ಇಂಗ್ಲೆಂಡ್​, ವಿಂಡೀಸ್​ಗೆ ಕ್ರಿಕೆಟ್​ನಲ್ಲಿ ಒಲಿಂಪಿಕ್ಸ್​ ಅರ್ಹತೆ ಇಕ್ಕಟ್ಟು! ಹೀಗಿದೆ ಕಾರಣ...

web oly 2028
Published on

ನವದೆಹಲಿ: ಒಲಿಂಪಿಕ್ಸ್​ಗೆ ಬರೋಬ್ಬರಿ 128 ವರ್ಷಗಳ ಬಳಿಕ ಕ್ರಿಕೆಟ್​ ಸ್ಪರ್ಧೆ ಸೇರ್ಪಡೆಯಾಗಿದ್ದು, 2028ರ ಲಾಸ್​ ಏಂಜಲಿಸ್​ ಒಲಿಂಪಿಕ್ಸ್​ನಲ್ಲಿ ಟಿ20 ಪ್ರಕಾರದಲ್ಲಿ ಪದಕಕ್ಕಾಗಿ ಪೈಪೋಟಿ ನಡೆಯಲಿದೆ. ಆದರೆ ಇದು ಇಂಗ್ಲೆಂಡ್​ ಮತ್ತು ವೆಸ್ಟ್​ ಇಂಡೀಸ್​ ತಂಡಗಳನ್ನು ಇಕ್ಕಟ್ಟಿನಲ್ಲಿ ಸಿಲುಕಿಸಿದ್ದು, ಕ್ರಮವಾಗಿ ಒಗ್ಗೂಡುವ ಮತ್ತು ಬೇರ್ಪಡುವ ಸವಾಲನ್ನು ಹುಟ್ಟುಹಾಕಿದೆ.

ಒಲಿಂಪಿಕ್ಸ್​ನಲ್ಲಿ ಇಂಗ್ಲೆಂಡ್​ಗೆ ಬದಲಾಗಿ ಬ್ರಿಟನ್​ ಸ್ಪರ್ಧಿಸುತ್ತದೆ. ಅಂದರೆ ಇದರಲ್ಲಿ ಸ್ಕಾಟ್ಲೆಂಡ್​ ಮತ್ತು ವೇಲ್ಸ್​ ಸ್ಪರ್ಧಿಗಳೂ ಸೇರಿರುತ್ತಾರೆ. ಇದೇ ಕಾರಣಕ್ಕಾಗಿ ಒಲಿಂಪಿಕ್ಸ್​ ಫುಟ್​ಬಾಲ್​ ಸ್ಪರ್ಧೆ ಅವಕಾಶ ಆಂಗ್ಲರಿಗೆ ಕೈತಪು$್ಪತ್ತ ಬಂದಿದೆ. ಇದೀಗ ಕ್ರಿಕೆಟ್​ನಲ್ಲೂ ಇಂಥದ್ದೇ ಪರಿಸ್ಥಿತಿ ಎದುರಾಗುವ ಭೀತಿ ಕಾಡುತ್ತಿದೆ. ಒಲಿಂಪಿಕ್ಸ್​ ಕ್ರಿಕೆಟ್​ ಸ್ಪರ್ಧೆಯಲ್ಲಿ ಭಾಗವಹಿಸುವುದಕ್ಕಾಗಿ ಸ್ಕಾಟ್ಲೆಂಡ್​, ವೇಲ್ಸ್​ ಜತೆಗೂಡಿ ತಂಡ ಕಟ್ಟುವ ಸವಾಲು ಇಂಗ್ಲೆಂಡ್​ ಮುಂದಿದೆ. ಟಿ20 ರ್ಯಾಂಕಿಂಗ್​ ಅನ್ವಯ ಅರ್ಹತೆ ಸಿಕ್ಕರೆ ಬ್ರಿಟನ್​ ಹೆಸರಿನಲ್ಲೇ ಒಲಿಂಪಿಕ್ಸ್​ನಲ್ಲಿ ಸ್ಪರ್ಧಿಸಲು ಇಂಗ್ಲೆಂಡ್​ ಕ್ರಿಕೆಟ್​ ಮಂಡಳಿ (ಇಸಿಬಿ) ಯೋಜಿಸಿದೆ. ಒಲಿಂಪಿಕ್ಸ್​ಗೆ ಇನ್ನೂ 4 ವರ್ಷಗಳಿದ್ದು, ಶ್ರೀ ಈ ಬಗ್ಗೆ ಚರ್ಚಿಸಲಾಗುವುದು ಎಂದು ಇಸಿಬಿ ತಿಳಿಸಿದೆ.

ಮತ್ತೊಂದೆಡೆ ವೆಸ್ಟ್​ ಇಂಡೀಸ್​ ಒಲಿಂಪಿಕ್ಸ್​ಗಾಗಿ ಬೇರ್ಪಡುವ ಇಕ್ಕಟ್ಟು ಎದುರಿಸಿದೆ. ಕೆರಿಬಿಯನ್​ ದೇಶಗಳು ಒಲಿಂಪಿಕ್ಸ್​ನಲ್ಲಿ ಪ್ರತ್ಯೇಕವಾಗಿ ಸ್ಪರ್ಧಿಸುತ್ತವೆ. ಹೀಗಾಗಿ ವೆಸ್ಟ್​ ಇಂಡೀಸ್​ಗೆ ಒಲಿಂಪಿಕ್ಸ್​ ಅರ್ಹತೆ ಸಿಕ್ಕರೂ, ಕೆರಿಬಿಯನ್​ ದ್ವೀಪಸಮೂಹದ ಒಂದು ದೇಶವಷ್ಟೇ ಪ್ರತ್ಯೇಕವಾಗಿ ಸ್ಪರ್ಧಿಸಬಹುದು. ಆಗ ಪದಕ ಗೆಲ್ಲುವ ಅವಕಾಶವೂ ಣಿಸಲಿರುವುದು ಸಂದಿಗ್ಧತೆ ಸೃಷ್ಟಿಸಿದೆ.

ಪಾಕಿಸ್ತಾನಕ್ಕೆ ರ್ಯಾಂಕ್​ ಸುಧಾರಿಸುವ ಸವಾಲು

ಇತ್ತೀಚೆಗೆ ಐಸಿಸಿ ಟೂರ್ನಿಗಳಲ್ಲಿ ಭಾರತ-ಪಾಕಿಸ್ತಾನ ಪಂದ್ಯ ಕಡ್ಡಾಯವೆನಿಸಿದೆ. ಆದರೆ ಒಲಿಂಪಿಕ್ಸ್​ನಲ್ಲಿ ಈ ತಂಡಗಳ ಹೈವೋಲ್ಟೇಜ್​ ಕಾದಾಟದ ಗ್ಯಾರಂಟಿ ನೀಡಲಾಗದು. ಯಾಕೆಂದರೆ ಸದ್ಯದ ಪರಿಸ್ಥಿತಿಯಲ್ಲಿ ಪಾಕಿಸ್ತಾನದ ಒಲಿಂಪಿಕ್ಸ್​ ಅರ್ಹತೆಯೇ ಕಠಿಣವೆನಿಸಿದೆ. ಒಲಿಂಪಿಕ್ಸ್​ನಲ್ಲಿ ಕ್ರಿಕೆಟ್​ ತಂಡಗಳಿಗೆ ಯಾವ ರೀತಿಯಲ್ಲಿ ಅರ್ಹತೆ ನೀಡಲಾಗುವುದು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಆದರೆ ಐಸಿಸಿ ಟಿ20 ರ್ಯಾಂಕಿಂಗ್​ ಅನ್ವಯ ಅಗ್ರ 5 ತಂಡಗಳಿಗೆ ಅರ್ಹತೆ ನೀಡುವ ಸಾಧ್ಯತೆಯೇ ಅಧಿಕವಾಗಿದೆ. ಪಾಕಿಸ್ತಾನ ಸದ್ಯ ಟಿ20 ರ್ಯಾಂಕಿಂಗ್​ನಲ್ಲಿ 7ನೇ ಸ್ಥಾನದಲ್ಲಿದ್ದು, ಮುಂದಿನ 4 ವರ್ಷಗಳಲ್ಲಿ ಸ್ಥಿರ ನಿರ್ವಹಣೆ ತೋರದಿದ್ದರೆ ಒಲಿಂಪಿಕ್ಸ್​ ಅರ್ಹತೆ ಕೈತಪ್ಪಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net