ಸರಣಿ ಗೆದ್ದ ಕಿವೀಸ್, ಟೆಸ್ಟ್ ವಿಶ್ವಕಪ್ ಫೈನಲ್‌ಗೆ ಮುನ್ನ ನಂ. 1 ಪಟ್ಟ ಕಳೆದುಕೊಂಡ ಭಾರತ

nz vs eng web
Published on

ಬರ್ಮಿಂಗ್‌ಹ್ಯಾಂ: ಬೌಲರ್‌ಗಳ ಬಿಗಿ ದಾಳಿಯ ನೆರವಿನಿಂದ ನ್ಯೂಜಿಲೆಂಡ್ ತಂಡ ಆತಿಥೇಯ ಇಂಗ್ಲೆಂಡ್ ವಿರುದ್ಧದ 2ನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದಲ್ಲಿ 8 ವಿಕೆಟ್‌ಗಳಿಂದ ಸುಲಭ ಗೆಲುವು ದಾಖಲಿಸಿದೆ. ಈ ಮೂಲಕ 2 ಪಂದ್ಯಗಳ ಸರಣಿಯನ್ನು 1-0ಯಿಂದ ಗೆದ್ದ ಕಿವೀಸ್ ತಂಡ, ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್ ಫೈನಲ್‌ಗೆ ಮುನ್ನ ಭಾರತ ತಂಡಕ್ಕೆ ಎಚ್ಚರಿಕೆಯ ಗಂಟೆ ರವಾನಿಸಿದೆ.

ಭಾನುವಾರ 9 ವಿಕೆಟ್‌ಗೆ 122 ರನ್‌ಗಳಿಂದ 4ನೇ ದಿನದಾಟ ಆರಂಭಿಸಿದ ಇಂಗ್ಲೆಂಡ್, ಮೊದಲ ಎಸೆತದಲ್ಲೇ ಇನಿಂಗ್ಸ್ ಮುಗಿಸಿತು. ಇದರಿಂದ ಕೇವಲ 38 ರನ್ ಸವಾಲು ಪಡೆದ ಕಿವೀಸ್ ತಂಡ, 2 ವಿಕೆಟ್‌ಗೆ 41 ರನ್ ಗಳಿಸಿ ಜಯಿಸಿತು. ಹಂಗಾಮಿ ನಾಯಕ ಟಾಮ್ ಲಾಥಮ್ (23*) ತಂಡವನ್ನು ಗೆಲುವಿನ ದಡ ಸೇರಿಸಿದರು. ನಾಯಕ ಕೇನ್ ವಿಲಿಯಮ್ಸನ್ ಸಹಿತ ಕೆಲ ಆಟಗಾರರ ಗಾಯದ ಸಮಸ್ಯೆ ಮತ್ತು ಪ್ರಮುಖ ಬೌಲರ್‌ಗಳಿಗೆ ವಿಶ್ರಾಂತಿ ನೀಡಿದ ನಡುವೆಯೂ ಕಿವೀಸ್ ತಂಡ ಆಂಗ್ಲರೆದುರು ಜಯಿಸಿರುವುದು ಗಮನಾರ್ಹ.

ನ್ಯೂಜಿಲೆಂಡ್ 1999ರ ಬಳಿಕ ಮೊದಲ ಬಾರಿಗೆ ಇಂಗ್ಲೆಂಡ್‌ನಲ್ಲಿ ಸರಣಿ ಗೆದ್ದರೆ, ಇಂಗ್ಲೆಂಡ್ ತಂಡ ಜೋ ರೂಟ್ ಸಾರಥ್ಯದಲ್ಲಿ ಮೊದಲ ಬಾರಿಗೆ ತವರಿನಲ್ಲಿ ಸರಣಿ ಸೋತಿತು. ಕಳೆದ 7 ವರ್ಷಗಳಲ್ಲಿ ಇಂಗ್ಲೆಂಡ್‌ಗೆ ತವರಿನಲ್ಲಿ ಇದು ಮೊದಲ ಸರಣಿ ಸೋಲಾಗಿದೆ.

ಇಂಗ್ಲೆಂಡ್: 303 ಮತ್ತು 41.1 ಓವರ್‌ಗಳಲ್ಲಿ 122 (ಸ್ಟೋನ್ 15, ಬೌಲ್ಟ್ 34ಕ್ಕೆ 2, ಹೆನ್ರಿ 36ಕ್‌ಎಕ 3, ವ್ಯಾಗ್ನರ್ 18ಕ್ಕೆ 3, ಅಜಾಜ್ 25ಕ್ಕೆ 2), ನ್ಯೂಜಿಲೆಂಡ್: 388 ಮತ್ತು 10.5 ಓವರ್‌ಗಳಲ್ಲಿ 2 ವಿಕೆಟ್‌ಗೆ 41 (ಲಾಥಮ್ 23*, ಕಾನ್‌ವೇ 3, ಯಂಗ್ 8, ಬ್ರಾಡ್ 13ಕ್ಕೆ 1, ಸ್ಟೋನ್ 5ಕ್ಕೆ1). ಪಂದ್ಯಶ್ರೇಷ್ಠ: ಮ್ಯಾಟ್​ ಹೆನ್ರಿ, ಸರಣಿಶ್ರೇಷ್ಠ: ಡೆವೊನ್​ ಕಾನ್​ವೇ, ರೋರಿ ಬರ್ನ್ಸ್​​.

ಭಾರತದ ನಂ. 1 ಪಟ್ಟ ಕಸಿದ ಕಿವೀಸ್

ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್ ಫೈನಲ್ ಪಂದ್ಯಕ್ಕೆ ಮುನ್ನ ಐಸಿಸಿ ಟೆಸ್ಟ್ ರ‌್ಯಾಂಕಿಂಗ್‌ನಲ್ಲಿ ಭಾರತ ತಂಡದ ನಂ. 1 ಪಟ್ಟವನ್ನು ನ್ಯೂಜಿಲೆಂಡ್ ಕಸಿದುಕೊಂಡಿದೆ. ಭಾರತ ಈಗ 121 ಅಂಕದೊಂದಿಗೆ 2ನೇ ಸ್ಥಾನಕ್ಕೆ ಕುಸಿದಿದ್ದರೆ, ನ್ಯೂಜಿಲೆಂಡ್ 123 ಅಂಕದೊಂದಿಗೆ ನಂ. 1 ಪಟ್ಟಕ್ಕೇರಿದ್ದು, ಡಬ್ಲ್ಯುಟಿಸಿ ಫೈನಲ್‌ಗೆ ವಿಶ್ವಾಸದಿಂದ ಸಜ್ಜಾಗಿದೆ. ಸರಣಿ ಸೋತ ಇಂಗ್ಲೆಂಡ್ ತಂಡ 4ನೇ ಸ್ಥಾನಕ್ಕೆ ಕುಸಿದಿದ್ದರೆ, ಆಸ್ಟ್ರೇಲಿಯಾ 3ನೇ ಸ್ಥಾನಕ್ಕೇರಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net