ಪಾಕಿಸ್ತಾನ ವಿರುದ್ಧ 10 ವರ್ಷಗಳ ಬಳಿಕ ಟೆಸ್ಟ್ ಸರಣಿ ಗೆದ್ದ ಇಂಗ್ಲೆಂಡ್

test cricket
Published on

ಸೌಥಾಂಪ್ಟನ್: ವೇಗಿ ಜೇಮ್ಸ್ ಆಂಡರ್‌ಸನ್ ಅವರ 600 ವಿಕೆಟ್‌ಗಳ ಐತಿಹಾಸಿಕ ಸಾಧನೆಯ ನಡುವೆ ಇಂಗ್ಲೆಂಡ್ ತಂಡ, ಮಳೆ ಅಡಚಣೆಯಿಂದಾಗಿ ಅಂತಿಮ ದಿನದಾಟದ ಮೊದಲ ಎರಡೂ ಅವಧಿಯ ಆಟ ನಷ್ಟಗೊಂಡ ಪರಿಣಾಮ ಪ್ರವಾಸಿ ಪಾಕಿಸ್ತಾನ ವಿರುದ್ಧದ 3ನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದಲ್ಲಿ ಡ್ರಾಕ್ಕೆ ತೃಪ್ತಿಪಟ್ಟಿದೆ. ಇದರ ನಡುವೆಯೂ 1-0ಯಿಂದ ಸರಣಿ ಒಲಿಸಿಕೊಂಡ ಇಂಗ್ಲೆಂಡ್ ತಂಡ, ಪಾಕ್ ವಿರುದ್ಧ 10 ವರ್ಷಗಳ ಬಳಿಕ ಟೆಸ್ಟ್ ಸರಣಿ ಗೆಲುವು ದಾಖಲಿಸಿದ ಸಾಧನೆ ಮಾಡಿದೆ.

ರೋಸ್ ಬೌಲ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಮಂಗಳವಾರ ಚಹಾ ವಿರಾಮದ ಬಳಿಕ 2 ವಿಕೆಟ್‌ಗೆ 100 ರನ್‌ಗಳಿಂದ 2ನೇ ಇನಿಂಗ್ಸ್ ಮುಂದುವರಿಸಿದ ಪಾಕ್, 4 ವಿಕೆಟ್‌ಗೆ 187 ರನ್ ಗಳಿಸಿ ಡ್ರಾ ಸಾಧಿಸಿತು. ಆಗ ಬಾಬರ್ ಅಜಮ್ (63*) ಮತ್ತು ವಾದ್ ಅಲಮ್ (0) ಕ್ರೀಸ್‌ನಲ್ಲಿದ್ದರು.

ಸರಣಿಯ ಮೊದಲ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ತಂಡ ಗೆಲುವು ದಾಖಲಿಸಿದ್ದರೆ, 2ನೇ ಪಂದ್ಯ ಕೂಡ ಮಳೆಯಿಂದಾಗಿ ಡ್ರಾಗೊಂಡಿತ್ತು. ಅಂತಿಮ ಟೆಸ್ಟ್‌ನಲ್ಲಿ ಫಾಲೋಆನ್‌ಗೆ ಸಿಲುಕಿದ್ದ ಪಾಕ್ ಸೋಲಿನ ಭೀತಿಯಲ್ಲಿದ್ದರೂ, ಅಂತಿಮ ದಿನದಾಟದಲ್ಲಿ ಮಳೆಯಿಂದಾಗಿ ಕೇವಲ 27.1 ಓವರ್‌ಗಳ ಆಟ ಮಾತ್ರ ನಡೆದಿದ್ದು ಪಾಕ್‌ಗೆ ವರದಾನವಾಯಿತು. ಇನ್ನು ಉಭಯ ತಂಡಗಳ ನಡುವೆ 3 ಪಂದ್ಯಗಳ ಟಿ20 ಸರಣಿ ನಡೆಯಲಿದೆ.

ಡ್ರಾ ಫಲಿತಾಂಶದಿಂದಾಗಿ ಇಂಗ್ಲೆಂಡ್ ತಂಡ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್ ಅಂಕಪಟ್ಟಿಯಲ್ಲಿ 292 ಅಂಕದೊಂದಿಗೆ 3ನೇ ಸ್ಥಾನದಲ್ಲೇ ಉಳಿದಿದೆ. ಆಸ್ಟ್ರೇಲಿಯಾ 296 ಅಂಕದೊಂದಿಗೆ 2ನೇ ಸ್ಥಾನದಲ್ಲಿದ್ದರೆ, ಭಾರತ 360 ಅಂಕದೊಂದಿಗೆ ಅಗ್ರಸ್ಥಾನದಲ್ಲಿದೆ. 2010ರಲ್ಲಿ ಕೊನೆಯದಾಗಿ ಪಾಕಿಸ್ತಾನ ವಿರುದ್ಧ ಟೆಸ್ಟ್ ಸರಣಿ ಜಯಿಸಿದ್ದ ಇಂಗ್ಲೆಂಡ್, ಕರೊನಾ ಕಾಲದಲ್ಲಿ ಸತತ 2ನೇ ಟೆಸ್ಟ್ ಸರಣಿ ಜಯಿಸಿದ ಸಾಧನೆ ಮಾಡಿದೆ. ಈ ಮುನ್ನ ವೆಸ್ಟ್ ಇಂಡೀಸ್ ವಿರುದ್ಧ ಜೈವಿಕ-ಸುರಕ್ಷಾ ವಾತಾವರಣದಲ್ಲಿ ನಡೆದ ಮೊದಲ ಸರಣಿಯಲ್ಲೂ ಗೆಲುವು ದಾಖಲಿಸಿತ್ತು.

ಇಂಗ್ಲೆಂಡ್: 8 ವಿಕೆಟ್‌ಗೆ 583 ಡಿ, ಪಾಕಿಸ್ತಾನ: 273 ಮತ್ತು 83.1 ಓವರ್‌ಗಳಲ್ಲಿ 4 ವಿಕೆಟ್‌ಗೆ 187 (ಅಜರ್ ಅಲಿ 31, ಬಾಬರ್ ಅಜಮ್ 63*, ಶಫೀಕ್ 21, ಆಂಡರ್‌ಸನ್ 45ಕ್ಕೆ 2, ರೂಟ್ 17ಕ್ಕೆ 1). ಪಂದ್ಯಶ್ರೇಷ್ಠ: ಜಾಕ್ ಕ್ರೌಲಿ. ಸರಣಿಶ್ರೇಷ್ಠ: ಜೋಸ್ ಬಟ್ಲರ್/ಮೊಹಮದ್ ರಿಜ್ವಾನ್.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net