

ನವದೆಹಲಿ: ಸೆಪ್ಟೆಂಬರ್ 19ರಿಂದ ಯುಎಇಯಲ್ಲಿ ನಡೆಯಲಿರುವ ಐಪಿಎಲ್ 14ನೇ ಆವೃತ್ತಿಯ 2ನೇ ಭಾಗದ ಟೂರ್ನಿಗೆ ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾದ ಆಟಗಾರರು ಲಭ್ಯವಾಗುವುದು ಖಚಿತವೆನಿಸಿದೆ. ಇವೆರಡು ದೇಶಗಳ ಕ್ರಿಕೆಟ್ ಮಂಡಳಿಗಳ ಜತೆಗೆ ಬಿಸಿಸಿಐ ಕೂಡ ಈ ವಿಷಯವನ್ನು ಖಚಿತಪಡಿಸಿದೆ. ಇದರಿಂದ ಎಲ್ಲ ಐಪಿಎಲ್ ತಂಡಗಳು ನಿಟ್ಟುಸಿರು ಬಿಟ್ಟಿವೆ. ಅಲ್ಲದೆ ಎಲ್ಲ ದೇಶಗಳ ಆಟಗಾರರೂ ಐಪಿಎಲ್ 2ನೇ ಭಾಗಕ್ಕೂ ಸಂಪೂರ್ಣ ಲಭ್ಯರಾದಂತಾಗಿದೆ.
ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ ತಂಡಗಳು ಐಪಿಎಲ್ ಸಮಯದಲ್ಲೇ ಸರಣಿಗಳನ್ನು ಆಡಲಿರುವುದರಿಂದ ಈ ದೇಶಗಳ ಆಟಗಾರರು ಐಪಿಎಲ್‌ನಲ್ಲಿ ಆಡುವುದು ಅನುಮಾನವೆನಿಸಿತ್ತು. ಆದರೆ ಇಂಗ್ಲೆಂಡ್ ಕ್ರಿಕೆಟ್ ಮಂಡಳಿ (ಇಸಿಬಿ) ಮತ್ತು ಕ್ರಿಕೆಟ್ ಆಸ್ಟ್ರೇಲಿಯಾ (ಸಿಎ) ಐಪಿಎಲ್‌ನಲ್ಲಿ ಆಡಲು ಬಯಸುವ ಆಟಗಾರರಿಗೆ ಅನುಮತಿ ನೀಡುವುದಾಗಿ ತಿಳಿಸಿವೆ. ಜತೆಗೆ ಬಯೋಬಬಲ್ ಮಾನಸಿಕ ಒತ್ತಡವನ್ನು ತಪ್ಪಿಸಿಕೊಳ್ಳಲು ಬಯಸುವ ಆಟಗಾರರು ಟೂರ್ನಿ ಹಿಂದೆ ಸರಿಯುವ ಆಯ್ಕೆಯನ್ನೂ ಅವರಿಗೇ ನೀಡಿದೆ. ಉಭಯ ಮಂಡಳಿಗಳು ಎಲ್ಲ ಆಟಗಾರರಿಗೆ ನಿರಾಕ್ಷೇಪಣಾ ಪತ್ರ (ಎನ್‌ಒಸಿ) ನೀಡಲು ಒಪ್ಪಿಗೆ ಸೂಚಿಸಿವೆ.
ಇಂಗ್ಲೆಂಡ್‌ನ 14 ಮತ್ತು ಆಸ್ಟ್ರೇಲಿಯಾದ 20 ಆಟಗಾರರು ವಿವಿಧ ಐಪಿಎಲ್ ತಂಡಗಳ ಭಾಗವಾಗಿದ್ದಾರೆ. ಈ ಪೈಕಿ ಕೆಕೆಆರ್ ಆಟಗಾರರಾಗಿರುವ ಆಸೀಸ್ ವೇಗಿ ಪ್ಯಾಟ್ ಕಮ್ಮಿನ್ಸ್, ಮೊದಲ ಮಗುವಿನ ನಿರೀಕ್ಷೆಯಿಂದಾಗಿ ಐಪಿಎಲ್ 2ನೇ ಭಾಗದಿಂದ ಈಗಾಗಲೆ ಹಿಂದೆ ಸರಿದಿದ್ದಾರೆ. ಐಪಿಎಲ್‌ನಲ್ಲಿ ಆಡುವ ಇಂಗ್ಲೆಂಡ್‌ನ ಪ್ರಮುಖ ಆಟಗಾರರು ಅದೇ ಸಮಯದಲ್ಲಿ ನಡೆಯಲಿರುವ ಪಾಕಿಸ್ತಾನ ಪ್ರವಾಸವನ್ನು ತಪ್ಪಿಸಿಕೊಳ್ಳಲು ಅನುಮತಿಯೂ ಲಭಿಸಿದೆ. 16 ವರ್ಷಗಳ ಬಳಿಕ ಪಾಕಿಸ್ತಾನ ಪ್ರವಾಸ ಕೈಗೊಳ್ಳಲಿರುವ ಇಂಗ್ಲೆಂಡ್ ತಂಡ ಅಕ್ಟೋಬರ್ 13 ಮತ್ತು 14ರಂದು ರಾವಲ್ಪಿಂಡಿಯಲ್ಲಿ 2 ಟಿ20 ಪಂದ್ಯಗಳನ್ನು ಆಡಲಿದೆ. ಮತ್ತೊಂದೆಡೆ ಕ್ರಿಕೆಟ್ ಆಸ್ಟ್ರೇಲಿಯಾ, ಐಪಿಎಲ್ ಸಮಯದಲ್ಲೇ ನಡೆಸಲು ಯೋಜಿಸಿರುವ ಅ್ಘಾನಿಸ್ತಾನ ಮತ್ತು ವೆಸ್ಟ್ ಇಂಡೀಸ್ ಒಳಗೊಂಡ ಟಿ20 ತ್ರಿಕೋನ ಸರಣಿಯನ್ನು ಮುಂದೂಡಲು ನಿರ್ಧರಿಸಿದೆ. ಈ ಮುನ್ನ ನ್ಯೂಜಿಲೆಂಡ್ ಕ್ರಿಕೆಟ್ ಮಂಡಳಿ ಕೂಡ ಪಾಕಿಸ್ತಾನ ಪ್ರವಾಸಕ್ಕೆ, ಐಪಿಎಲ್ ಆಟಗಾರರನ್ನು ಹೊರತಾದ ತಂಡ ಕಳುಹಿಸಲು ನಿರ್ಧರಿಸಿತ್ತು.
ಏಪ್ರಿಲ್‌ನಲ್ಲಿ ಭಾರತದಲ್ಲಿ ಶುರುವಾಗಿದ್ದ ಐಪಿಎಲ್ 14ನೇ ಆವೃತ್ತಿ, ಮೇನಲ್ಲಿ ಕೆಲ ಆಟಗಾರರಿಗೆ ಕರೊನಾ ಸೋಂಕು ಕಾಣಿಸಿಕೊಂಡ ಬೆನ್ನಲ್ಲೇ ಸ್ಥಗಿತಗೊಂಡಿತ್ತು. ಇದೀಗ ಟೂರ್ನಿಯ ಉಳಿದ ಭಾಗ ಅರಬ್ ದೇಶಕ್ಕೆ ಸ್ಥಳಾಂತರಗೊಂಡಿದೆ. ಟೂರ್ನಿಯ 29 ಪಂದ್ಯಗಳು ಮೊದಲ ಭಾಗದಲ್ಲಿ ನಡೆದಿದ್ದು, 31 ಪಂದ್ಯಗಳು 2ನೇ ಭಾಗದಲ್ಲಿ ಅಕ್ಟೋಬರ್ 15ರವರೆಗೆ ನಡೆಯಲಿವೆ.
ಶ್ರೇಯಸ್, ನಟರಾಜನ್‌ಗೆ ಮತ್ತೆ ಅವಕಾಶ
ಗಾಯದ ಸಮಸ್ಯೆಯಿಂದಾಗಿ ಐಪಿಎಲ್ 14ನೇ ಆವೃತ್ತಿಯ ಮೊದಲ ಭಾಗವನ್ನು ತಪ್ಪಿಸಿಕೊಂಡಿದ್ದ ಶ್ರೇಯಸ್ ಅಯ್ಯರ್ ಮತ್ತು ವೇಗಿ ಟಿ. ನಟರಾಜನ್‌ಗೆ 2ನೇ ಭಾಗದ ಟೂರ್ನಿಯ ವೇಳೆ ಕ್ರಮವಾಗಿ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಸನ್‌ರೈಸರ್ಸ್ ತಂಡಗಳಿಗೆ ಮರಳಲು ಬಿಸಿಸಿಐ ಅವಕಾಶ ಕಲ್ಪಿಸಿದೆ. ಟೂರ್ನಿಯಲ್ಲಿ ಈಗಾಗಲೆ ಅವರ ಬದಲಿಗೆ ಬೇರೆ ಆಟಗಾರರನ್ನು ತಂಡಗಳಿಗೆ ಸೇರ್ಪಡೆಗೊಳಿಸಿದ್ದರೂ, ಮರಳಿ ಆಡಲು ಬಿಸಿಸಿಐ ಅನುಮತಿ ನೀಡಿದೆ. ಫಿಟ್ನೆಸ್ ಸಮಸ್ಯೆಯಿಂದಾಗಿ ಮೊದಲ ಭಾಗ ತಪ್ಪಿಸಿಕೊಂಡಿದ್ದ ಆಟಗಾರ 2ನೇ ಭಾಗಕ್ಕೆ ಫಿಟ್ ಆಗಿದ್ದರೆ ಆತನನ್ನು ಆಡಿಸಲು ಬಿಸಿಸಿಐ ಅವಕಾಶ ಕಲ್ಪಿಸಿದ್ದು, ಈ ಬಗೆಗಿನ ಅಂತಿಮ ನಿರ್ಧಾರಕ್ಕೆ ಆಗಸ್ಟ್ 20ರವರೆಗೆ ಗಡುವು ನೀಡಿದೆ.