

ಬೆಂಗಳೂರು: ಇದುವರೆಗೆ ಆಡಿರುವ 5 ಪಂದ್ಯಗಳಲ್ಲಿ ಒಂದರಲ್ಲಷ್ಟೇ ಗೆದ್ದು 4ರಲ್ಲಿ ಸೋತು ಅಂಕಪಟ್ಟಿಯಲ್ಲಿ ಕೊನೇ ಸ್ಥಾನದಲ್ಲಿರುವ ಹೊರತಾಗಿಯೂ ಹಾಲಿ ಚಾಂಪಿಯನ್ ಇಂಗ್ಲೆಂಡ್ ತಂಡ ಏಕದಿನ ವಿಶ್ವಕಪ್ನಲ್ಲಿ ಸೆಮಿಫೈನಲ್ ರೇಸ್ನಿಂದ ಇನ್ನೂ ಅಧಿಕೃತವಾಗಿ ಹೊರಬಿದ್ದಿಲ್ಲ! ಭಾನುವಾರ ಲಖನೌದಲ್ಲಿ ನಡೆಯಲಿರುವ ಪಂದ್ಯದಲ್ಲಿ ಆತಿಥೇಯ ಭಾರತ ವಿರುದ್ಧ ಗೆದ್ದರೆ ಆಂಗ್ಲರಿಗೂ ಸೆಮೀಸ್ ಆಸೆ ಜೀವಂತವಾಗಿರಲಿದೆ. ಆದರೆ ಈ ಲೆಕ್ಕಾಚಾರ ಅತ್ಯಂತ ಜಟಿಲವಾಗಿದೆ.
ಜೋಸ್ ಬಟ್ಲರ್ ಬಳಗಕ್ಕೆ ಈಗ ಗರಿಷ್ಠ 10 ಅಂಕ (5 ಜಯ) ಕಲೆಹಾಕುವ ಅವಕಾಶವಿದೆ. ಇದರಲ್ಲಿ ಇಂಗ್ಲೆಂಡ್ ಯಶಸ್ವಿಯಾದರೆ, 3ಕ್ಕಿಂತ ಹೆಚ್ಚು ತಂಡಗಳು 5ಕ್ಕಿಂತ ಹೆಚ್ಚು ಪಂದ್ಯ ಗೆಲ್ಲಬಾರದು. ಅಂದರೆ ನ್ಯೂಜಿಲೆಂಡ್ ಅಥವಾ ಆಸ್ಟ್ರೆಲಿಯಾ ಇನ್ನುಳಿದ 3 ಪಂದ್ಯಗಳಲ್ಲಿ 2ರಲ್ಲಾದರೂ ಸೋಲಬೇಕು. ಶ್ರೀಲಂಕಾ, ಅಫ್ಘಾನಿಸ್ತಾನ ತಂಡಗಳೂ ಇನ್ನುಳಿದ 4 ಪಂದ್ಯಗಳಲ್ಲಿ 1ರಲ್ಲಾದರೂ ಸೋಲಬೇಕು.
ಆದರೆ ಇದೆಲ್ಲಕ್ಕಿಂತ ಆಂಗ್ಲರಿಗೆ ಹೆಚ್ಚು ಸವಾಲಿನ ಟಾಸ್ಕ್ ಎಂದರೆ ರನ್ರೇಟ್ ಸುಧಾರಣೆ. ಪ್ರಸಕ್ತ ಆಂಗ್ಲರ ರನ್ರೇಟ್ (-1.634) ಎಲ್ಲರಿಗಿಂತ ಕಳಪೆಯಾಗಿದೆ. 4-5 ತಂಡಗಳು ಗರಿಷ್ಠ 10 ಅಂಕ ಕಲೆಹಾಕಿದರೆ, ಉತ್ತಮ ರನ್ರೇಟ್ ಹೊಂದಿರುವ ತಂಡಕ್ಕೆ ಅಂಕಪಟ್ಟಿಯಲ್ಲಿ 4ನೇ ಸ್ಥಾನ ಮತ್ತು ಸೆಮಿಫೈನಲ್ ಪ್ರವೇಶ ಒಲಿಯಲಿದೆ.