

ಸೌಥಾಂಪ್ಟನ್: ಕರೊನಾ ವೈರಸ್ ಭೀತಿ ನಡುವೆಯೂ 117 ದಿನಗಳ ಬಳಿಕ ಆರಂಭಗೊಂಡ ಅಂತಾರಾಷ್ಟ್ರೀಯ ಕ್ರಿಕೆಟ್ನ ಮೊದಲ ಟೆಸ್ಟ್ ಕದನವೇ ರೋಚಕತೆ ಕಾಯ್ದುಕೊಂಡಿದೆ. ದ ರೋಸ್ ಬೌಲ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಏಕದಿನ ವಿಶ್ವಚಾಂಪಿಯನ್ ಆತಿಥೇಯ ಇಂಗ್ಲೆಂಡ್ ಹಾಗೂ ಟಿ20 ವಿಶ್ವಚಾಂಪಿಯನ್ ವೆಸ್ಟ್ ಇಂಡೀಸ್ ನಡುವಿನ ಕದನ ಕ್ರೀಡಾಭಿಮಾನಿಗಳು ತುದಿಗಾಲಲ್ಲಿ ನಿಲ್ಲುವಂತೆ ಮಾಡಿದೆ. ಅಂತಿಮ ದಿನದಾಟದ ಚಹಾ ವಿರಾಮದ ವೇಳೆಗೆ 4 ವಿಕೆಟ್ಗೆ 143 ಮೊತ್ತ ಪೇರಿಸಿರುವ ವೆಸ್ಟ್ ಇಂಡೀಸ್ ಜಯ ದಾಖಲಿಸಲು ಇನ್ನೂ 57 ರನ್ ಅವಶ್ಯಕತೆ ಇದೆ.
ಆತಿಥೇಯ ತಂಡ ನೀಡಿದ 200 ರನ್ ಸಾಧಾರಣ ಮೊತ್ತ ಬೆನ್ನಟ್ಟಿರುವ ಪ್ರವಾಸಿ ವೆಸ್ಟ್ ಇಂಡೀಸ್ ಜೋಫ್ರಾ ಆರ್ಚರ್ (35ಕ್ಕೆ 3) ಮಾರಕ ದಾಳಿ ನಡುವೆಯೂ ಮಧ್ಯಮ ಕ್ರಮಾಂಕದ ಬ್ಯಾಟ್ಸ್ಮನ್ ಜಮೈರ್ನ್ ಬ್ಲ್ಯಾಕ್ ವುಡ್ (65 ರನ್, 110ಎಸೆತ, 8ಬೌಂಡರಿ) ಹಾಗೂ ರೋಸ್ಟನ್ ಚೇಸ್ (37ರನ್, 88 ಎಸೆತ, 1 ಬೌಂಡರಿ) ಜೋಡಿಯ ಸಮಯೋಚಿತ ಬ್ಯಾಟಿಂಗ್ ಫಲವಾಗಿ ಪ್ರವಾಸಿ ವೆಸ್ಟ್ ಇಂಡೀಸ್ ತಂಡ ಗೆಲುವಿಗಾಗಿ ಹೋರಾಟ ಮುಂದುವರಿಸಿದೆ.
ಚೇತರಿಕೆ ನೀಡಿದ ಬ್ಲ್ಯಾಕ್ ವುಡ್
ಮೊದಲ ಇನಿಂಗ್ಸ್ನಲ್ಲಿ ತವರು ವೆಸ್ಟ್ ಇಂಡೀಸ್ ಎದುರು ವಿಕೆಟ್ ಕಬಳಿಸಲು ವಿಫಲರಾಗಿದ್ದ ಆರ್ಚರ್ ಅಂತಿಮ ದಿನದಾಟದಲ್ಲಿ ಮಿಂಚಿನ ನಿರ್ವಹಣೆ ತೋರಿದರು. ಮೊದಲ ಇನಿಂಗ್ಸ್ ಅರ್ಧಶತಕ ಸಾಧಕ ಕ್ರೇಗ್ ಬ್ರಾಥ್ವೇಟ್ (4) ವಿಫಲರಾದರೆ, ಕ್ಯಾಂಪ್ಬೆಲ್ (1) ಕಣದಿಂದ ನಿವೃತ್ತಿ ಹೊಂದಿದರು. ಶೈ ಹೋಪ್ಸ್ (9) ಹಾಗೂ ಬ್ರೂಕ್ಸ್ (0) ಬಂದಷ್ಟೇ ವೇಗವಾಗಿ ಪೆವಿಲಿಯನ್ ಸೇರಿಕೊಂಡರು. ಕೇವಲ 27 ರನ್ಗಳಿಗೆ 3 ವಿಕೆಟ್ ಕಳೆದುಕೊಂಡ ವಿಂಡೀಸ್ ಆಘಾತ ಎದುರಿಸಿತು.
ಇದಕ್ಕೂ ಮೊದಲು 8 ವಿಕೆಟ್ಗೆ 284 ರನ್ಗಳಿಂದ ದಿನದಾಟ ಆರಂಭಿಸಿದ ಇಂಗ್ಲೆಂಡ್ 313 ರನ್ಗಳಿಗೆ ಸರ್ವಪತನ ಕಂಡಿತು. ಶನ್ನೊನ್ ಗ್ರ್ಯಾಬ್ರಿಯಲ್ 5 ವಿಕೆಟ್ ಗೊಂಚಲು ಪಡೆದು ಮಿಂಚಿದರು. ಇಂಗ್ಲೆಂಡ್ ಮೊದಲ ಇನಿಂಗ್ಸ್ 204 ರನ್ಗಳಿಸಿದ್ದರೆ, ವೆಸ್ಟ್ ಇಂಡೀಸ್ 318 ರನ್ಗಳಿಸಿ 114 ರನ್ ಮುನ್ನಡೆ ಸಾಧಿಸಿತ್ತು. ದ್ವಿತೀಯ ಇನಿಂಗ್ಸ್ನಲ್ಲಿ ಇಂಗ್ಲೆಂಡ್ 313 ರನ್ ಗಳಿಸಿತ್ತು.
ಇಂಗ್ಲೆಂಡ್ : 204 ಮತ್ತು 313 (ಜೋಫ್ರಾ ಆರ್ಚರ್ 23, ಗ್ರ್ಯಾಬ್ರಿಯಲ್ 75ಕ್ಕೆ 5, ರೋಸ್ಟನ್ ಚೇಸ್ 71ಕ್ಕೆ 2, ಅಲ್ಜಾರಿ ಜೋಸೆಫ್ 45ಕ್ಕೆ 2), ವೆಸ್ಟ್ ಇಂಡೀಸ್: 318 ಮತ್ತು ದ್ವಿತೀಯ ಇನಿಂಗ್ಸ್ ಅಂತಿಮ ದಿನದಾಟದ ಚಹಾ ವಿರಾಮದ ವೇಳೆಗೆ 4 ವಿಕೆಟ್ಗೆ 143 (ಜಮೈರ್ನ್ ಬ್ಲ್ಯಾಕ್ ವುಡ್ 65 ಬ್ಯಾಟಿಂಗ್, ರೋಸ್ಟನ್ ಚೇಸ್ 37, ಡೋವ್ರಿಚ್ 15 ಬ್ಯಾಟಿಂಗ್, ಜೋಫ್ರಾ ಆರ್ಚರ್ 35ಕ್ಕೆ 3, ಮಾರ್ಕ್ ವುಡ್ 22ಕ್ಕೆ 1).