

ಸೌಥಾಂಪ್ಟನ್: ತಾಳ್ಮೆಯ ಬ್ಯಾಟಿಂಗ್ ಮತ್ತು ಮಳೆ ಅಡಚಣೆಯ ನೆರವಿನಿಂದ ಪಾಕಿಸ್ತಾನ ತಂಡ ಆತಿಥೇಯ ಇಂಗ್ಲೆಂಡ್ ವಿರುದ್ಧದ 3ನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದಲ್ಲಿ ಸೋಲು ತಪ್ಪಿಸಲು ಹೋರಾಟ ನಡೆಸಿದೆ.
ರೋಸ್ ಬೌಲ್ ಕ್ರೀಡಾಂಗಣದಲ್ಲಿ 3ನೇ ದಿನದಂತ್ಯದಲ್ಲಿ ಫಾಲೋಆನ್‌ಗೆ ಸಿಲುಕಿದ್ದ ಪಾಕ್, 4ನೇ ದಿನ 2ನೇ ಇನಿಂಗ್ಸ್ ಆರಂಭಿಸಿ ದಿನದಂತ್ಯಕ್ಕೆ 2 ವಿಕೆಟ್‌ಗೆ 100 ರನ್ ಗಳಿಸಿದೆ. ಇನಿಂಗ್ಸ್ ಸೋಲು ತಪ್ಪಿಸಿಕೊಳ್ಳಲು ಪಾಕ್ ಇನ್ನೂ 210 ರನ್ ಗಳಿಸಬೇಕಾಗಿದೆ. ಮಳೆಯಿಂದಾಗಿ ಭೋಜನ ವಿರಾಮದವರೆಗೆ ಕೇವಲ 18 ಓವರ್ ಆಟ ನಡೆಯಿತು. ನಾಯಕ ಅಜರ್ ಅಲಿ (29*) ಮತ್ತು ಬಾಬರ್ ಅಜಮ್ (4*) ಕ್ರೀಸ್‌ನಲ್ಲಿದ್ದಾರೆ.
ಇಂಗ್ಲೆಂಡ್: 8 ವಿಕೆಟ್‌ಗೆ 583 ಡಿಕ್ಲೇರ್, ಪಾಕಿಸ್ತಾನ: 273 ಮತ್ತು 56 ಓವರ್‌ಗಳಲ್ಲಿ 2 ವಿಕೆಟ್‌ಗೆ 100 (ಮಸೂದ್ 18, ಅಬಿದ್ ಅಲಿ 42, ಅಜರ್ ಅಲಿ 29*, ಬಾಬರ್ 4*, ಬ್ರಾಡ್ 23ಕ್ಕೆ 1, ಆಂಡರ್‌ಸನ್ 18ಕ್ಕೆ 1).
ಆಂಡರ್‌ಸನ್ ದಾಖಲೆಗೆ ಸಾಥ್ ನೀಡದ ಫೀಲ್ಡರ್ಸ್!
ಜೇಮ್ಸ್ ಆಂಡರ್‌ಸನ್ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ 600 ವಿಕೆಟ್ ಕಬಳಿಸಿದ ಮೊದಲ ವೇಗಿ ಮತ್ತು 4ನೇ ಬೌಲರ್ ಎನಿಸಿಕೊಳ್ಳುವ ಸನಿಹದಲ್ಲಿದ್ದಾರೆ. ಆದರೆ 4ನೇ ದಿನದಾಟದಲ್ಲಿಯೇ ಈ ಸಾಧನೆ ದಾಖಲಿಸಲು ಅವರಿಗೆ ಇಂಗ್ಲೆಂಡ್ ಫೀಲ್ಡರ್‌ಗಳು ಸಾಥ್ ನೀಡಲಿಲ್ಲ. ಅವರ 37 ಎಸೆತಗಳ ಅಂತರದಲ್ಲಿ 4 ಕ್ಯಾಚ್‌ಗಳನ್ನು ಕೈಚೆಲ್ಲಿ ಫೀಲ್ಡರ್‌ಗಳು ನಿರಾಸೆ ಮೂಡಿಸಿದರು. ದಿನದ ಕೊನೆಯಲ್ಲಿ ಅವರು ಅಬಿದ್ ಅಲಿಯನ್ನು ಎಲ್‌ಬಿ ಬಲೆಗೆ ಕೆಡವಿ 599ನೇ ವಿಕೆಟ್ ಪಡೆದರು.