ಭಾರತಕ್ಕೆ ಬರಲ್ಲ ಹ್ಯಾರಿ ಬ್ರೂಕ್​; ಆಂಗ್ಲರ ಬಜ್​ಬಾಲ್​ ಕಾರ್ಯತಂತ್ರಕ್ಕೆ ಆರಂಭದಲ್ಲೇ ಹಿನ್ನಡೆ!

brook web
Published on

ಲಂಡನ್​: ಇಂಗ್ಲೆಂಡ್​ ಬ್ಯಾಟರ್​ ಹ್ಯಾರಿ ಬ್ರೂಕ್​ ವೈಯಕ್ತಿಕ ಕಾರಣ ನೀಡಿ ಭಾರತ ಪ್ರವಾಸದ ಟೆಸ್ಟ್​ ಸರಣಿಯಿಂದ ಹಿಂದೆ ಸರಿದಿದ್ದಾರೆ. ಬಜ್​ಬಾಲ್​ ಕಾರ್ಯತಂತ್ರದ ಪ್ರಮುಖ ಭಾಗವಾಗಿದ್ದ ಹ್ಯಾರಿ ಬ್ರೂಕ್​ ಗೈರು ಆಂಗ್ಲರಿಗೆ ಸರಣಿ ಮುನ್ನವೇ ಭಾರಿ ಹಿನ್ನಡೆ ತಂದಿದೆ.

ಭಾರತಕ್ಕೆ ಆಗಮಿಸುವುದಕ್ಕೆ ಮುನ್ನ ಅಬುಧಾಬಿಯಲ್ಲಿ ತರಬೇತಿ ಶಿಬಿರದಲ್ಲಿ ಪಾಲ್ಗೊಂಡಿದ್ದ ಇಂಗ್ಲೆಂಡ್​ ತಂಡದೊಂದಿಗೆ ಬ್ರೂಕ್​ ಇದ್ದರು. ಆದರೆ ಇದೀಗ ಅವರು ಅಬುಧಾಬಿಯಿಂದ ಭಾರತಕ್ಕೆ ಬರದೆ, ತವರಿಗೆ ಮರಳುತ್ತಿದ್ದಾರೆ ಎಂದು ಇಂಗ್ಲೆಂಡ್​ ಕ್ರಿಕೆಟ್​ ಮಂಡಳಿ (ಇಸಿಬಿ) ತಿಳಿಸಿದೆ. 5 ಪಂದ್ಯಗಳ ಟೆಸ್ಟ್​ ಸರಣಿ ಗುರುವಾರ ಹೈದರಾಬಾದ್​ ಶುರುವಾಗಲಿದ್ದು, ಮಾರ್ಚ್​ 11ರವರೆಗೂ ನಡೆಯಲಿದೆ. ಆದರೆ 24 ವರ್ಷದ ಬ್ರೂಕ್​ ಸರಣಿಯ ಕೊನೇ ಕೆಲ ಪಂದ್ಯಗಳಿಗಾದರೂ ತಂಡ ಸೇರಿಕೊಳ್ಳುವ ಸಾಧ್ಯತೆಯನ್ನು ಇಸಿಬಿ ತಳ್ಳಿಹಾಕಿದೆ.

2022ರಲ್ಲಿ ದಣ ಆಫ್ರಿಕಾ ವಿರುದ್ಧ ಟೆಸ್ಟ್​ ಸರಣಿಗೆ ಪದಾರ್ಪಣೆ ಮಾಡಿದ್ದ ಹ್ಯಾರಿ ಬ್ರೂಕ್​ ಇದುವರೆಗೆ ಆಡಿರುವ 12 ಟೆಸ್ಟ್​ಗಳಲ್ಲಿ 4 ಶತಕಗಳ ಸಹಿತ 62ರ ಸರಾಸರಿಯಲ್ಲಿ 1,1181 ರನ್​ ಸಿಡಿಸಿದ್ದಾರೆ. ಬಜ್​ಬಾಲ್​ ಕಾರ್ಯತಂತ್ರದ ಭಾಗವಾಗಿ ಅವರು 91.76 ಸ್ಟ್ರೆ$ಕ್​ರೇಟ್​ನಲ್ಲಿ ರನ್​ ಗಳಿಸಿರುವುದು ಗಮನಾರ್ಹ. ಈ ಮುನ್ನ ಪಾಕ್​ ಪ್ರವಾಸದಲ್ಲಿ ಇಂಗ್ಲೆಂಡ್​ ಭರ್ಜರಿ ಗೆಲುವು ಸಾಧಿಸುವಲ್ಲಿ ಬ್ರೂಕ್​ ಪ್ರಮುಖ ಪಾತ್ರ ವಹಿಸಿದ್ದರು.

ಲಾರೆನ್ಸ್​ ಬದಲಿ ಆಟಗಾರ

ಮಧ್ಯಮ ಕ್ರಮಾಂಕದ ಬ್ಯಾಟರ್​ ಡೇನ್​ ಲಾರೆನ್ಸ್​ ಇಂಗ್ಲೆಂಡ್​ ಟೆಸ್ಟ್​ ತಂಡದಲ್ಲಿ ಹ್ಯಾರಿ ಬ್ರೂಕ್​ ಸ್ಥಾನ ತುಂಬಲಿದ್ದಾರೆ. 26 ವರ್ಷದ ಲಾರೆನ್ಸ್​ ಸೋಮವಾರ ಭಾರತಕ್ಕೆ ಆಗಮಿಸಲಿದ್ದಾರೆ. ಇದುವರೆಗೆ 11 ಟೆಸ್ಟ್​ ಆಡಿರುವ ಲಾರೆನ್ಸ್​ 4 ಅರ್ಧಶತಕಗಳ ಸಹಿತ 551 ರನ್​ ಗಳಿಸಿದ್ದಾರೆ.

ಇಂಗ್ಲೆಂಡ್​ ತಂಡ ಆಗಮನ

ಭಾರತ ಪ್ರವಾಸಕ್ಕೆ ಪೂರ್ವಭಾವಿಯಾಗಿ 10 ದಿನಗಳ ಕಾಲ ಅಬುಧಾಬಿಯಲ್ಲಿ ಸಿದ್ಧತೆ ನಡೆಸಿರುವ ಇಂಗ್ಲೆಂಡ್​ ತಂಡ ಭಾನುವಾರ ಹೈದರಾಬಾದ್​ಗೆ ಆಗಮಿಸಿದ್ದು, ಸೋಮವಾರದಿಂದ ಇಲ್ಲೇ ಅಭ್ಯಾಸ ನಡೆಸಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net