2, 3ನೇ ಟೆಸ್ಟ್‌ನಲ್ಲಿ ಅವರು ತಮ್ಮ ಪ್ರಾಮುಖ್ಯತೆಯನ್ನೂ ಇಂಗ್ಲೆಂಡ್ ಟೀಮ್ ಮ್ಯಾನೇಜ್‌ಮೆಂಟ್‌ಗೆ ತಿಳಿಸಿದ್ದಾರೆ. 2ನೇ ಟೆಸ್ಟ್‌ನ ಎರಡೂ ಇನಿಂಗ್ಸ್‌ನಲ್ಲಿ ತಲಾ 3 ಪ್ರಮುಖ ವಿಕೆಟ್ ಕಬಳಿಸಿದ್ದ ಬ್ರಾಡ್, ಅಂತಿಮ ಟೆಸ್ಟ್‌ನ ಮೊದಲ ಇನಿಂಗ್ಸ್ ನಲ್ಲಿ 45 ಎಸೆತಗಳಲ್ಲಿ 62 ರನ್ ಬಾರಿಸಿ ಇಂಗ್ಲೆಂಡ್ 350 ಪ್ಲಸ್ ಮೊತ್ತ ಪೇರಿಸಲು ನೆರವಾಗಿದ್ದರು. ಇದೀಗ 6 ವಿಕೆಟ್ ಗೊಂಚಲು ಪಡೆದು ಬೌಲಿಂಗ್‌ನಲ್ಲೂ ಪರಿಣಾಮಕಾರಿ ಎನಿಸಿದ್ದಾರೆ. ಸ್ಟುವರ್ಟ್ ಬ್ರಾಡ್ ಟೆಸ್ಟ್ ಕ್ರಿಕೆಟ್‌ನಲ್ಲಿ 18ನೇ ಬಾರಿ 5 ವಿಕೆಟ್ ಗೊಂಚಲು ಪಡೆದರು. ಟೆಸ್ಟ್ ಕ್ರಿಕೆಟ್‌ನಲ್ಲಿ ಅವರು ಈಗ 500 ವಿಕೆಟ್‌ನಿಂದ ಕೇವಲ 1 ವಿಕೆಟ್ ದೂರವಿದ್ದಾರೆ.