

ವಿಶಾಖಪಟ್ಟಣ: ಭಾರತ-ಇಂಗ್ಲೆಂಡ್ ನಡುವಿನ 2ನೇ ಟೆಸ್ಟ್ ಪಂದ್ಯ ವಿಶಾಖಪಟ್ಟಣದಲ್ಲಿ ಒಂದು ದಿನ ಮುಂಚಿತವಾಗಿ ಮುಗಿದಿದೆ. ಇದರಿಂದ 3ನೇ ಟೆಸ್ಟ್ಗೆ ಮುನ್ನ ಉಭಯ ತಂಡಗಳಿಗೆ 9 ದಿನಗಳ ಬಿಡುವು ದೊರೆತಿದೆ. ಇಂಗ್ಲೆಂಡ್ ತಂಡ ಅಬುಧಾಬಿಗೆ ತೆರಳಿ ಅಲ್ಲೇ ವಿಶ್ರಾಂತಿ-ತರಬೇತಿ ಪಡೆಯಲಿದೆ. ಭಾರತ ಪ್ರವಾಸಕ್ಕೆ ಬರುವ ಮುನ್ನವೂ ಇಂಗ್ಲೆಂಡ್ ಅಲ್ಲೇ ತರಬೇತಿ ಶಿಬಿರ ಆಯೋಜಿಸಿತ್ತು.
ಸರಣಿಯ ಉಳಿದ 3 ಪಂದ್ಯಗಳಿಗೆ ಭಾರತ ತಂಡ ಇನ್ನೂ ಪ್ರಕಟಗೊಂಡಿಲ್ಲ. ಭಾರತ ತಂಡ ಮಂಗಳವಾರ ಪ್ರಕಟಗೊಳ್ಳುವ ಸಾಧ್ಯತೆ ಇದೆ. ಆದರೆ ಫೆ. 12 ಅಥವಾ 13ರಂದು ಭಾರತ ತಂಡದ ಆಟಗಾರರು ರಾಜ್ಕೋಟ್ನಲ್ಲಿ ಹಾಜರಾಗುವ ನಿರೀಕ್ಷೆ ಇದೆ. ಗಾಯಗೊಂಡಿರುವ ಕೆಲ ಆಟಗಾರರ ಚೇತರಿಕೆಗೂ ಈ ಬಿಡುವು ನೆರವಾಗಲಿದೆ.
ಡಬ್ಲ್ಯುಟಿಸಿಯಲ್ಲಿ 2ನೇ ಸ್ಥಾನಕ್ಕೇರಿದ ಭಾರತ
ವಿಶಾಖಪಟ್ಟಣದಲ್ಲಿ ಸಾಧಿಸಿದ ಗೆಲುವಿನೊಂದಿಗೆ ಭಾರತ ತಂಡ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ಷಿಪ್ (ಡಬ್ಲ್ಯುಟಿಸಿ) 3ನೇ ಆವೃತ್ತಿಯ ಅಂಕಪಟ್ಟಿಯಲ್ಲಿ 2ನೇ ಸ್ಥಾನಕ್ಕೇರಿದೆ. ಮೊದಲ ಟೆಸ್ಟ್ ಸೋಲಿನ ಬಳಿಕ 6ನೇ ಸ್ಥಾನಕ್ಕೆ ಕುಸಿದಿದ್ದ ಭಾರತ ಈಗ ಶೇ. 52.77 ಅಂಕಗಳೊಂದಿಗೆ ಅಗ್ರಸ್ಥಾನಿ ಆಸ್ಟ್ರೆಲಿಯಾದ (ಶೇ.55) ಬೆನ್ನಹಿಂದೆ ನಿಂತಿದೆ. ಮುಂದಿನ ಟೆಸ್ಟ್ ಗೆದ್ದರೆ ಭಾರತ ಅಗ್ರಸ್ಥಾನಕ್ಕೇರಲಿದೆ. ದಕ್ಷಿಣ ಆಫ್ರಿಕಾ (ಶೇ.50) ಮತ್ತು ನ್ಯೂಜಿಲೆಂಡ್ (ಶೇ.50) ಕ್ರಮವಾಗಿ 3 ಮತ್ತು 4ನೇ ಸ್ಥಾನದಲ್ಲಿವೆ.