

ನಾರ್ತ್‌ಸೌಂಡ್: ಅನುಭವಿ ಸ್ಪಿನ್ನರ್ ಆದಿಲ್ ರಶೀದ್ (11ಕ್ಕೆ 4) ದಾಳಿಯ ನೆರವಿನಿಂದ ಹಾಲಿ ಚಾಂಪಿಯನ್ಸ್ ಇಂಗ್ಲೆಂಡ್ ತಂಡ ಐಸಿಸಿ ಟಿ20 ವಿಶ್ವಕಪ್‌ನಲ್ಲಿ ಕ್ರಿಕೆಟ್ ಶಿಶು ಓಮನ್ ಎದುರು 8 ವಿಕೆಟ್‌ಗಳ ಭರ್ಜರಿ ಗೆಲುವು ದಾಖಲಿಸಿದೆ. ಇದರೊಂದಿಗೆ ರನ್‌ರೇಟ್‌ನಲ್ಲೂ ಭಾರಿ ಸುಧಾರಣೆ ಕಂಡಿರುವ ಜೋಸ್ ಬಟ್ಲರ್ ಪಡೆ ಸೂಪರ್-8 ಹಂತದ ಅವಕಾಶ ವೃದ್ಧಿಸಿಕೊಂಡಿದೆ.
ಸರ್ ವಿವ್ ರಿಚರ್ಡ್ಸ್ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ಬಿ ಗುಂಪಿನ ಕಾದಾಟದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್‌ಗೆ ಇಳಿದ ಓಮನ್, ವೇಗಿಗಳಾದ ಜ್ರೋಾ ಆರ್ಚರ್ (12ಕ್ಕೆ3), ಮಾರ್ಕ್ ವುಡ್ (12ಕ್ಕೆ 3) ಹಾಗೂ ಆದಿಲ್ ರಶೀದ್ ದಾಳಿಗೆ ನೆಲಕಚ್ಚಿ 13.2 ಓವರ್‌ಗಳಲ್ಲಿ ಕೇವಲ 47 ರನ್‌ಗಳಿಗೆ ಆಲೌಟ್ ಆಯಿತು. ಪ್ರತಿಯಾಗಿ ಕೇವಲ 3.1 ಓವರ್‌ಗಳಲ್ಲಿ 2 ವಿಕೆಟ್‌ಗೆ 50 ರನ್‌ಗಳಿಸಿ ಯಶಸ್ವಿ ಚೇಸಿಂಗ್ ನಡೆಸಿದ ಇಂಗ್ಲೆಂಡ್ 16.5 ಓವರ್ ಬಾಕಿ ಇರುವಂತೆಯೆ ದಾಖಲೆಯ ಗೆಲುವು ದಾಖಲಿಸಿತು.
ಓಮನ್: 13.2 ಓವರ್‌ಗಳಲ್ಲಿ 47 (ಪ್ರತೀಕ್ 5, ಕಶ್ಯಪ್ 9, ಅಕೀಬ್ 8, ಶೋಯಿಬ್ 11, ಕಲೀಮುಲ್ಲಾ 5, ಆರ್ಚರ್ 12ಕ್ಕೆ 3, ಮಾರ್ಕ್ ವುಡ್ 12ಕ್ಕೆ 3, ರಶೀದ್ 11ಕ್ಕೆ 4).
ಇಂಗ್ಲೆಂಡ್: 3.1 ಓವರ್‌ಗಳಲ್ಲಿ 2 ವಿಕೆಟ್ 50 (ಫಿಲ್ ಸಾಲ್ಟ್ 12, ಜೋಸ್ ಬಟ್ಲರ್ 24*, ವಿಲ್ ಜಾಕ್ಸ್ 5, ಜಾನಿ ಬೇರ್ ಸ್ಟೋ 8*, ಕಲೀಮುಲ್ಲಾ 10ಕ್ಕೆ 1). ಪಂದ್ಯಶ್ರೇಷ್ಠ: ಆದಿಲ್ ರಶೀದ್.
1. ಇಂಗ್ಲೆಂಡ್ ಟಿ20 ವಿಶ್ವಕಪ್ ಪಂದ್ಯವೊಂದರಲ್ಲಿ ಗರಿಷ್ಠ ಎಸೆತ ಬಾಕಿಯಿರುವಂತೆಯೆ ಗೆಲುವು ದಾಖಲಿಸಿದ ಸಾಧನೆ ಮಾಡಿದೆ. ನೆದರ್ಲೆಂಡ್ ಎದುರು 90 ಎಸೆತ ಇರುವಂತೆ ಶ್ರೀಲಂಕಾ ಜಯ ಕಂಡಿದ್ದು ಹಿಂದಿನ ಸಾಧನೆ.